ಮಂಗಳೂರು(ನವದೆಹಲಿ): ಫೆ.18 ರಿಂದ ಮಾರ್ಚ್ 9 ರವರೆಗೆ ವಿಶ್ವ ಸುಂದರಿ ಸ್ಪರ್ಧೆ ನಡೆಯಲಿದ್ದು, ಪ್ರತಿಷ್ಠಿತ ವಿಶ್ವ ಸುಂದರಿ ಸ್ಪರ್ಧೆಗೆ ಭಾರತ ವೇದಿಕೆಯಾಗಲಿದೆ. 28 ವರ್ಷಗಳ ಸುದೀರ್ಘ ಅಂತರದ ಬಳಿಕ ಭಾರತ ಈ ಸಮಾರಂಭಕ್ಕೆ ಸಾಕ್ಷಿಯಾಗಲಿದೆ. ಅಂತಾರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯ 71ನೇ ಆವೃತ್ತಿ ಭಾರತದಲ್ಲಿ ಫೆಬ್ರವರಿ 18 ರಿಂದ ಮಾರ್ಚ್ 9ರ ವರೆಗೆ ನಡೆಯಲಿದೆ.
ಫೆಬ್ರವರಿ 20 ರಂದು ನವದೆಹಲಿಯಲ್ಲಿ ಭಾರತೀಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಐಟಿಡಿಸಿ) ಆಯೋಜಿಸಿರುವ “ದಿ ಓಪನಿಂಗ್ ಸೆರಮನಿ” ಮತ್ತು “ಇಂಡಿಯಾ ವೆಲ್ಕಮ್ಸ್ ದಿ ವರ್ಲ್ಡ್ ಗಾಲಾ” ಮೂಲಕ ಈವೆಂಟ್ ಪ್ರಾರಂಭವಾಗಲಿದೆ. ಮಾರ್ಚ್ 9ರಂದು ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ನಲ್ಲಿ ಮಿಸ್ ವರ್ಲ್ಡ್ನ ಗ್ರ್ಯಾಂಡ್ ಫಿನಾಲೆ ಜರುಗಲಿದ್ದು, ವಿಶ್ವದಾದ್ಯಂತ ಪ್ರಸಾರವಾಗಲಿದೆ. ನವದೆಹಲಿಯ ಭಾರತ್ ಮಂಡಪಂ ಸೇರಿದಂತೆ ದೇಶದ ವಿವಿಧ ಪ್ರಮುಖ ಸ್ಥಳಗಳಲ್ಲಿ ನಡೆಯಲಿರುವ ಈ ಸ್ಪರ್ಧೆಯಲ್ಲಿ ಜಗತ್ತಿನ ವಿವಿಧ ದೇಶಗಳ 120 ಸ್ಪರ್ಧಿಗಳು ವಿವಿಧ ಸ್ಪರ್ಧೆಗಳಲ್ಲಿ ಸ್ಪರ್ಧಿಸಲಿದ್ದಾರೆ. ಇತ್ತೀಚೆಗೆ, ಮಾಜಿ ವಿಶ್ವಸುಂದರಿಯರಾದ ಟೋನಿ ಆ್ಯನ್ ಸಿಂಗ್ (ಜಮೈಕಾ), ವನೆಸ್ಸಾ ಪೊನ್ಸ್ ಡಿ ಲಿಯಾನ್ (ಮೆಕ್ಸಿಕೊ), ಮಾನುಷಿ ಛಿಲ್ಲರ್ (ಭಾರತ) ಮತ್ತು ಸ್ಟೆಫನಿ ಡೆಲ್ ವಲ್ಲೆ (ಪೋರ್ಟೊರಿಕೋ) ಅವರೊಂದಿಗೆ ಪ್ರಸ್ತುತ ವಿಶ್ವ ಸುಂದರಿ (2023) – ಪೋಲೆಂಡ್ನ ಕರೋಲಿನಾ ಬಿಲಾವ್ಸ್ಕಾ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ, ವಿಶ್ವ ಸುಂದರಿ ಸ್ಪರ್ಧೆ -2024 ಬಗ್ಗೆ ಘೋಷಿಸಿದ್ದರು. ಮಿಸ್ ವರ್ಲ್ಡ್ ಆರ್ಗನೈಸೇಶನ್ನ ಅಧ್ಯಕ್ಷೆ ಮತ್ತು ಸಿಇಒ ಜೂಲಿಯಾ ಮೊರ್ಲೆ, ಭಾರತದಲ್ಲಿ ಸ್ಪರ್ಧೆ ಆಯೋಜಿಸುವ ಮಹತ್ವವನ್ನು ಒತ್ತಿಹೇಳಿದರು. ಇದಕ್ಕೆ ಕಾರಣರಾದ ಜಮೀಲ್ ಸೈದಿ ಅವರ ಪ್ರಯತ್ನವನ್ನು ಶ್ಲಾಘಿಸಿದರು.
