ಮಂಗಳೂರು(ವಾಮಂಜೂರು): ಮಂಗಳೂರಿನ ಹೊರವಲಯದ ವಾಮಂಜೂರು ತಿರುವೈಲು ಗುತ್ತು ಅಮೃತೇಶ್ವರ ದೇವಸ್ಥಾನದ ಎದುರಿನ ಗದ್ದೆಯಲ್ಲಿ ನಡೆದ ಪ್ರತಿಷ್ಠಿತ ಸಂಕು ಪೂಂಜ- ದೇವು ಪೂಂಜ ಜೋಡುಕರೆ ಕಂಬಳವು ಈ ಬಾರಿಯ ಕಂಬಳ ಕೂಟದಲ್ಲಿಯೇ ಅತ್ಯಂತ ಕನಿಷ್ಠ ಸಮಯದಲ್ಲಿ ಮುಗಿದು ದಾಖಲೆ ಬರೆದಿದೆ.
ಶನಿವಾರ ಬೆಳಗ್ಗೆ 9.45 ಸುಮಾರಿಗೆ ಆರಂಭವಾಗಿದ್ದ 166 ಜತೆ ಕೋಣಗಳು ಭಾಗವಹಿಸಿದ್ದ ವಾಮಂಜೂರು ಕಂಬಳದ ಅಂತಿಮ ಹಂತದ ಸ್ಪರ್ಧೆಯು ಭಾನುವಾರ ಬೆಳಗ್ಗೆ 8.50ಕ್ಕೆ ಅಂತ್ಯವಾಗಿದೆ. ಕಳೆದ ವರ್ಷವು 23 ಗಂಟೆಯೊಳಗೆ ಮುಗಿದಿದ್ದ ವಾಮಂಜೂರು ತಿರುವೈಲುಗುತ್ತು ಕಂಬಳವು ಈ ಬಾರಿಯೂ 23 ಗಂಟೆಯೊಳಗೆ ಸಂಪನ್ನವಾಗಿ ಮಾದರಿಯಾಗಿದೆ. ಕಂಬಳವನ್ನು ಸರಿಯಾದ ಸಮಯದಲ್ಲಿ ಮುಗಿಸಲು ಹೊಸ ಹೊಸ ತಂತ್ರಜ್ಞಾನದ ಮೊರೆ ಹೋಗುತ್ತಿರುವ ಸಂದರ್ಭದಲ್ಲಿ ವಾಮಂಜೂರು ಕಂಬಳವು ಇತರ ಕೂಟಗಳಿಗೆ ಮಾದರಿಯಾಗಿದೆ. ಕನೆಹಲಗೆ ವಿಭಾಗದಲ್ಲಿ ಆರು ಜೊತೆ, ಅಡ್ಡಹಲಗೆ ವಿಭಾಗದಲ್ಲಿ ಐದು ಜೊತೆ, ಹಗ್ಗ ಹಿರಿಯ ವಿಭಾಗದಲ್ಲಿ 14 ಜೊತೆ, ನೇಗಿಲು ಹಿರಿಯ ವಿಭಾಗದಲ್ಲಿ 35 ಜೊತೆ, ಹಗ್ಗ ಕಿರಿಯ ವಿಭಾಗದಲ್ಲಿ 23 ಜೊತೆ ಮತ್ತು ನೇಗಿಲು ಕಿರಿಯ ವಿಭಾಗದಲ್ಲಿ 83 ಜೊತೆ ಕೋಣಗಳು ಭಾಗವಹಿಸಿದ್ದವು.