ಚಂದ್ರನ ಅಂಗಳದ ಮಣ್ಣು ಭೂಮಿಗೆ-ಇಸ್ರೋದಿಂದ ಚಂದ್ರಯಾನ-4 ಯೋಜನೆ​ಗೆ ಸಿದ್ಧತೆ

ಮಂಗಳೂರು(ಶ್ರೀಹರಿಕೋಟಾ): ಚಂದ್ರಯಾನ-3 ಯಶಸ್ಸಿನ ನಂತರ ವಿಶ್ವದಲ್ಲೇ ಖ್ಯಾತಿ ಪಡೆದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಚಂದ್ರಯಾನ-4 ಯೋಜನೆಯನ್ನು ರೂಪಿಸಲು ಚಿಂತನೆ ನಡೆಸಿದೆ. ಈ ಬಾರಿ ಶಶಿಯ ಅಧ್ಯಯನದ ಜೊತೆಗೆ ಅಲ್ಲಿನ ಮಣ್ಣನ್ನು ಭೂಮಿಗೆ ತರುವ ಮಹತ್ವದ ಅಂಶ ಇದರಲ್ಲಿರಬೇಕು ಎಂಬುದು ವಿಜ್ಞಾನಿಗಳ ಪ್ರಸ್ತಾವನೆಯಾಗಿದೆ.

ಮುಂದಿನ ಚಂದ್ರಯಾನ ಕುರಿತು ಇಸ್ರೋದ ವಿಜ್ಞಾನಿಗಳು ಆಂತರಿಕವಾಗಿ ಚರ್ಚೆ ನಡೆಸುತ್ತಿದ್ದು, ಉತ್ಕೃಷ್ಟ ತಂತ್ರಜ್ಞಾನ, ವಿಶೇಷ ವಿನ್ಯಾಸ ಅಭಿವೃದ್ಧಿಪಡಿಸುವ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ ಎಂದು ಇಸ್ರೋದ ಅಧ್ಯಕ್ಷ ಎಸ್​. ಸೋಮನಾಥ್​ ತಿಳಿಸಿದ್ದಾರೆ. ಇಸ್ರೋದ ಬೆಂಗಳೂರು ಕೇಂದ್ರವು ಭವಿಷ್ಯದಲ್ಲಿ ಚಂದ್ರಯಾನ 4,5,6, ಮತ್ತು 7 ಮಿಷನ್​ಗಳನ್ನು ಉಡಾವಣೆ ಮಾಡುವ ಬಯಕೆ ಹೊಂದಿದೆ. ಮುಂದಿನ ಬಾರಿ ನಡೆಯುವ ಪ್ರತಿ ಉಡಾವಣೆಯೂ ವಿಶೇಷವಾಗಿರಲಿವೆ. ಚಂದ್ರನ ಮೇಲ್ಮೈಯಿಂದ ಭೂಮಿಗೆ ಮಣ್ಣನ್ನು ಮರಳಿ ತರುವ ಸಂಕೀರ್ಣ ಪ್ರಕ್ರಿಯೆಯು 4ನೇ ಯೋಜನೆಯಲ್ಲಿ ರೂಪಿಸಲಾಗುತ್ತಿದೆ ಎಂದರು.

