ಉದ್ಯಮಿ ಬಿ ಆರ್ ಶೆಟ್ಟಿ ವಿರುದ್ಧ ಲುಕೌಟ್ ನೋಟೀಸ್ ಸಸ್ಪೆಂಡ್ ಮಾಡಿದ ಕರ್ನಾಟಕ ಹೈಕೋರ್ಟ್

ಮಂಗಳೂರು(ಉಡುಪಿ): ಉಡುಪಿ ಮೂಲದ ದುಬೈ ಉದ್ಯಮಿ ಹಾಗೂ ಎನ್‌ಎಂಸಿ ಹೆಲ್ತ್ ಸಂಸ್ಥಾಪಕ ಬಿ ಆರ್ ಶೆಟ್ಟಿ ವಿರುದ್ಧ ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡ ಮನವಿಯ ಮೇರೆಗೆ ವಲಸೆ ಅಧಿಕಾರಿಗಳು ಹೊರಡಿಸಿದ್ದ ಲುಕ್ ಔಟ್ ಸುತ್ತೋಲೆಯನ್ನು ಕರ್ನಾಟಕ ಹೈಕೋರ್ಟ್ ಅಮಾನತ್ತಿನಲ್ಲಿಟ್ಟಿದೆ.

ವೈದ್ಯಕೀಯ ಚಿಕಿತ್ಸೆ ಪಡೆಯಲು ಅಬುದಾಬಿಗೆ ಪ್ರಯಾಣ ಮಾಡಲು ಅರ್ಜಿದಾರ ಬಿ ಆರ್ ಶೆಟ್ಟಿ ಅವರಿಗೆ ಷರತ್ತಿನ ಮೇಲೆ ಹೈಕೋರ್ಟ್ ನ್ಯಾಯ ಪೀಠ ಅನುಮತಿ ನೀಡಿದೆ. ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿಂದ ಏಕ ಸದಸ್ಯ ನ್ಯಾಯ ಪೀಠ ಈ ಆದೇಶ ಹೊರಡಿಸಿದೆ. ತಮ್ಮ ವಿರುದ್ಧ ಇಮಿಗ್ರೇಶನ್ ಅಧಿಕಾರಿಗಳು ಹೊರಡಿಸಿದ್ದ ಲುಕ್ ಔಟ್ ನೋಟಿಸನ್ನು ಪ್ರಶ್ನಿಸಿ ಬಿ ಆರ್ ಶೆಟ್ಟಿ ಕರ್ನಾಟಕ ಹೈಕೋರ್ಟ್ ನ ಮೊರೆ ಹೋಗಿದ್ದರು. ಅರ್ಜಿದಾರರು ತಮ್ಮ ಮಾಲಕತ್ವದಲ್ಲಿ ಇರುವ ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿನ ಆಸ್ತಿಗಳನ್ನು ಮಾರಾಟ ಮಾಡುವುದಿಲ್ಲ ಎಂದು ಹಸಿದಾವಿತ್ ಸಲ್ಲಿಸಬೇಕು. ಕಾನೂನು ಪ್ರಕ್ರಿಯೆಗಳಿಗೆ ಅಗತ್ಯವಿದ್ದಲ್ಲಿ ಭಾರತಕ್ಕೆ ಮರಳಬೇಕು. ಅಧಿಕಾರಿಗಳ ಪೂರ್ವ ಅನುಮತಿ ಇಲ್ಲದೆ ವಿದೇಶಕ್ಕೆ ತೆರಳುವುದಿಲ್ಲ ಎಂದು ಅಫಿದಾವಿತ್ ಮೂಲಕ ಪ್ರಮಾಣಿಕೃತ ಹೇಳಿಕೆ ಸಲ್ಲಿಸಬೇಕು ಎಂಬ ಷರತ್ತನ್ನು ನ್ಯಾಯಪೀಠ ವಿಧಿಸಿದೆ.