“ಭಾರತದ ಮೇಲಿನ ನನ್ನ ಪ್ರೀತಿ ಈಗ ರಹಸ್ಯವಾಗಿ ಉಳಿದಿಲ್ಲ. ಎಲ್ಲರಿಗೂ ತಿಳಿದಿರುವ ವಿಚಾರ. ಇಲ್ಲಿ 71ನೇ ವಿಶ್ವ ಸುಂದರಿ ಸ್ಪರ್ಧೆ ನಡೆಸುತ್ತಿರುವುದು ನನಗೆ ಬಹಳ ಖುಷಿ ಕೊಟ್ಟಿದೆ. ಇದಕ್ಕೆ ಕಾರಣರಾದ ಜಮೀಲ್ ಸೈದಿ ಅವರಿಗೆ ಬಹಳ ಧನ್ಯವಾದಗಳು. 71ನೇ ಸ್ಪರ್ಧೆಗೆ ನಾವು ಅತ್ಯುತ್ತಮ ತಂಡವನ್ನು ಒಟ್ಟುಗೂಡಿಸಿದ್ದೇವೆ” ಎಂದು ಜೂಲಿಯಾ ಮೊರ್ಲೆ ಹೇಳಿದ್ದಾರೆ. ಭಾರತ ಕೊನೆಯ ಬಾರಿ 1996ರಲ್ಲಿ ವಿಶ್ವ ಸುಂದರಿ ಸ್ಪರ್ಧೆಯನ್ನು ಆಯೋಜಿಸಿತ್ತು. ಕೊನೆಯದಾಗಿ – 2017ರಲ್ಲಿ ಭಾರತದ ಮಾನುಷಿ ಛಿಲ್ಲರ್ ವಿಜೇತರಾಗಿದ್ದಾರೆ. ಹಿಂದಿನ ವರ್ಷಗಳಲ್ಲಿ ರೀಟಾ ಫರಿಯಾ ಪೊವೆಲ್, ಐಶ್ವರ್ಯಾ ರೈ ಬಚ್ಚನ್, ಡಯಾನಾ ಹೇಡನ್, ಯುಕ್ತಾ ಮುಖೆ ಮತ್ತು ಪ್ರಿಯಾಂಕಾ ಚೋಪ್ರಾ ಜೊನಾಸ್ ವಿಜೇತರಾಗಿ ಹೊರಹೊಮ್ಮಿದ್ದರು.
ಭಾರತದ ವಿಶ್ವಸುಂದರಿಯರು:
ರೀಟಾ ಫರಿಯಾ ಪೊವೆಲ್ (1966).
ಐಶ್ವರ್ಯಾ ರೈ ಬಚ್ಚನ್ (1994).
ಡಯಾನಾ ಹೇಡನ್ (1997).
ಯುಕ್ತಾ ಮುಖೆ (1999).
ಪ್ರಿಯಾಂಕಾ ಚೋಪ್ರಾ (2000).
ಮಾನುಷಿ ಚಿಲ್ಲರ್ (2017).