ಪೆಲೋಡ್​ ಅಥವಾ ರೋಬೋ?: ಮುಂದಿನ ಬಾರಿಯ ಬಾಹ್ಯಾಕಾಶ ನೌಕೆಯು ಏನನ್ನು ಹೊಂದಿರಬೇಕು ಎಂಬುದರ ಕುರಿತು ಸಂಶೋಧನೆ ನಡೆಯುತ್ತಿದೆ. ಅಂದರೆ ಪೆಲೋಡ್​ಗಳಿರಬೇಕೇ ಅಥವಾ ರೋಬೋವನ್ನು ಕಳುಹಿಸಬೇಕೇ ಎಂಬುದು ಇನ್ನು ನಿಶ್ಚಿತವಾಗಿಲ್ಲ ಎಂದು ಸೋಮನಾಥ್ ಹೇಳಿದರು. ಭೂಮಿಗೆ ಚಂದ್ರನ ಮಣ್ಣನ್ನು ತರಬೇಕಾದ ಕಾರಣ, ರೋಬೋಟಿಕ್​ ತಂತ್ರಜ್ಞಾನವನ್ನೇ ಅಳವಡಿಸಿಕೊಳ್ಳಬೇಕಿದೆ. ಚಂದ್ರನ ಮೇಲೆ ನೌಕೆಯನ್ನು ಇಳಿಸುವುದೇ ಸಂಕೀರ್ಣ ಕೆಲಸ. ಬಳಿಕ ಅದನ್ನು ಅಲ್ಲಿಂದ ವಾಪಸ್​ ಭೂಮಿಗೆ ವಾಪಸ್​ ತರುವುದು ಇನ್ನೂ ಸವಾಲಿನ ಕೆಲಸ. ನಮ್ಮಲ್ಲಿನ ರಾಕೆಟ್​ಗಳು ಅಂತಹ ಸಾಮರ್ಥ್ಯವನ್ನು ಹೊಂದಿಲ್ಲ. ಇದಕ್ಕಾಗಿ ವಿಶೇಷ ವಿನ್ಯಾಸ ರಾಕೆಟ್​ಗಳನ್ನ ಅಭಿವೃದ್ಧಿಪಡಿಸಬೇಕು ಎಂದರು. ಚಂದ್ರಯಾನ-4 ಮಿಷನ್‌ಗಾಗಿ ವಿಜ್ಞಾನಿಗಳು ಉತ್ಕೃಷ್ಟ ಗುಣಮಟ್ಟದ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಿದ್ದಾರೆ. ಇದಕ್ಕೆ ಸರ್ಕಾರ ಅನುಮೋದನೆ ನೀಡಬೇಕು. ಇದಕ್ಕೆ ಸಾಕಷ್ಟು ಅನುದಾನ ಬೇಕು. ಈ ಬಗ್ಗೆ ಮಾತುಕತೆಗಳು ನಡೆಯುತ್ತಿವೆ ಎಂದು ಮಾಹಿತಿ ಹಂಚಿಕೊಂಡರು.

ಲ್ಯಾಂಡರ್​ ಮರು ಕಾರ್ಯಾರಂಭ: ಚಂದ್ರಯಾನ-3 ಲ್ಯಾಂಡರ್‌ನಲ್ಲಿನ ಉಪಕರಣವೊಂದು ಚಂದ್ರನ ದಕ್ಷಿಣ ಧ್ರುವದ ಬಳಿ ಸ್ಥಳ ಪತ್ತೆ ಮಾಡುವ ಕೆಲಸವನ್ನು ಆರಂಭಿಸಿದೆ ಎಂದು ಇಸ್ರೋ ಈಚೆಗೆ ತಿಳಿಸಿತ್ತು. ಲ್ಯಾಂಡರ್‌ನಲ್ಲಿ ಅಳವಡಿಸಲಾಗಿರುವ ಲೇಸರ್ ರೆಟ್ರೋಫ್ಲೆಕ್ಟರ್ ಅರೇ ಉಪಕರಣ ತನ್ನ ಕೆಲಸವನ್ನು ಮರು ಪ್ರಾರಂಭಿಸಿದೆ. ಯುಎಸ್ ಬಾಹ್ಯಾಕಾಶ ಸಂಸ್ಥೆ, ನಾಸಾದ ಚಂದ್ರನ ವಿಚಕ್ಷಣ ಆರ್ಬಿಟರ್ ಪ್ರತಿಫಲಿತ ಸಂಕೇತಗಳನ್ನು ಯಶಸ್ವಿಯಾಗಿ ಪತ್ತೆಹಚ್ಚಿದೆ. ಡಿಸೆಂಬರ್ 12, 2023 ರಂದು ಲೇಸರ್ ವ್ಯಾಪ್ತಿಯ ಮಾಪನವನ್ನು ಸಾಧಿಸಿದೆ ಎಂದು ಇಸ್ರೋ ತಿಳಿಸಿದೆ.

LEAVE A REPLY

Please enter your comment!
Please enter your name here