ಪಾಕಿಸ್ತಾನ ಪರ ಘೋಷಣೆ – ಕಾಂಗ್ರೆಸ್ ವಿರುದ್ಧ ಹಿಂದೂ ಮಹಾಸಭಾ ತೀವ್ರ ಆಕ್ರೋಶ – ಕಾಲಪಕ್ವವಾಗಿದೆ ಶೀಘ್ರದಲ್ಲಿ ಹೊಸ ಹಿಂದೂ ರಾಷ್ಟ್ರೀಯ ರಾಜಕೀಯ ಪಕ್ಷ ಉದಯವಾಗಲಿದೆ – ರಾಜೇಶ್ ಪವಿತ್ರನ್

ಮಂಗಳೂರು: ಕಾಂಗ್ರೆಸ್ ಪಕ್ಷದ ರಾಜ್ಯಸಭಾ ಸದಸ್ಯರಾದ ನಾಸೀರ್ ಹುಸೈನ್ ಗೆಲುವಿನ ಸಂಭ್ರಮಾಚರಣೆ ವೇಳೆ ಅವರ ಬೆಂಬಲಿಗರು ಪಾಕಿಸ್ತಾನ ಪರ ಘೋಷಣೆ ಕೂಗಿರುವುದನ್ನು ಹಿಂದೂ ಮಹಾಸಭಾ ಕರ್ನಾಟಕ ತೀವ್ರವಾಗಿ ಖಂಡಿಸುತ್ತದೆ. ಮಾತ್ರವಲ್ಲದೆ ಯಾರು ಇಂತಹ ಕೃತ್ಯದಲ್ಲಿ ಭಾಗಿಯಾಗಿದ್ದರೆ ಅಂತವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರಗಿಸುವ ಮೂಲಕ ಮುಂದೆ ಯಾರು ಇಂತಹ ಕೃತ್ಯಕ್ಕೆ ಕೈ ಹಾಕದಂತೆ ನೋಡಿಕೊಳ್ಳುವಂತೆ ಹಿಂದೂ ಮಹಾಸಭಾ ಸರಕಾರವನ್ನು ಆಗ್ರಹಿಸಿದೆ.‌

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಹಾಸಭಾದ ಸಂಸ್ಥಾಪಕ ರಾಜೇಶ್‌ ಪವಿತ್ರನ್‌, ಈ ಘಟನೆ ವಿರೋಧ ಪಕ್ಷ ಎನಿಸಿಕೊಂಡಿರುವ ಭಾರತೀಯ ಜನತಾ ಪಕ್ಷದ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ. ಈ ಹಿಂದೆ ಮಂಡ್ಯದಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ನಡೆದ ಪ್ರತಿಭಟನೆಯಲ್ಲೂ ಈ ರೀತಿ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದರೂ ಅವರ ಮೇಲೆ ಆಗಿನ ಭಾರತೀಯ ಜನತಾ ಪಕ್ಷ ನೇತೃತ್ವದ ಸರಕಾರ ಕ್ರಮ ಕೈಗೊಂಡಿಲ್ಲ. ಒಂದು ವೇಳೆ ಕ್ರಮ ಕೈಗೊಂಡಿದ್ದರೆ ಇವತ್ತು ಮಾತಾಡಲು ನೈತಿಕತೆ ಇರುತಿತ್ತು. ವಿರೋಧ ಪಕ್ಷದ ನಾಯಕ ಎನಿಸಿಕೊಂಡ ಆರ್ ಅಶೋಕ್ ಅವರು ಕೆಲವು ದಿನಗಳ ಹಿಂದೆ ಸದನದಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಗೂಂಡಾ ಕಾಯ್ದೆ ಹಾಕಿರುವುದನ್ನು ಎದೆತಟ್ಟಿ ಹೇಳಿರುವುದು ಭಾರತೀಯ ಜನತಾ ಪಕ್ಷದ ನಕಲಿ ಹಿಂದುತ್ವವಾದ ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿಂದೂ ಮಹಾಸಭಾ ಈ ಹಿಂದೆ ಹೇಳಿರುವಂತೆ ಕಾಂಗ್ರೆಸ್ ಹಾಗೂ ಭಾರತೀಯ ಜನತಾ ಪಕ್ಷ ಒಂದೇ ನಾಣ್ಯದ ಎರಡು ಮುಖಗಳು ಎಂದು ಮತ್ತೆ ನೆನಪಿಸಿದ ಪವಿತ್ರನ್, ರಾಷ್ಟ್ರಕ್ಕೆ ಒಂದು ಹೊಸ ಹಿಂದೂ ರಾಷ್ಟ್ರೀಯ ರಾಜಕೀಯ ಪಕ್ಷದ ಅಗತ್ಯವಿದ್ದು ನೂತನ ಪಕ್ಷದ ಉದಯಕ್ಕೆ ಕಾಲ ಪಕ್ವವಾಗಿದೆ ಎಂದು ಹೇಳುವ ಮೂಲಕ ಶೀಘ್ರ ಹಿಂದೂ ರಾಜಕೀಯ ಪಕ್ಷ ಉದಯವಾಗುವ ಬಗ್ಗೆ ಸುಳಿವು ನೀಡಿದರು.

LEAVE A REPLY

Please enter your comment!
Please enter your name here