ಕರ್ನಾಟಕದ ಹಿರಿಯ ಐಪಿಎಸ್ ಅಧಿಕಾರಿ ಪ್ರತಾಪ್​ ರೆಡ್ಡಿ ರಾಜೀನಾಮೆ

ಮಂಗಳೂರು: ಕರ್ನಾಟಕದ ಹಿರಿಯ ಐಪಿಎಸ್ ಅಧಿಕಾರಿ ಪ್ರತಾಪ್ ರೆಡ್ಡಿ ಅವರು ಸ್ವಯಂ ನಿವೃತ್ತಿ ಕೋರಿ ಸರಕಾರಕ್ಕೆ ಪತ್ರ ಬರೆದಿದ್ದಾರೆ. ಪ್ರಸ್ತುತ ಕರ್ನಾಟಕದ ಆಂತರಿಕ ಭದ್ರತೆ ವಿಭಾಗದ ಡಿಜಿಪಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದ ಪ್ರತಾಪ್​ ರೆಡ್ಡಿ ಅವರ ನಿವೃತ್ತಿಗೆ ಎರಡು ತಿಂಗಳು ಬಾಕಿ ಇರುವಾಗಲೇ ವೈಯಕ್ತಿಕ ಕಾರಣವನ್ನು ನೀಡಿ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ಇದು ರಾಜ್ಯ ಪೊಲೀಸ್​ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಏಪ್ರಿಲ್ 30ಕ್ಕೆ ಬಿಡುಗಡೆ ಮಾಡುವಂತೆ ಸರಕಾರಕ್ಕೆ ಮನವಿ ಮಾಡಿದ್ದಾರೆ.

ಹಿರಿಯ ಐಪಿಎಸ್​ ಅಧಿಕಾರಿ ಸಿ. ಹೆಚ್​ ಪ್ರತಾಪ್​ ರೆಡ್ಡಿ ಅವರು ಜು.1 1964ರಲ್ಲಿ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ಜನಸಿದರು. ಪ್ರತಾಪ್​ ರೆಡ್ಡಿ ಬಿ.ಟೆಕ್​ ಪದವೀಧರರಾಗಿದ್ದು, 1991ರಲ್ಲಿ ಕರ್ನಾಟಕ ಕೆಡರ್​ನ ಐಪಿಎಸ್​ ಅಧಿಕಾರಿಯಾಗಿ ಹಾಸನ ಜಿಲ್ಲೆಯ ಸಹಾಯಕ ಸೂಪರಿಟೆಂಡೆಂಟ್​ ಆಗಿ ಕೆಲಸ ಆರಂಭಿಸಿದ್ದರು. ಉತ್ತರ ಕರ್ನಾಟಕ ಭಾಗದಲ್ಲಿ ಎಸ್ಪಿಯಾಗಿ ಹಲವಾರು ಮಹತ್ವದ ಪ್ರಕರಣಗಳನ್ನು ಭೇದಿಸಿದ್ದಾರೆ. ಪ್ರತಾಪ್​ ರೆಡ್ಡಿ ಅವರು ಸಿಬಿಐನ ಭ್ರಷ್ಟಾಚಾರ ನಿಗ್ರಹ ದಳದ ಮುಂಬೈ ಮತ್ತು ಬೆಂಗಳೂರು ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. ಬ್ಯಾಂಕಿಂಗ್​ ಮತ್ತು ಸೈಬರ್​ ಸೆಕ್ಯುರಿಟಿ ವಿಭಾಗದ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚುವ ಮೂಲಕ ರಾಷ್ಟ್ರೀಯ ಮಟ್ಟದಲ್ಲಿಯೂ ಗುರುತಿಸಿಕೊಂಡಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿಯಾಗಿದ್ದ ಪ್ರತಾಪ್​ ರೆಡ್ಡಿ ಅವರನ್ನು ಕಮಲ್​ ಪಂತ ಅವರ ಬಳಿಕ ಬೆಂಗಳೂರು ನಗರ ಪೊಲೀಸ್​ ಆಯುಕ್ತರಾಗಿ ನೇಮಕ ಮಾಡಲಾಗಿತ್ತು. ರಾಜ್ಯದ ಕೂಲ್​ ಐಪಿಎಸ್​ ಅಧಿಕಾರಿಗಳಲ್ಲಿ ಪ್ರತಾಪ್​ ರೆಡ್ಡಿ ಅವರು ಸಹ ಒಬ್ಬರು. ಪ್ರತಾಪ್​ ರೆಡ್ಡಿ ಅವರು ರಾಷ್ಟ್ರಪತಿ ಪದಕ ಮತ್ತು ಮುಖ್ಯಮಂತ್ರಿ ಪದಕ ಪಡೆದಿದ್ದಾರೆ.

LEAVE A REPLY

Please enter your comment!
Please enter your name here