ಮಂಗಳೂರು(ಬೆಂಗಳೂರು): ನಿಯಮ ಉಲ್ಲಂಘಿಸಿ 74 ಗರ್ಭಪಾತವನ್ನು ನಡೆಸಿದ್ದಾರೆಂಬ ಆರೋಪದ ಮೇಲೆ ನೆಲಮಂಗಲದ ಆಸರೆ ಆಸ್ಪತ್ರೆಯ ಮಾಲೀಕ ರವಿಕುಮಾರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ದೂರು ನೀಡಿದ್ದು, ನೆಲಮಂಗಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಆಸ್ಪ್ರತ್ರೆಯಲ್ಲಿದ್ದ ಶಸ್ತ್ರಚಿಕಿತ್ಸಾ ಕಡತವನ್ನು ಆರೋಗ್ಯ ಅಧಿಕಾರಿಗಳು ಜಪ್ತಿ ಮಾಡಿಕೊಂಡಿದ್ದಾರೆ. ನೆಲಮಂಗಲದ ಬಿ.ಎಚ್. ರಸ್ತೆಯಲ್ಲಿರುವ ಆಸರೆ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದಾಗ ಈ ಕೃತ್ಯ ನಡೆಸಿರುವುದು ಗೊತ್ತಾಗಿದೆ. 2021ರ ಸೆಪ್ಟೆಂಬರ್ 17ರಿಂದ 2026ರ ಸೆಪ್ಟೆಂಬರ್ 16ರವರೆಗೆ ಕೆಪಿಎಂಇ ಪ್ರಾಧಿಕಾರದಿಂದ ಪರವಾನಗಿ ಪಡೆದುಕೊಂಡು ಆಸ್ಪತ್ರೆ ನಡೆಸಲಾಗುತ್ತಿದೆ. ಎಂಟಿಪಿ ಕಾಯ್ದೆ ಅಡಿಯಲ್ಲಿ ಪರವಾನಗಿ ಪಡೆಯದೆ ಗರ್ಭಪಾತ ನಡೆಸಲಾಗಿದೆ. ಇದು ವೈದ್ಯಕೀಯ ಗರ್ಭಪಾತ ಕಾಯ್ದೆ–1971 ಅನ್ನು ಉಲ್ಲಂಘಿಸಲಾಗಿದೆ ಎಂದು ದೂರು ನೀಡಿದ್ದಾರೆ.
ಆಸ್ಪತ್ರೆಯಲ್ಲಿ ನಡೆಸಿದ ಗರ್ಭಪಾತಗಳಿಗೆ ಸಂಬಂಧಿಸಿದ ಎಂಟಿಪಿ ಕಡತವನ್ನು ನಿರ್ವಹಣೆ ಮಾಡಿಲ್ಲ. ಬದಲಿಗೆ ಗರ್ಭಪಾತಕ್ಕೆ ಸಂಬಂಧಿಸಿದಂತೆ ಎಲ್ಲಾ ವಿವರಗಳನ್ನು ತಮ್ಮ ಸಂಸ್ಥೆಯ ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿರುವ ಕಡತದಲ್ಲಿ ನಮೂದಿಸಲಾಗಿದೆ. ಇದು ನಿಯಮ ಉಲ್ಲಂಘನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಆಸ್ಪತ್ರೆಯಲ್ಲಿ ನಡೆಸಿರುವ ಗರ್ಭಪಾತ ಪ್ರಕರಣಗಳಿಗೆ ಪೂರಕ ದಾಖಲೆಗಳು (ಅಲ್ಮಾಸೌಂಡ್ ರಿಪೋರ್ಟ್‌ಗಳು, ಶೇ 90) ಕೇಸ್ ಶೀಟ್‌ನಲ್ಲಿ ಲಭ್ಯ ಇರುವುದಿಲ್ಲ. ಗರ್ಭಪಾತ ನಡೆಸಿದ ತಿಂಗಳ ವಿವರಗಳನ್ನು ಇದುವರೆಗೂ ನಿಗದಿತ ನಮೂನೆಯಲ್ಲಿ ಜಿಲ್ಲಾ ಪ್ರಾಧಿಕಾರಕ್ಕೆ ಸಲ್ಲಿಸಿರುವುದಕ್ಕೆ ಆಸ್ಪತ್ರೆಯಲ್ಲಿ ಯಾವುದೇ ದಾಖಲೆಗಳು ಇಲ್ಲ ಎಂದು ದೂರಿನಲ್ಲಿ ಹೇಳಲಾಗಿದೆ.