ಗೇಮ್​ ಆಡುತ್ತಿದ್ದ ವೇಳೆ ಕಚೇರಿಯೊಳಗೆ ನುಗ್ಗಿದ ಚಿರತೆ-ಹೆದರದೇ ಚಿರತೆಯನ್ನು ಕೂಡಿಹಾಕಿದ 12ರ ಪೋರ-ವಿಡಿಯೋ ವೈರಲ್

ಮಂಗಳೂರು (ಮಹಾರಾಷ್ಟ್ರ): 12ರ ಹರೆಯದ ಬಾಲಕನೋರ್ವ ಆಫೀಸ್‌ ಒಳಗಡೆ ನುಗ್ಗಿದ ಚಿರತೆಯನ್ನು ತಾಳ್ಮೆ ಮತ್ತು ಚಾಣಾಕ್ಷತಣದಿಂದ ಕೂಡಿ ಹಾಕಿದ ಘಟನೆ ಮಹಾರಾಷ್ಟ್ರದ ಮಾಲೇಗಾಂವ್ ಪಟ್ಟಣದಲ್ಲಿ ನಡೆದಿದೆ.

ಮಾಲೇಗಾಂವ್ ನಗರದಲ್ಲಿ ಕಳೆದ ಕೆಲ ದಿನಗಳಿಂದ ಚಿರತೆಗಳ ಓಡಾಟ ಹೆಚ್ಚಾಗಿರುವುದರಿಂದ ಆ ಪ್ರದೇಶದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಅದರಂತೆ ಮಾಲೇಗಾಂವ್‌ನ ನಾಂಪುರ ರಸ್ತೆಯ ಪಕ್ಕದಲ್ಲಿರುವ ಆಫೀಸ್‌ ಒಳಗೆ ಚಿರತೆ ನುಗ್ಗಿದ್ದು, ಈ ವೇಳೆ ಮೋಹಿತ್ ವಿಜಯ್ ಅಹಿರೆ ಎಂಬ ಬಾಲಕ ಸೋಫಾದಲ್ಲಿ ಕುಳಿತು ಮೊಬೈಲ್​ನಲ್ಲಿ ಗೇಮ್ ಆಡುತ್ತಿದ್ದನು. ಬಾಗಿಲ ಬಳಿ ಸೋಫಾದಲ್ಲಿ ಕುಳಿತಿದ್ದ ಬಾಲಕನನ್ನು ಗಮನಿಸದ ಚಿರತೆ ಆಫೀಸ್‌ ಒಳಗೆ ನುಗ್ಗಿದೆ. ಬಾಲಕ ಸಮಯಪ್ರಜ್ಞೆ ಮೆರೆದು ಧೈರ್ಯದಿಂದ ಬಾಗಿಲನ್ನು ಹಾಕಿ ಚಿರತೆಯನ್ನು ಕೂಡಿಹಾಕಿದ್ದಾನೆ.

ಈ ಸುದ್ದಿಯನ್ನು ಮೋಹಿತ್​ ಪೋಷಕರಿಗೆ ತಿಳಿಸಿದ್ದು, ಕೂಡಲೇ ಮಾಹಿತಿಯನ್ನು ಪೋಷಕರು ಮತ್ತು ಸ್ಥಳೀಯರು ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆಗೆ ತಿಳಿಸಿದ್ದಾರೆ. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಮತ್ತು ಪೊಲೀಸ್​ ಇಲಾಖಾ ಸಿಬ್ಬಂದಿಗಳು ಚಿರತೆಗೆ ಪ್ರಜ್ಞೆ ತಪ್ಪಿಸುವ ಅರವಳಿಕೆ ನೀಡಿ ಸೆರೆ ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ. ಚಿರತೆ ಸೆರೆಯಾದ ಬಳಿಕ ಆ ಭಾಗದ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. 12ರ ಹರೆಯದ ಬಾಲಕನ ಧೈರ್ಯ ಆಫೀಸ್‌ ಒಳಗಿನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.

”ನಾನು ಆಫೀಸ್‌ ಒಳಗಡೆ ಮೊಬೈಲ್​ ಚಾರ್ಜ್​ ಗೆ ಹಾಕಿ ಗೇಮ್​ ಆಡುತ್ತಿದ್ದೆ. ಈ ವೇಳೆ ಚಿರತೆ ಮೆಲ್ಲನೆ ಆಫೀಸ್‌ ಒಳಗೆ ನುಗ್ಗಿದ್ದು, ನಾನು ಕೂಡಲೇ ಮೊಬೈಲ್​ ಅನ್ನು ಎತ್ತಿಕೊಂಡು ಬಾಗಿಲನ್ನು ಹಾಕಿ ಹೊರಗೆ ಓಡಿದೆ. ಆ ಸಮಯ ನಮ್ಮ ತಂದೆ ಹೊರಗೆ ಹೋಗಿದ್ದರು. ಬಳಿಕ ಅವರು ಬಂದಾಗ ಈ ವಿಷಯವನ್ನು ಅವರಿಗೆ ತಿಳಿಸಿದೆ” ಎಂದು ಬಾಲಕ ಮೋಹಿತ್ ನಡೆದ ಘಟನೆ ಬಗ್ಗೆ​ ವಿವರಿಸಿದ್ದಾನೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here