ಮಂಗಳೂರು(ಬೆಂಗಳೂರು): ಟ್ಯಾಕ್ಸಿ ಹಾಗೂ ಅಗ್ರಿಗೇಟರ್ಸ್ ನಿಯಮದಡಿ ಕಾರ್ಯನಿರ್ವಹಿಸುವ ವಿವಿಧ ಮಾದರಿಯ ಟ್ಯಾಕ್ಸಿಗಳಿಗೆ ಏಕರೂಪ ಪ್ರಯಾಣ ದರ ನಿಗದಿಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಈ ಸಂಬಂಧ ಆದೇಶ ಹೊರಡಿಸಿರುವ ಸಾರಿಗೆ ಇಲಾಖೆ, ಬೆಂಗಳೂರು ಸೇರಿ ರಾಜ್ಯದಲ್ಲಿ ಓಡಾಡುವ ಎಲ್ಲಾ ಟ್ಯಾಕ್ಸಿ, ಸಿಟಿ ಟ್ಯಾಕ್ಸಿ ಇನ್ನಿತರೆ ಟ್ಯಾಕ್ಸಿಗಳ ಹಾಗೂ ಅಗ್ರಿಗೇಟರ್ಸ್ ನಿಯಮಗಳಡಿ ಕಾರ್ಯಾಚರಣೆ ನಡೆಸುತ್ತಿರುವ ವಿವಿಧ ಮಾದರಿಯ ಟ್ಯಾಕ್ಸಿಗಳ ಪ್ರಯಾಣ ದರ ಮತ್ತು ಸಾಗಾಣಿಕೆಗೆ ಏಕರೂಪ ದರ ನಿಗದಿ ಪಡಿಸಲಾಗಿದೆ. ಕೂಡಲೇ ಜಾರಿಗೆ ಬರುವಂತೆ ನಿಗದಿಪಡಿಸಲು ಕರ್ನಾಟಕ ರಾಜ್ಯ ಸಾರಿಗೆ ಪ್ರಾಧಿಕಾರಕ್ಕೆ ಮತ್ತು ಪ್ರಾದೇಶಿಕ ಸಾರಿಗೆ ಪ್ರಾಧಿಕಾರಗಳಿಗೆ ನಿರ್ದೇಶಿಸಲಾಗಿದೆ.
ಆ್ಯಪ್ ಆಧಾರಿತ ಟ್ಯಾಕ್ಸಿಗಳು ಕೆಲ ವೇಳೆ ದುಬಾರಿ ದರ ವಿಧಿಸುತ್ತಿದ್ದರು. ಅದರಲ್ಲೂ ಪೀಕ್ ಅವಧಿಯಲ್ಲಿ ಟ್ಯಾಕ್ಸಿ ದರ ದುಪ್ಪಟ್ಟಾಗುತಿತ್ತು. ಹೀಗಾಗಿ ವಿವಿಧ ಟ್ಯಾಕ್ಸಿಗಳಿಗೆ ಒಂದೇ ಮಾದರಿ ದರ ನಿಗದಿ ಮಾಡುವಂತೆ ಪ್ರಯಾಣಿಕರಿಂದ ಹಲವು ವರ್ಷಗಳಿಂದ ಬೇಡಿಕೆ ಇತ್ತು. ಇದೀಗ ಸರ್ಕಾರ ಏಕ ರೂಪ ದರ ನಿಗದಿಗೊಳಸಿ ಆದೇಶ ಹೊರಡಿಸಿದೆ.
ಟ್ಯಾಕ್ಸಿಗಳ ಪರಿಷ್ಕೃತ ದರಗಳು
ವಾಹನಗಳ ಮಾದರಿ ನಿಗದಿತ ದರ ಪ್ರತಿ ಕಿ.ಮೀ.ಗೆ
- ಹವಾನಿಯಂತ್ರಿತ ರಹಿತ ಟ್ಯಾಕ್ಸಿ 75 ರೂ. (ಕನಿಷ್ಠ 4 ಕಿ.ಮೀ.ವರೆಗೆ) 18 ರೂ.
- ಹವಾನಿಯಂತ್ರಿತ ಟ್ಯಾಕ್ಸಿ 100 ರೂ. (ಕನಿಷ್ಠ 4 ಕಿ.ಮೀ.ವರೆಗೆ) 24 ರೂ.
- ಕಾಯುವಿಕೆ ದರಗಳು ಮೊದಲ 5 ನಿಮಿಷಗಳವರೆಗೆ ಉಚಿತ. ನಂತರದ ಪ್ರತಿ ನಿಮಿಷಕ್ಕೆ 1 ರೂ.,
- ಲಗೇಜ್ ದರಗಳು ಮೊದಲಿನ 120 ಕೆ.ಜಿ.ವರೆಗೆ ಉಚಿತ (ಸೂಟ್ಕೇಸ್, ಬೆಡ್ಡಿಂಗ್, ಇತ್ಯಾದಿ ವೈಯಕ್ತಿಕ ಲಗೇಜ್ಗಳು) ನಂತರದ ಪ್ರತಿ 20 ಕಿ.ಗ್ರಾಂ.ಗೆ 7 ರೂ.
- ರಾತ್ರಿ ದರಗಳು ರಾತ್ರಿ 12 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಸಂಚರಿಸುವ ಟ್ಯಾಕ್ಸಿಗಳಿಗೆ ಪ್ರಯಾಣದ ದರದ ಮೇಲೆ ಶೇ.10ರಷ್ಟು ಹೆಚ್ಚುವರಿ ದರ.
ಈ ದರ ಪರಿಷ್ಕರಣೆ ಪ್ರಯಾಣಿಕರಿಗೆ ಆಘಾತ ನೀಡಿದರೆ, ಟ್ಯಾಕ್ಸಿ ಚಾಲಕರಿಗೆ ಸಿಹಿ ಸುದ್ದಿಯಾಗಿದೆ.
ತೈಲ ದರ ಹೆಚ್ಚಳ ಸೇರಿದಂತೆ ಇತರೆ ಕಾರಣಗಳಿಂದ ಟ್ಯಾಕ್ಸಿ ದರಗಳನ್ನು ಪರಿಷ್ಕರಣೆ ಮಾಡುವಂತೆ ಟ್ಯಾಕ್ಸಿ ಚಾಲಕರು ನಗರದ ಫ್ರೀಡಂಪಾರ್ಕ್ ನಲ್ಲಿ ಅರೆಬೆತ್ತಲೆ ಹೋರಾಟ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಸರಕಾರ ದರ ಪರಿಷ್ಕರಣೆ ನಡೆಸಿದ್ದು, ಸೋಮವಾರ ಮಧ್ಯರಾತ್ರಿಯಿಂದಲೇ ಹೊಸ ದರಗಳು ಜಾರಿಗೆ ಬರಲಿದೆ.