ಮಂಗಳೂರು(ಸೌದಿ ಅರೇಬಿಯಾ): ಅನಿವಾಸಿ ಕನ್ನಡಿಗರು ಎದುರಿಸುವ ನಾನಾ ಸಮಸ್ಯೆಗಳ ಬಗ್ಗೆ ಚರ್ಚಿಸಲು ರಾಜ್ಯ ವಿಧಾನಸಭೆಯ ಮುಂದಿನ ಅಧಿವೇಶನದಲ್ಲಿ ಅವಕಾಶ ಕಲ್ಪಿಸಲಾಗುವುದು. ಅದಕ್ಕಾಗಿ ಅನಿವಾಸಿಗರಿಗಾಗಿ ಒಂದು ದಿನವನ್ನು ‘ಎನ್ನಾರೈ ದಿನ’ ಎಂದು ಘೋಷಿಸಿ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು ಎಂದು ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಹೇಳಿದ್ದಾರೆ.
ಕನ್ನಡ ಸಂಸ್ಕೃತಿಯ ವೈಭವವನ್ನು ಹರಡುವ ಮತ್ತು ಅನಿವಾಸಿ ಕನ್ನಡಿಗರನ್ನು ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಯೆಡೆಗೆ ಕರೆದೊಯ್ಯುವ ಉದ್ದೇಶದಿಂದ ಹೃದಯವಾಣಿ ಪತ್ರಿಕೆ ಮತ್ತು ಅನಿವಾಸಿ ಕನ್ನಡಿಗರ ಸ್ವಾಗತ ಸಮಿತಿಯ ಜಂಟಿ ಆಶ್ರಯದಲ್ಲಿ ಸೌದಿ ಅರೇಬಿಯಾದ ದಮಾಮ್ನ ಸಫ್ವಾದಲ್ಲಿ ಫೆ.8ರಂದು ಆಯೋಜಿಸಿದ್ದ 17ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕನ್ನಡ ಭಾಷೆ, ಸಂಸ್ಕೃತಿಯನ್ನು ಮುಂದಿನ ಯುವ ಪೀಳಿಗೆಗೆ ಪರಿಚಯಿಸುವ ಕೆಲಸವನ್ನು ಸಮ್ಮೇಳನದ ಆಯೋಜಕರು ಇಲ್ಲಿ ಮಾಡಿರುವುದು ಶ್ಲಾಘನೀಯ. ಇದಕ್ಕೆ ಈ ನೆಲದ ಮಣ್ಣಿನಲ್ಲಿ ಅವಕಾಶ ಮಾಡಿಕೊಟ್ಟ ಸೌದಿ ಅರೇಬಿಯಾದ ರಾಜ ಮತ್ತು ರಾಜ ಮನೆತನಕ್ಕೆ ಕನ್ನಡಿಗರು ಅಭಾರಿಯಾಗಬೇಕಿದೆ ಎಂದು ಖಾದರ್ ಹೇಳಿದರು.
ಸೌದಿಯಲ್ಲಿ ಒಂದು ಕನ್ನಡ ನಾಡೇ ಸೃಷ್ಟಿಯಾಗಿದೆ ಎಂಬ ಭಾವ ಮೂಡುತ್ತಿವೆ. ಯಾವುದೇ ಭಾಷೆಯಾಗಲಿ, ಅದು ಕೇವಲ ಭಾಷೆಗೆ ಸೀಮಿತವಲ್ಲ. ಆ ಭಾಷೆಯನ್ನಾಡುವ ಜನರ ಆಚಾರ-ವಿಚಾರ, ಸಂಸ್ಕೃತಿಯೂ ಆಗಿದೆ. ಸೌದಿ ಅರೇಬಿಯಾದ ನೆಲದಲ್ಲಿ ಅನಿವಾಸಿ ಕನ್ನಡಿಗರು ಭಾಷೆ, ಸಾಂಸ್ಕೃತಿಕ ಚಟುವಟಿಕೆಗೆ ದೊಡ್ಡ ಮಟ್ಟದ ಪೋತ್ಸಾಹವನ್ನು ನೀಡುತ್ತಿರುವುದು ಅಭಿನಂದನೀಯ ಎಂದು ಯು.ಟಿ.ಖಾದರ್ ಹೇಳಿದರು. ಸಮ್ಮೇಳನದಿಂದ ಕನ್ನಡ, ಸಂಸ್ಕೃತಿಗೆ ಬಹಳ ದೊಡ್ಡ ಉತ್ತೇಜನ ನೀಡಿದಂತಾಗುತ್ತದೆ. ಈ ಸಮ್ಮೇಳನದ ಹಿಂದಿರುವ ರೂವಾರಿಗಳಾದ ಝಕರಿಯಾ ಜೋಕಟ್ಟೆ, ಶೇಖ್ ಕರ್ನಿರೆ, ಸತೀಶ್ ಬಜಾಲ್ ಮತ್ತಿತರರು ಅಭಿನಂದನೆಗೆ ಅರ್ಹರಾಗಿದ್ದಾರೆ ಎಂದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಸಾಹಿತಿ ಪ್ರೊ.