ಪ್ರತಿವಾದಿಗಳಾದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡ ಅರ್ಜಿದಾರ ಬಿ ಆರ್ ಶೆಟ್ಟಿ ಅವರಿಂದ ಹಣ ಮರುಪಾವತಿಗೆ ಸಂಬಂಧಿಸಿದಂತೆ ಸಾಲ ಮರುಪಾವತಿ ನ್ಯಾಯಾಧೀಕರಣ ಡಿಕ್ರಿ ಮತ್ತು ಆದೇಶ ಪಡೆದಿದ್ದಾರೆ. ಆ ಆದೇಶ ಜಾರಿಗೊಳಿಸುವ ಪ್ರಕ್ರಿಯೆ ತಡೆಯುತ್ತಿದೆ. ಅದಕ್ಕೆ ಸುತ್ತೋಲೆ ಯಾವುದೇ ರೀತಿಯಲ್ಲಿ ಅಡ್ಡಿಯಾಗುವುದಿಲ್ಲ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಹೇಳಿದೆ. ಅರ್ಜಿದಾರರ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣ ದಾಖಲಾಗಿಲ್ಲ. ಅರ್ಜಿದಾರರು ಭಾರತೀಯ ಪ್ರಜೆಯಾಗಿದ್ದು, ವಿದೇಶ ಪ್ರಯಾಣಕ್ಕೆ ಅರ್ಹರಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿದ್ದು, ಪತ್ನಿ ಮತ್ತು ಮಕ್ಕಳ ನೆರವಿನ ಅಗತ್ಯವಿದೆ. ಆದುದರಿಂದ ಅವರಿಗೆ ಯುಎಇ ಗೆ ಪ್ರಯಾಣ ಬೆಳೆಸಲು ಅನುಮತಿ ನೀಡಬೇಕು ಎಂದು ಪೀಠ ಆದೇಶದಲ್ಲಿ ಹೇಳಿದೆ.

ಉದ್ಯಮಿ ಬಿ ಆರ್ ಶೆಟ್ಟಿ ತಮ್ಮ ಉದ್ಯಮದ ನಿರ್ವಹಣೆಯನ್ನು ಇತರ ಅಧಿಕಾರಿಗಳಿಗೆ ಹಸ್ತಾಂತರ ಮಾಡಿ ಮುಖ್ಯಸ್ಥನ ಹುದ್ದೆಯನ್ನು 2018 ನಡುವಿನ ಅವಧಿಯಲ್ಲಿ ತ್ಯಜಿಸಿದ್ದರು. ಅವರ ಒಡೆತನದ ಕಂಪನಿ ಹಲವು ಬ್ಯಾಂಕ್‌ಗಳಿಂದ 2800 ಕೋಟಿ ರೂ. ಸಾಲ ಪಡೆದಿತ್ತು. ಈ ಹಣ ಮರುಪಾವತಿ ಮಾಡದ ಕಾರಣಕ್ಕೆ ಬ್ಯಾಂಕುಗಳು ನ್ಯಾಯಾಲಯದ ಮೊರೆ ಹೋಗಿದ್ದವು. ಕಾನೂನು ಪ್ರಕ್ರಿಯೆಯ ಸಂದರ್ಭದಲ್ಲಿ ವಲಸೆ ಅಧಿಕಾರಿಗಳು ಅವರ ವಿರುದ್ಧ ಲುಕೌಟ್ ನೋಟಿಸ್ ಜಾರಿಗೊಳಿಸಿದ್ದರು. ಇದರಿಂದ ಬಿಆರ್ ಶೆಟ್ಟಿ ಅವರ ವಿದೇಶ ಪ್ರಯಾಣಕ್ಕೆ ಕಂಟಕ ಉಂಟಾಗಿತ್ತು. ಹಾಗಾಗಿ, ಈ ಆದೇಶವನ್ನು ಪ್ರಶ್ನಿಸಿ ಬಿ.ಆರ್. ಶೆಟ್ಟಿ ಹೈಕೋರ್ಟ್ ಮೆಟ್ಟಿಲೇರಿದ್ದರು.

LEAVE A REPLY

Please enter your comment!
Please enter your name here