ಮಂಗಳೂರು(ಪುತ್ತೂರು): ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅರುಣ್ ಕುಮಾರ್ ಪುತ್ತಿಲರವರು ಬಿಜೆಪಿಯ ಸರ್ವೊಚ್ಚ ನಾಯಕರಾದ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶದ ಸಿ ಎಂ ಯೋಗಿ ಅದಿತ್ಯನಾಥ್ ಅವರ ಭಾವಚಿತ್ರಗಳನ್ನು ಚುನಾವಣಾ ಪ್ರಚಾರದ ವೇಳೆ ಬಳಸಿದ್ದಾರೆಂದು ಪುತ್ತೂರು ಬಿಜೆಪಿ ನಾಯಕರೊಬ್ಬರು ಚುನಾವಣಾ ಅಧಿಕಾರಿಗೆ ದೂರು ನೀಡಿದ ಪ್ರಕರಣದ ತನಿಖೆಗೆ ರಾಜ್ಯ ಹೈಕೋರ್ಟ್ ತಡೆ ನೀಡಿದೆ.
ಪುತ್ತೂರು ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಆಗಮಿಸುತ್ತಿರುವ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಸ್ವಾಗತ ಕೋರಿ ಅರುಣ್ ಪುತ್ತಿಲ ಪೋಸ್ಟರ್ ಹಾಕಿರುವುದಾಗಿ 2023ರ ಮೇ ತಿಂಗಳಿನಲ್ಲಿ ಪುತ್ತೂರು ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಪರವಾಗಿ ಅವರ ಏಜೆಂಟ್ ರಾಜೇಶ್ ಬನ್ನೂರು ಚುನಾವಣಾ ಅಧಿಕಾರಿಗೆ ದೂರು ನೀಡಿದ್ದರು. ಅಲ್ಲದೇ ತನ್ನ ಚುನಾವಣಾ ಪ್ರಚಾರದಲ್ಲಿ ಬಿಜೆಪಿಯ ತಾರಾ ಪ್ರಚಾರಕರಾದ ನರೇಂದ್ರ ಮೋದಿಯವರ ಭಾವಚಿತ್ರವನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದರು.
ದೂರು ಸ್ವೀಕರಿಸಿದ ಚುನಾವಣಾ ಅಧಿಕಾರಿಗಳು ಪ್ರಕರಣದ ತನಿಖೆ ನಡೆಸುವಂತೆ ಪುತ್ತೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ಸ್ವೀಕರಿಸಿ ಎಫ್ ಐ ಆರ್ ದಾಖಲಿಸಿಕೊಂಡ ಪೊಲೀಸರು 2023ರ ಡಿ.7 ರಂದು ಅರುಣ್ ಪುತ್ತಿಲರಿಗೆ ನೋಟಿಸ್ ಜಾರಿ ಮಾಡಿ ತನಿಖೆಗೆ ಹಾಜರಾಗುವಂತೆ ಸೂಚಿಸಿದ್ದರು. ಇದನ್ನು ಪ್ರಶ್ನಿಸಿ ಅರುಣ್ ಪುತ್ತಿಲರುವರು ಹೈ ಕೋರ್ಟ್ ಮೊರೆ ಹೋಗಿದ್ದು, ಇದೀಗ ಹೈಕೋರ್ಟ್ ತನಿಖೆಗೆ ತಡೆ ಕೋರಿ ಆದೇಶಿಸಿದೆ. ಅರುಣ್ ಪುತ್ತಿಲ ಪರ ಖ್ಯಾತ ನ್ಯಾಯವಾದಿಗಳಾದ ಬೆಂಗಳೂರಿನ ಸಚಿನ್ ಹಾಗೂ ಪುತ್ತೂರಿನ ನರಸಿಂಹ ಪ್ರಸಾದ್ ವಾದಿಸಿದ್ದರು.