ಎಸ್ಜಿ ಸಿದ್ದರಾಮಯ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ಇವತ್ತು ವಿಶ್ವ ಕನ್ನಡವಾಗಿದೆ. ಹೊರದೇಶಗಳಿಗೆ ಕನ್ನಡ ತೆಗೆದು ಕೊಂಡು ಹೋದವರು ತುಳುವರು. ಹೊರ ರಾಜ್ಯಗಳಲ್ಲಿ, ಹೊರ ದೇಶಗಳಲ್ಲಿ ಕನ್ನಡ ಕಟ್ಟಿದವರು ತುಳುವರು. ತುಳು ಕನ್ನಡದ ಸೋದರ ಭಾಷೆ. ತುಳುವರ ಎಲ್ಲಿ ಹೋದರೂ ಮೊದಲು ಕನ್ನಡ ಸಂಘಟನೆ ಕಟ್ಟುತ್ತಾರೆ ಎಂದು ಸಾಹಿತಿ ಪ್ರೊ.ಎಸ್ಜಿ ಸಿದ್ದರಾಮಯ್ಯ ಹೇಳಿದರು. ತಮಿಳುನಾಡಿನಲ್ಲಿ ಯಾವ ಸಿಲೆಬಸ್ ಆಗಿದ್ರೂ ಹತ್ತನೇ ತರಗತಿಯವರೆಗೆ ಪ್ರಥಮ ಭಾಷೆಯಾಗಿ ತಮಿಳು ಭಾಷೆ ಕಲಿಯಬೇಕು. ಬೇರೆ ಯಾವುದೇ ದ್ರಾವಿಡ ಭಾಷೆ ಆ ರೀತಿ ನಿಯಮ ಮಾಡಿಲ್ಲ. ಬೆಂಗಳೂರಿನಲ್ಲಿ ಕೇವಲ 20% ಮಕ್ಕಳು ಕನ್ನಡ ಕಲಿಯುತ್ತಿದ್ದಾರೆ. ಕನ್ನಡ ಮಾತಾಡುವವರು ಬಗ್ಗೆ ಕೀಳರಿಮೆ ಇದೆ. ಇಂತಹ ಸಂದರ್ಭದಲ್ಲಿ ಕನ್ನಡವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಈಗ ಮೊದಲ ಬಾರಿ ಸೌದಿಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೀತಿದೆ. ಇದರ ಹಿಂದೆ ಸತೀಶ್ ಅವರು ಬಹಳಷ್ಟು ಕೆಲಸ ಮಾಡಿದ್ದಾರೆ. ಏನಾದರೂ ಆಗು ಮೊದಲು ಕನ್ನಡಿಗನಾಗು ಎಂಬುದನ್ನು ನಾವು ತಿಳಿಯಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ ಅವರನ್ನು ಗೌರವಿಸಲಾಯಿತು. ಪೌರಾಡಳಿತ ಮತ್ತು ಹಚ್ ಖಾತೆ ಸಚಿವ ರಹೀಂ ಖಾನ್, ಅನಿವಾಸಿ ಕನ್ನಡಿಗರ ಕೋಶದ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ, ಶಾಸಕರಾದ ಅಶೋಕ್ ಕುಮಾರ್ ರೈ, ರಾಜೀವ್ ಗಾಂಧಿ ಆರೋಗ್ಯ ವಿವಿ ಸಿಂಡಿಕೇಟ್ ಸದಸ್ಯ ಡಾ. ಯು.ಟಿ. ಇಫ್ತಿಕಾರ್ ಅಲಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್., ಉದ್ಯಮಿಗಳಾದ ಝಕರಿಯಾ ಜೋಕಟ್ಟೆ, ಎಕ್ಸ್ಪರ್ಟೈಸ್ ಶೇಖ್ ಕರ್ನಿರೆ, ಮುಹಮ್ಮದ್ ಅಶ್ರಫ್ ಕರ್ನಿರೆ, ಇಬ್ರಾಹೀಂ ಹುಸೇನ್ ಪಡುಬಿದ್ರೆ, ಯೂನುಸ್ ಕಾಝಿಯಾ, ಯೋಗೀಶ್ ಡಿ. ಪೂಜಾರಿ, ಅಬ್ದುಲ್ ನಿಶಾನ್, ವೈಟ್ಸ್ಟೋನ್ ಮುಹಮ್ಮದ್ ಶರೀಫ್ ಬೋಳಾರ, ಸುದೇಶ್ ಹೆಗ್ಡೆ, ರಾಜ್ ಕುಮಾರ್ ಬಹರೈನ್, ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ರಫೀಕ್ ಸೂರಿಂಜೆ ಮತ್ತಿತರರು ಪಾಲ್ಗೊಂಡಿದ್ದರು. ಸ್ವಾಗತ ಸಮಿತಿಯ ಅಧ್ಯಕ್ಷ ಸತೀಶ್ ಕುಮಾರ್ ಬಜಾಲ್ ಸ್ವಾಗತಿಸಿದರು. ಸಮ್ಮೇಳನ ಸಮಿತಿಯ ಸ್ಥಾಪಕಾಧ್ಯಕ್ಷ ಕೆ.ಪಿ. ಮಂಜುನಾಥ್ ಸಾಗರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಹಿಲ್ ಜಹೀರ್, ನಾಗರಾಜ್ ಬಜಾಲ್, ಡಾ. ಭವಾನಿ ಕಾರ್ಯಕ್ರಮ ನಿರೂಪಿಸಿದರು.