ಮಂಗಳೂರು(ನವದೆಹಲಿ): ಭಾರತದ ಕಾನೂನು ವ್ಯವಸ್ಥೆಯಲ್ಲಿ ಪ್ರಧಾನ ಪಾತ್ರವಹಿಸಿದ್ದ ಭಾರತೀಯ ದಂಡ ಸಂಹಿತೆ, ಅಪರಾಧ ಪ್ರಕ್ರಿಯೆ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಅದಿನಿಯಮ ಇನ್ನು ಮುಂದೆ ಮೂಲೆಗೆ ಸರಿಯಲಿದೆ.
ಈ ಮೂರು ಮಹಾ ಕಾನೂನಿಗೆ ಪರ್ಯಾಯವಾಗಿ ಜಾರಿಗೆ ಬಂದಿರುವ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಮಿತಿ ಮತ್ತು ಭಾರತೀಯ ಸಾಕ್ಷ ಅಧಿನಿಯಮಗಳು 2024ರ ಜುಲೈ ಒಂದರಿಂದ ದೇಶಾದ್ಯಂತ ಜಾರಿಗೆ ಬರಲಿದೆ. ಮೂರು ಹೊಸ ಕ್ರಿಮಿನಲ್ ಕಾನೂನುಗಳನ್ನು ಜಾರಿಗೊಳಿಸುವ ಕುರಿತಂತೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ವಾಹನದ ಅತಿ ವೇಗ ಮತ್ತು ನಿರ್ಲಕ್ಷ ಚಾಲನೆಯಿಂದ ಸಾವು ಸಂಭವಿಸಿದರೆ ಹತ್ತು ವರ್ಷಗಳ ಗರಿಷ್ಠ ಕಠಿಣ ಶಿಕ್ಷೆ ಮತ್ತು ದಂಡ ವಿಧಿಸಲು ಉದ್ದೇಶಿಸಿದ್ದ ಭಾರತೀಯ ನಾಗರಿಕ ನ್ಯಾಯ ಸಮಿತಿಯ ಸೆಕ್ಷನ್ 106 ಸಬ್ ಸೆಕ್ಷನ್ 2 ಅನ್ನು ಸದ್ಯಕ್ಕೆ ತಡೆ ಹಿಡಿಯಲಾಗಿದೆ. ದೇಶಾದ್ಯಂತ ವ್ಯಾಪಕ ಪ್ರತಿಭಟನೆಗಳು ನಡೆದಿದ್ದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಉಳಿದಂತೆ ಈ ಮೂರು ಕಾಯ್ದೆಗಳು ಜುಲೈ ಒಂದರಂದು ಜಾರಿಗೆ ಬರಲಿದೆ. ಈ ಹೊಸ ಮೂರು ಕಾನೂನುಗಳನ್ನು ಲೋಕಸಭೆಯಲ್ಲಿ ಮಂಡಿಸಲಾಗಿದ್ದು, ಲೋಕಸಭೆ ಮತ್ತು ರಾಜ್ಯಸಭೆ ಅಂಗೀಕಾರ ನೀಡಿದ್ದವು. ಭಾರತೀಯ ಕ್ರಿಮಿನಲ್ ನ್ಯಾಯ ವ್ಯವಸ್ಥೆಯನ್ನು ಕೂಲಂಕುಷವಾಗಿ ಪರಿಶೀಲಿಸುವ ಈ ಮೂರು ಮಸೂದೆಗಳಿಗೆ 2023ರ ಡಿಸೆಂಬರ್ ನಲ್ಲಿ ಭಾರತದ ರಾಷ್ಟ್ರಪತಿಗಳಾದ ದ್ರೌಪದಿ ಮೂರು ಅವರು ಅಂಕಿತ ಹಾಕಿದ್ದಾರೆ.