ಮಂಗಳೂರು: ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿಗಳಲ್ಲಿ ಒಬ್ಬನಾದ ಸಂತನ್ ಬುಧವಾರ ಬೆಳಗ್ಗೆ ಚೆನ್ನೈನ ರಾಜೀವ್ ಗಾಂಧಿ ಸರ್ಕಾರಿ ಜನರಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಸಂತನ್ ಯಕೃತ್ ಸಮಸ್ಯೆಯಿಂದ ಬಳಲುತ್ತಿದ್ದು, ರಾಜೀವ್ ಗಾಂಧಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಜೈಲಿನಿಂದ ಬಿಡುಗಡೆಯಾದ ಬಳಿಕ ಅವರನ್ನು ತಿರುಚ್ಚಿಯ ಕೇಂದ್ರ ಕಾರಾಗೃಹದ ವಿಶೇಷ ಶಿಬಿರದಲ್ಲಿ ಇರಿಸಲಾಗಿತ್ತು.
ನವೆಂಬರ್ 11, 2022 ರಂದು, ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಆರು ಅಪರಾಧಿಗಳನ್ನು ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಆದೇಶದ ಮರುದಿನವೇ ನಳಿನಿ, ಶ್ರೀಹರನ್, ಸಂತನ್, ರಾಬರ್ಟ್ ಪಾಯಸ್, ಜಯಕುಮಾರ್ ಮತ್ತು ರವಿಚಂದ್ರನ್ 32 ವರ್ಷಗಳ ನಂತರ ಜೈಲಿನಿಂದ ಬಿಡುಗಡೆಯಾಗಿದ್ದರು. ನಳಿನಿ ಮತ್ತು ರವಿಚಂದ್ರನ್ ಬಿಡುಗಡೆಗೊಂಡ ಬಳಿಕ ಅವರ ಕುಟುಂಬಗಳನ್ನು ಭೇಟಿ ಮಾಡಲು ಅವಕಾಶ ನೀಡಲಾಯಿತು ಆದರೆ ಉಳಿದ ನಾಲ್ವರನ್ನು ತಿರುಚ್ಚಿ ಕೇಂದ್ರ ಕಾರಾಗೃಹದಲ್ಲಿ ವಿಶೇಷ ಶಿಬಿರದಲ್ಲಿ ಇರಿಸಲಾಗಿತ್ತು. ನಾಲ್ವರೂ ಶ್ರೀಲಂಕಾದ ಪ್ರಜೆಗಳಾಗಿದ್ದರಿಂದ ಹೀಗೆ ಮಾಡಲಾಗಿತ್ತು.
ಸಂತನ್ ಅವರು ತಿರುಚ್ಚಿ ಜೈಲಿನ ವಿಶೇಷ ಶಿಬಿರದಲ್ಲಿರುವ ತಮ್ಮ ಸೆಲ್ ನಿಂದ ಬಹಿರಂಗ ಪತ್ರ ಬರೆದು ಪತ್ರದ ಮೂಲಕ, ತಮ್ಮ ದೇಶಕ್ಕೆ ಮರಳಲು ಧ್ವನಿ ಎತ್ತುವಂತೆ ವಿಶ್ವದಾದ್ಯಂತದ ತಮಿಳರಿಗೆ ಮನವಿ ಮಾಡಿದ್ದರು.32 ವರ್ಷಗಳಿಂದ ತಾಯಿಯನ್ನು ನೋಡಿಲ್ಲ ಎಂದಿದ್ದ ಸಂತನ್, ನನ್ನನ್ನು ಶ್ರೀಲಂಕಾಕ್ಕೆ ಕಳುಹಿಸಲು ವ್ಯವಸ್ಥೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ , ಕೇಂದ್ರ ಗೃಹ ಸಚಿವರು ಮತ್ತು ವಿದೇಶಾಂಗ ಸಚಿವರಿಗೆ ಪತ್ರ ಬರೆದಿದ್ದರು. ನನ್ನ ಪಾಸ್‌ಪೋರ್ಟ್ ಅನ್ನು ನವೀಕರಿಸಲು ಚೆನ್ನೈನಲ್ಲಿರುವ ಶ್ರೀಲಂಕಾದ ಡೆಪ್ಯುಟಿ ಹೈಕಮಿಷನ್ ಕಚೇರಿಗೆ ಹೋಗಲು ನನಗೆ ಅನುಮತಿ ನೀಡುವಂತೆ ನಾನು ಅಧಿಕಾರಿಗಳನ್ನು ವಿನಂತಿಸಿದ್ದೆ, ಆದರೆ ನನಗೆ ಯಾವುದೇ ಉತ್ತರವೇ ಬಂದಿಲ್ಲ ಎಂದು ಈ ಹಿಂದೆ ಹೇಳಿದ್ದರು.
ಕಳೆದ ಆರು ತಿಂಗಳಿನಿಂದ ನಾನು ತಿರುಚ್ಚಿ ಕೇಂದ್ರ ಕಾರಾಗೃಹದ ವಿಶೇಷ ಶಿಬಿರದಲ್ಲಿ ಇದ್ದೇನೆ. ಇಲ್ಲಿನ ಶಿಬಿರದಲ್ಲಿ ಒಟ್ಟು 120 ವಿದೇಶಿಗರಿದ್ದು, ಈ ಪೈಕಿ ಸುಮಾರು 90 ಮಂದಿ ಶ್ರೀಲಂಕಾದವರು. ಕಿಟಕಿಗಳನ್ನು ಟಿನ್ ಶೀಟ್‌ಗಳಿಂದ ಮುಚ್ಚಲಾಗಿದೆ ಸೂರ್ಯನ ಬೆಳಕೂ ಬರುವುದಿಲ್ಲ, ಫೋನ್‌ನಲ್ಲಿ ಮಾತನಾಡಲೂ ಬಿಡುತ್ತಿಲ್ಲ ಎಂದು ಪತ್ರದಲ್ಲಿ ಬರೆದಿದ್ದರು.