ಮಂಗಳೂರು(ಹೊಸದಿಲ್ಲಿ): ಫೆ.6ರ ಸಂಜೆ ಮುಂಬೈ ಪೊಲೀಸರ ಗಸ್ತು ತಂಡವು ಗೇಟ್ ವೇ ಆಫ್ ಇಂಡಿಯಾ ಬಳಿ ಅರಬ್ಬೀ ಸಮುದ್ರದಲ್ಲಿ ಕುವೈತ್ ನಿಂದ ಬಂದಿದ್ದ ಮೂರು ಮಂದಿ ಪ್ರಯಾಣಿಸುತ್ತಿದ್ದ ದೋಣಿಯೊಂದನ್ನು ತಡೆದಿದ್ದು, ಮುಂಬೈ ಪೊಲೀಸರು ಈ ಕುರಿತು ತನಿಖೆಯನ್ನು ಕೈಗೊಂಡಿದ್ದಾರೆ ಎಂದು ವರದಿಯಾಗಿದೆ.
ದೋಣಿಯಲ್ಲಿ ಪ್ರಯಾಣಿಸುತ್ತಿದ್ದ ಮೂವರು ವ್ಯಕ್ತಿಗಳನ್ನು ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ನಿವಾಸಿಗಳಾದ ಆ್ಯಂಟನಿ, ನಿಡಿಸೊ ಡಿಟೊ ಹಾಗೂ ವಿಜಯ್ ಆ್ಯಂಟನಿ ಎಂದು ಗುರುತಿಸಲಾಗಿದೆ. ಮೀನುಗಾರಿಕೆ ಕಂಪನಿಯೊಂದರಲ್ಲಿ ದುಡಿಯುತ್ತಿದ್ದ ಇವರು ಕಂಪನಿಯ ಮಾಲಕರ ಕಿರುಕುಳ ಹಾಗೂ ದೈಹಿಕ ಹಿಂಸೆಯನ್ನು ಸಹಿಸಿಕೊಳ್ಳುವುದು ಸಾಧ್ಯವಾಗುತ್ತಿರಲಿಲ್ಲ. ಕಠಿಣ ಕೆಲಸದ ವಾತಾವರಣದೊಂದಿಗೆ ಬಾಕಿ ಮೊತ್ತ ಹಾಗೂ ವೇತನವನ್ನು ಪಾವತಿ ಮಾಡದೆ ಇದ್ದುದರಿಂದ ಕಂಪನಿಯ ಮಾಲಕರ ದೋಣಿಯನ್ನು ಅಪಹರಿಸಿದೆವು ಎಂದು ತಪ್ಪೊಪ್ಪಿಗೆ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕಲಾಬಾ ಪೊಲೀಸ್ ಠಾಣೆಯಲ್ಲಿ ಪೊಲೀಸರ ವಶದಲ್ಲಿರುವ ಇವರ ವಿರುದ್ಧ ಯಾವುದೇ ಪ್ರಕರಣವನ್ನು ದಾಖಲಿಸಿಕೊಂಡಿಲ್ಲ. ಸದ್ಯ, ಕುವೈತ್ ದೋಣಿಯನ್ನು ಗೇಟ್ ವೇ ಆಫ್ ಇಂಡಿಯಾ ಬಳಿ ಸುರಕ್ಷಿತವಾಗಿ ಲಂಗರು ಹಾಕಲಾಗಿದ್ದು, ಅರಬ್ಬೀ ಸಮುದ್ರದಿಂದ ಭಾರತದ ಜಲಪ್ರದೇಶಕ್ಕೆ ಈ ದೋಣಿ ಪ್ರವೇಶಿಸಿರುವ ಸನ್ನಿವೇಶಗಳ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.