ಮಂಗಳೂರು: ತೆರಿಗೆಯ ಪಾಲು ನೀಡುವಲ್ಲಿ ಕೇಂದ್ರ ಸರಕಾರ ಮಾಡುತ್ತಿರುವ ಅನ್ಯಾಯ, ಬರಗಾಲ, ಈ ಹಿಂದಿನ ಬಿಜೆಪಿ ಸರಕಾರದ ಆರ್ಥಿಕ ಅಶಿಸ್ತಿನ ಪರಿಣಾಮದ ನಡುವೆಯೂ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದ ಬಳಿಕ ಆರ್ಥಿಕ ಬೆಳವಣಿಗೆ ಉತ್ತಮಗೊಂಡಿದೆ. ಬಿಜೆಪಿಯವರ ಆರೋಪಗಳಿಗೆ ರಾಜ್ಯ ಬಜೆಟ್ ಸ್ಪಷ್ಟ ಉತ್ತರ ನೀಡಿದೆ ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಈ ಬಾರಿಯ ಬಜೆಟ್ನಲ್ಲಿ ಬಡತನ ನಿರ್ಮೂಲನೆ, ಮೂಲಸೌಕರ್ಯ ಅಭಿವೃದ್ಧಿ ಮೊದಲಾದವುಗಳಿಗೆ ಗರಿಷ್ಠ ಹಣ ಮೀಸಲಿಡಲಾಗಿದೆ. ವಿತ್ತೀಯ ಕೊರತೆ, ಸಾಲದ ಪ್ರಮಾಣ ಯಾವುದೇ ಮಾನದಂಡ ಮೀರಿಲ್ಲ. ಕೇಂದ್ರ ಸರಕಾರ ಜಿಎಸ್ಟಿ ಪಾಲು ನೀಡುತ್ತಿಲ್ಲ. ರಾಜ್ಯಗಳಿಗೆ ತೆರಿಗೆ ಸಂಗ್ರಹದ ಸ್ವಾತಂತ್ರ್ಯ ನೀಡುತ್ತಿಲ್ಲ. ಅದರಲ್ಲಿ ಯಾವುದೇ ಪಾಲು ಕೂಡ ಕೊಡುತ್ತಿಲ್ಲ. ರಾಜ್ಯದಲ್ಲಿ ಬರಗಾಲವಿದೆ. ಆದಾಗ್ಯೂ ಆರ್ಥಿಕ ಬೆಳವಣಿಗೆಯ ದರ ಉತ್ತಮವಾಗಿದೆ ಎಂದವರು ಹೇಳಿದ್ದಾರೆ.
ಸಾಮಾಜಿಕ ಭದ್ರತಾ ಯೋಜನೆ ಸಹಿತ ಪ್ರಮುಖ ಯೋಜನೆಗಳಿಗೆ ಕೇಂದ್ರ ಸರಕಾರಕ್ಕಿಂತ ಸುಮಾರು 3ರಿಂದ 4 ಪಟ್ಟು ಅಧಿಕ ಮೊತ್ತವನ್ನು ರಾಜ್ಯ ಸರಕಾರ ನೀಡುತ್ತಿದೆ. ಆದರೆ ಆ ಯೋಜನೆಗಳಿಗೆ ಪ್ರಧಾನಮಂತ್ರಿಯವರ ಹೆಸರನ್ನೇ ಇಡಲಾಗಿದೆ. ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗುತ್ತಿದೆ. 7ನೇ ವೇತನ ಆಯೋಗದ ಶಿಫಾರಸು ಜಾರಿಗೆ 13,000 ಕೋ.ರೂ. ಮೀಸಲಿಡಲಾಗಿದೆ. ಅಲ್ಪಸಂಖ್ಯಾಕರು ಮಾತ್ರವಲ್ಲದೆ ಮೀನುಗಾರರು ಸಹಿತ ಎಲ್ಲಾ ವರ್ಗದವರಿಗೂ ಅನುದಾನ ಒದಗಿಸಲಾಗಿದೆ. ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರಗಳಿಗೂ ಅನುದಾನ ಒದಗಿಸಲಾಗಿದೆ. ನೇರ ಬಂಡವಾಳ ಹೂಡಿಕೆಯಲ್ಲಿ ದೇಶದಲ್ಲೇ ರಾಜ್ಯ 3ನೇ ಸ್ಥಾನದಲ್ಲಿ, ಜಿಎಸ್ಟಿ ಸಂಗ್ರಹದಲ್ಲಿ 2ನೇ ಸ್ಥಾನದಲ್ಲಿದೆ. ಶೇ.18ರಷ್ಟು ಜಿಎಸ್ಟಿ ಸಂಗ್ರಹ ಹೆಚ್ಚಾಗಿದೆ ಎಂದವರು ಹೇಳಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದಾಗ ಮುಖ್ಯಮಂತ್ರಿ ವಿವೇಚನ ಕೋಟಾದಡಿ ಬೇಕಾಬಿಟ್ಟಿ ಟೆಂಡರ್ ಮಾಡಿರುವುದರಿಂದ ಆರ್ಥಿಕ ಅಶಿಸ್ತು ಉಂಟಾಗಿದೆ. ಆ ಯೋಜನೆಗಳನ್ನು ಪೂರ್ಣಗೊಳಿಸಲು 5-6 ವರ್ಷಗಳು ಬೇಕು ಎಂದವರು ಹೇಳಿದ್ದಾರೆ. ಧಾರ್ಮಿಕ ದತ್ತಿ ಇಲಾಖೆಯಿಂದ ಬೇರೆ ಧರ್ಮಗಳಿಗೆ ಹಣ ನೀಡಲಾಗುತ್ತಿದೆ ಎಂದು ಬಿಜೆಪಿಯವರು ಸುಳ್ಳು ಹೇಳುತ್ತಿದ್ದಾರೆ. ಈ ಹಿಂದೆ ಬಿಜೆಪಿ ಸರಕಾರ ರೂಪಿಸಿದ ನಿಯಮದಡಿ ಅದಕ್ಕೆ ಅವಕಾಶವಿತ್ತು. ಆದರೆ ಇತ್ತೀಚೆಗೆ ಕಾಂಗ್ರೆಸ್ ಸರಕಾರ ಅದನ್ನು ತಿದ್ದುಪಡಿ ಮಾಡಿದ್ದು ಹಿಂದೂ ಧಾರ್ಮಿಕ ಕೇಂದ್ರಗಳ ಹೊರತಾಗಿ ಬೇರೆ ಧರ್ಮಗಳಿಗೆ ಧಾರ್ಮಿಕ ದತ್ತಿ ಇಲಾಖೆಯ ಹಣ ನೀಡಲು ಅವಕಾಶವಿಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದರು.
ಆರೋಗ್ಯ ಇಲಾಖೆಯಲ್ಲಿರುವ ಫಾರ್ಮಾಸಿಸ್ಟ್, ಲ್ಯಾಬ್ ಟೆಕ್ನೀಷಿಯನ್ ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು. ವೈದ್ಯರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುವುದು. ಪಿಜಿ ವೈದ್ಯರು ಮುಂದಿನ ತಿಂಗಳು ಸೇವೆಗೆ ಲಭ್ಯರಾಗುತ್ತಾರೆ. ಇಲಾಖೆಯಲ್ಲಿ ಸುಮಾರು 9 ಸಾವಿರ ಹುದ್ದೆಗಳು ಖಾಲಿ ಇದ್ದು ಪ್ರತೀ ವರ್ಷ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು. ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಉಚಿತ ಚಿಕಿತ್ಸೆ ಪಡೆಯಬಹುದಾದ ಕಾಯಿಲೆ/ಆರೋಗ್ಯ ಸಮಸ್ಯೆಗಳ ಪಟ್ಟಿಗೆ ಇನ್ನಷ್ಟು ಸೇರ್ಪಡೆಗೊಳಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಮುಖಂಡರಾದ ಟಿ.ಕೆ. ಸುಧೀರ್, ಎ.ಸಿ. ವಿನಯರಾಜ್, ಭರತ್ ಮುಂಡೋಡಿ, ನಾರಾಯಣ ನಾಯಕ್, ಜೋಕಿಂ ಡಿ’ಸೋಜಾ, ಸುರೇಂದ್ರ ಕಂಬಳಿ ಉಪಸ್ಥಿತರಿದ್ದರು.