ಮಂಗಳೂರು(ನವದೆಹಲಿ): ಹಿಂದುಳಿದ ರಾಜ್ಯಗಳಿಗೆ ಅನುದಾನ ಕೊಡಬೇಡಿ ಎಂದು ಹೇಳಲ್ಲ. ಆದರೆ ನಮಗೆ ಕೊಡಬೇಕಾದ ತೆರಿಗೆ ಅನುದಾನದಲ್ಲಿ ತಾರತಮ್ಯ ಮಾಡಬೇಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದೇವೆ. ಇದು ಬಿಜೆಪಿ ಸರ್ಕಾರದ ವಿರುದ್ಧದ ಪ್ರತಿಭಟನೆಯಲ್ಲ. ಕೇಂದ್ರ ಸರ್ಕಾರದ ಗಮನ ಸೆಳೆಯುವ ಹೋರಾಟ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಫೆ.07ರಂದು ದೆಹಲಿ ಜಂತರ್ ಮಂತರ್ ನಲ್ಲಿ ಅನುದಾನ ಹಂಚಿಕೆಯಲ್ಲಿ ರಾಜ್ಯಕ್ಕೆ ಆದ ಅನ್ಯಾಯವನ್ನು ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧದ ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದರು.14ನೇ ಹಣಕಾಸು ಆಯೋಗದಲ್ಲಿ ಶೇ.4.71ರಷ್ಟು ರಾಜ್ಯದ ಪಾಲಿದ್ದರೆ, 15ನೇ ಹಣಕಾಸು ಆಯೋಗದಲ್ಲಿ ಶೇ.3.64ಕ್ಕೆ ಇಳಿಕೆಯಾಗಿದೆ. ಇದರಿಂದಾಗಿ ರಾಜ್ಯಕ್ಕೆ 4 ವರ್ಷಗಳಲ್ಲಿ 45 ಸಾವಿರ ಕೋಟಿ ರೂಪಾಯಿ ಅನುದಾನ ಕಡಿತಗೊಂಡಿದೆ. ಪ್ರತಿವರ್ಷ ಕೇಂದ್ರಕ್ಕೆ ರಾಜ್ಯದಿಂದ 4.30 ಲಕ್ಷ ಕೋಟಿ ರೂಪಾಯಿ ತೆರಿಗೆ ಸಂದಾಯವಾಗುತ್ತದೆ. ರಾಜ್ಯಕ್ಕೆ ಸಿಗುತ್ತಿರುವುದು 50,257 ಕೋಟಿ ರೂಪಾಯಿ ಮಾತ್ರ, ಅಂದರೆ 100 ರೂಪಾಯಿಯಲ್ಲಿ ನಮಗೆ 12ರಿಂದ 13 ರೂಪಾಯಿ ಮಾತ್ರ ಸಿಕ್ಕಂತಾಗಿದೆ ಎಂದು ಸಿದ್ದರಾಮಯ್ಯ ಅವರು ಅಂಕಿಅಂಶ ಸಹಿತ ಮಾಹಿತಿ ನೀಡಿದರು.
ಚಿನ್ನದ ಮೊಟ್ಟೆ ಇಡೋ ಕೋಳಿ ಅಂತ ಕತ್ತರಿಸಿದರೇ ಹೇಗೆ? ಎಲ್ಲಾ ಕೊಟ್ಟಿದ್ದೇವೆ ಎಂದು ಬಿಜೆಪಿಯವರು ಹೇಳುತ್ತಾರೆ. ಆದರೆ ನಮ್ಮ ರಾಜ್ಯಕ್ಕೆ ಸಿಗಬೇಕಾಗಿದ್ದ ತೆರಿಗೆ ಪಾಲಿನ ಬಗ್ಗೆ ಬಿಜೆಪಿ ಸಂಸದರು ದಿಕ್ಕು ತಪ್ಪಿಸುವ ಹೇಳಿಕೆ ನೀಡುತ್ತಿದ್ದಾರೆ. ರಾಜ್ಯದಲ್ಲಿ ನಾವು 5 ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ. ಆರ್ಥಿಕತೆಯನ್ನೂ ಸುಭದ್ರವಾಗಿಟ್ಟಿದ್ದೇವೆ. ಹೆಚ್ಚು ತೆರಿಗೆ ಸಂಗ್ರಹಿಸುವ ರಾಜ್ಯಗಳಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದೆ ಎಂದು ಸಿದ್ದರಾಮಯ್ಯ ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಕರ್ನಾಟಕಕ್ಕೆ ಹೆಚ್ಚು ಅನುದಾನ ನೀಡಿದೆ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಆದರೆ ಅಂದಿನ ಬಜೆಟ್ ಗಾತ್ರ, ತೆರಿಗೆ ಸಂಗ್ರಹ, 2018ರ ನಂತರದ ಬಜೆಟ್ ಗಾತ್ರ, ಜಿಎಸ್ ಟಿ ಸಂಗ್ರಹದಲ್ಲಿನ ವ್ಯತ್ಯಾಸವನ್ನು ಯಾಕೆ ಹೇಳುತ್ತಿಲ್ಲ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.