ಮಂಗಳೂರು(ಪುತ್ತೂರು): ಉದ್ಯೋಗ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚನೆ ಮಾಡಿದ ಪ್ರಕರಣವನ್ನು ಭೇಧಿಸಿರುವ ಪುತ್ತೂರು ಗ್ರಾಮಾಂತರ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ತುಮಕೂರಿನ ಚಿಕ್ಕನಾಯಕನಹಳ್ಳಿಯ ಸುಮಿತ್ರ ಬಾಯಿ ಸಿ.ಆರ್(23), ಹಾಸನದ ಹಳಸಿನಹಳ್ಳಿಯ ಸೌಂದರ್ಯ ಎಂ.ಎಸ್(21), ತುಮಕೂರಿನ ಚಿಕ್ಕನಾಯಕನಹಳ್ಳಿಯ ರಾಹುಲ್ ಕುಮಾರ್ ನಾಯ್ಕ (19) ಎಂದು ಗುರುತಿಸಲಾಗಿದೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಕಚೇರಿ ಕೆಲಸ ಖಾಲಿ ಇದೆ. ನಿರುದ್ಯೋಗಿಗಳಿಗೆ ಬಂದ ದಿನವೇ ಕೆಲಸ ಸಿಗುತ್ತದೆ ಎಂಬುದಾಗಿ ಜಾಹೀರಾತು ನೀಡಿ, ಅಮಾಯಕರನ್ನು ವಂಚಸಲಾಗುತ್ತಿತ್ತು. ಪುತ್ತೂರು ತಾಲೂಕು ಆರ್ಯಾಪು ಗ್ರಾಮದ ಒಳತ್ತಡ್ಕ ನಿವಾಸಿ ಯುವತಿಯೊಬ್ಬರು ಇವರಿಂದ ವಂಚನೆಗೆ ಒಳಗಾಗಿದ್ದು 2,25,001 ರೂ. ಕಳೆದುಕೊಂಡಿದ್ದಾರೆ. ಜಾಹಿರಾತು ನೋಡಿ ಅದರಲ್ಲಿ ನಮೂದಿಸಿದ ಫೋನ್ ನಂಬರ್ ಗೆ ಕರೆ ಮಾಡಿದಾಗ ಉದ್ಯೋಗದ ಬಗ್ಗೆ ಸುಳ್ಳು ಮಾಹಿತಿ ನೀಡಿ, ಕೆಲಸಕ್ಕೆ ಸೇರ ಬಯಸುವುದಾದರೆ ಫೀಸ್ ಕೊಡುವಂತೆ ತಿಳಿಸಿ ಕಳೆದ ಸುಮಾರು 7 ತಿಂಗಳಿನಿಂದ ಆನ್ ಲೈನ್ ಮೂಲಕ ಹಣವನ್ನು ವರ್ಗಾಯಿಸಿ ಪಾವತಿ ಮಾಡುವಂತೆ ತಿಳಿಸಿದ್ದರು. ಅದರಂತೆ ಯುವತಿಯಿಂದ ಗೂಗಲ್ ಪೇ ಮುಖಾಂತರ ಇದುವರೆಗೆ ಸುಮಾರು 2,25,001 ರೂ. ಹಣವನ್ನು ಆರೋಪಿಗಳು ತಮ್ಮ ಖಾತೆಗೆ ಪಾವತಿ ಮಾಡಿಸಿಕೊಂಡಿದ್ದರು. ಪದೇ ಪದೇ ಕರೆ ಮಾಡಿ ಇನ್ನಷ್ಟು ಹಣಕ್ಕೆ ಬೇಡಿಕೆ ಸಲ್ಲಿಸಿ ಕೆಲಸ ಕೊಡುವುದಾಗಿ ನಂಬಿಸಿ ಯಾವುದೇ ಉದ್ಯೋಗ ನೀಡದೆ ಇದ್ದಾಗ ಯುವತಿ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ.ಬಿ ರಿಷ್ಯಂತ್, ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಧರ್ಮಪ್ಪ ಎಂ.ಎನ್ ಮತ್ತು ರಾಜೇಂದ್ರ ಡಿ.ಎನ್. ಅವರ ನಿರ್ದೇಶನದಲ್ಲಿ ಪುತ್ತೂರು ಪೊಲೀಸ್ ಉಪಾಧೀಕ್ಷಕ ಡಾ. ಅರುಣ್ ನಾಗೇಗೌಡ ಅವರ ಮಾರ್ಗದರ್ಶನದಲ್ಲಿ, ಪುತ್ತೂರು ಗ್ರಾಮಾಂತರ ಠಾಣಾ ಪ್ರಭಾರ ಪೊಲೀಸ್ ನಿರೀಕ್ಷಕ ರವಿ ಬಿ.ಎಸ್ ಅವರ ಆದೇಶದಂತೆ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸ್ ಉಪ ನಿರೀಕ್ಷಕ ಜಂಬುರಾಜ್ ಬಿ ಮಹಾಜನ್ ನೇತೃತ್ವದಲ್ಲಿ ಎಎಸ್ಐ ಶ್ರೀದರ್ ರೈ, ಸಿಬ್ಬಂದಿಗಳಾದ ಮಧು ಕೆ.ಎನ್., ಸತೀಶ್ ಎನ್. ಗಿರೀಶ ಕೆ., ಶಿವಪುತ್ರಮ್ಮ, ಹೆಚ್.ಜಿ. ಹಕೀಂ ಮತ್ತು ಗಣಕ ಯಂತ್ರ ವಿಭಾಗದ ದಿವಾಕರ್, ಸಂಪತ್ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.