ಫೇಸ್‌ಬುಕ್ ಲೈವ್‌ನಲ್ಲೇ ಉದ್ಧವ್ ಠಾಕ್ರೆ ಗುಂಪಿನ ಮುಖಂಡನ ಗುಂಡಿಕ್ಕಿ ಹತ್ಯೆ-ಆತ್ಮಹತ್ಯೆಗೆ ಶರಣಾದ ಹತ್ಯಾರ

ಮುಂಬೈ: ಉದ್ಧವ್ ಠಾಕ್ರೆ ಗುಂಪಿನ ಶಿವಸೇನಾ ಮುಖಂಡ ಅಭಿಷೇಕ್ ಘೋಸಲ್ಕರ್ ಅವರನ್ನು ಫೆ.8ರಂದು ಮುಂಬೈನಲ್ಲಿ ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಮೌರಿಸ್ ನೊರೊನ್ಹಾ ಎಂಬಾತ ಫೇಸ್‌ಬುಕ್ ಲೈವ್‌ ವೇಳೆ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ಬಳಿಕ ಆತ ಕೂಡ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಫೇಸ್‌ಬುಕ್ ಲೈವ್‌ ವೇಳೆ ಅಭಿಷೇಕ್ ಹಾಗೂ ಮೌರಿಸ್ ಒಟ್ಟಿಗೆ ಮಾತನಾಡುತ್ತಿದ್ದರು. ಸ್ವಲ್ಪ ಸಮಯದ ನಂತರ ಮೌರಿಸ್ ಎದ್ದು ಹೋಗುತ್ತಾನೆ. ಈ ವೇಳೆ ಅಭಿಷೇಕ್ ಮೇಲೆ ಮೌರಿಸ್ ಏಕಾಏಕಿ ಗುಂಡು ಹಾರಿಸಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ಅಭಿಷೇಕ್ ಅವರಿಗೆ ನಾಲ್ಕು ಗುಂಡುಗಳು ತಗುಲಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ. ಅಭಿಷೇಕ್ ಶಿವಸೇನಾದ ಮಾಜಿ ಶಾಸಕ ವಿನೋದ್ ಘೋಸಲ್ಕರ್ ಅವರ ಪುತ್ರ. ಇವರು ಮಾಜಿ ಕಾರ್ಪೊರೇಟರ್ ಕೂಡ ಹೌದು. ಹಿಂದಿನಿಂದಲೂ ಅಭಿಷೇಕ್ ಹಾಗೂ ಮೌರಿಸ್ ನಡುವೆ ವೈಯಕ್ತಿಕ ದ್ವೇಷವಿತ್ತು. ಆದರೆ ಇತ್ತೀಚೆಗೆ ಹೊಂದಾಣಿಕೆ ಮಾಡಿಕೊಂಡಿದ್ದರು. ಹೀಗಾಗಿ ಅಭಿಷೇಕ್ ಅವರನ್ನು ಮೌರಿಸ್ ತನ್ನ ಕಚೇರಿಗೆ ಆಹ್ವಾನಿಸಿದ್ದ. ತಾನು ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಅಭಿಷೇಕ್‌ನನ್ನು ಹತ್ಯೆ ಮಾಡಿದ್ದಾನೆ. ಇಡೀ ಈ ಘಟನೆಯನ್ನು ಫೇಸ್‌ಬುಕ್​ನಲ್ಲಿ ಲೈವ್ ಸ್ಟ್ರೀಮ್ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇತ್ತೀಚೆಗೆ ಉಲ್ಲಾಸ ನಗರದ ಪೊಲೀಸ್ ಠಾಣೆಯೊಳಗೆ ಏಕನಾಥ ಶಿಂದೆ ಬಣದ ನಾಯಕನ ಮೇಲೆ ಬಿಜೆಪಿ ಶಾಸಕರೊಬ್ಬರು ಗುಂಡು ಹಾರಿಸಿದ್ದ ಘಟನೆ ನಡೆದಿತ್ತು. ಇದು ಪೊಲೀಸ್ ಠಾಣೆಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಇದಾದ ಕೆಲವೇ ದಿನಗಳಲ್ಲಿ ಈ ಘಟನೆ ನಡೆದಿದೆ. ಘಟನೆಯ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಶಿಂದೆ ಹೇಳಿದ್ದಾರೆ. ಮತ್ತೊಂದೆಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಮತ್ತು ಗೃಹ ಸಚಿವ ದೇವೇಂದ್ರ ಫಡಣವೀಸ್ ರಾಜೀನಾಮೆ ನೀಡಬೇಕು ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ಆಗ್ರಹಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಇದು ಇತ್ತೀಚಿನ ಗುಂಡಿನ ದಾಳಿಯಂತಹ ಘಟನೆಗಳಿಂದ ಸ್ಪಷ್ಟವಾಗಿದೆ ಎಂದು ಮಾಜಿ ಸಚಿವ ಆದಿತ್ಯ ಠಾಕ್ರೆ ಹೇಳಿದ್ದಾರೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here