ಮಂಗಳೂರು(ಪಡುಬಿದ್ರಿ): ನ್ಯಾಯಾಂಗ ಬಂಧನದಲ್ಲಿರುವ ಪಡುಬಿದ್ರಿ ಕಂಚಿನಡ್ಕ ನಿವಾಸಿ, ಕೇರಳ ಮೂಲದ ಆರೋಪಿ ರಾಜೀವ್ 30ಗ್ರಾಂ ಗೋಲ್ಡ್ ನ ಚಿನ್ನಾಭರಣಗಳನ್ನು ಸ್ಥಳೀಯ ಬ್ಯಾಂಕು, ಸೊಸೈಟಿಗಳಲ್ಲಿ ಅಡವಿಟ್ಟು ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದು, ಇದರಲ್ಲಿ ಭಾಗಿಯಾಗಿದ್ದ ನಾಲ್ವರು ಆರೋಪಿಗಳನ್ನು ಪಡುಬಿದ್ರಿ ಪಿಎಸ್‌ಐ ಪ್ರಸನ್ನ ಹಾಗೂ ಸಿಬ್ಬಂದಿಗಳು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಕುಮುಟಾದ ನಿತಿಲ್ ಭಾಸ್ಕರ್ ಶೇಟ್(35), ಸಂಜಯ್ ಶೇಟ್(42) ಮತ್ತು ಸಂತೋಷ್ ಶೇಟ್(39) ಹಾಗೂ ಬೆಳಗಾವಿಯ ಕೈಲಾಸ್ ಗೋರಾಡ(26) ಎಂದು ಗುರುತಿಸಲಾಗಿದೆ. ಪೊಲೀಸರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಆರೋಪಿಗಳಿಂದ ನಕಲಿ 916 ಹಾಲ್‌ಮಾರ್ಕ್ ಸೀಲ್ ಹಾಕಲು ಬಳಸಲಾಗುತ್ತಿದ್ದ ಸುಮಾರು 3.5 ಲಕ್ಷ ರೂ. ಮೌಲ್ಯದ ಮೆಷಿನ್ ಕಂಪ್ಯೂಟರ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿ ರಾಜೀವ್ 30 ಗ್ರಾಂ ಗೋಲ್ಡ್ ಬಳಸಿ, 20 ಗ್ರಾಂ ಚಿನ್ನಾಭರಣದೊಂದಿಗೆ ಗಲ್ಫ್ ರಾಷ್ಟ್ರಕ್ಕೆ ತೆರಳುವ ಹಾಗೂ ಅಲ್ಲಿಂದ ಬರುವ ವೇಳೆ 20 ಗ್ರಾಂ ಶುದ್ಧ ಚಿನ್ನಾಭರಣವನ್ನು ಧರಿಸಿ ಬರುವ ಉಪಾಯಕ್ಕೆ ಆರೋಪಿ ನಿತಿಲ್ ಭಾಸ್ಕರ್ ಶೇಟ್ ಸಹಕರಿಸುತ್ತಿದ್ದ. ಜೊತೆಗೆ ಇನ್ನಿಬ್ಬರು ಆರೋಪಿಗಳು ನಕಲಿ ಚಿನ್ನಾಭರಣಗಳನ್ನು ತಯಾರಿಸಿ ಬೆಳಗಾವಿಯಲ್ಲಿ ನಕಲಿ ಹಾಲ್‌ಮಾರ್ಕ್ ಮೊಹರನ್ನು ಹಾಕುತ್ತಿದ್ದರು. ಬಳಿಕ ಆರೋಪಿ ರಾಜೀವ್ ತನ್ನ ಉಪಾಯವನ್ನೇ ಬದಲಾಯಿಸಿದ್ದಾನೆ. ಇದೀಗ ಸ್ಥಳೀಯ ವಿತ್ತೀಯ ಸಂಸ್ಥೆಗಳಿಗೆ ವಂಚಿಸಲು ಪ್ರಾರಂಭಿಸಿದ ಆರೋಪಿ ರಾಜೀವ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಇವರು ತಯಾರಿಸುತ್ತಿದ್ದ ನಕಲಿ ಚಿನ್ನದ ಪರಿಶುದ್ಧತೆಯನ್ನು ಪರಿಶೀಲಿಸುವ ಯಾವುದೇ ವಿಧಾನಗಳಲ್ಲೂ ನಕಲಿ ಎಂದು ಪತ್ತೆಹಚ್ಚಲು ಸಾಧ್ಯವಾಗುತ್ತಿರಲಿಲ್ಲ. ಈ ಹಿನ್ನಲೆ ಬ್ಯಾಂಕು, ಸೊಸೈಟಿಗಳು ಚಿನ್ನಾಭರಣ ಅಡವಿಟ್ಟು ಸಾಲ ಪಡೆಯುತ್ತಿದ್ದ. ಸಾಲವನ್ನಿತ್ತು ಮರಳಿ ಬಾರದೇ ಇದ್ದಾಗ ಏಲಂ ಪ್ರಕ್ರಿಯೆ ನಡೆಸಲಾಗಿತ್ತು. ಈ ವೇಳೆ ಉಡುಪಿಯ ಬಿಡ್ಡುದಾರರೊಬ್ಬರು ಚಿನ್ನವನ್ನು ಪರಿಶೀಲಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿ ಹಾಗೂ ಆತನ ಪತ್ನಿ ಪಡುಬಿದ್ರಿಯಲ್ಲಿನ ಇಂಡಸ್ಟ್ರಿಯಲ್ ಬ್ಯಾಂಕ್‌ನ ಪಡುಬಿದ್ರಿ ಶಾಖೆಯಲ್ಲಿ 2022 ಸೆ.1 ರಿಂದ ಫೆ.26 ,2024 ರವರೆಗೆ 180 ಗ್ರಾಂ ನಕಲಿ ಚಿನ್ನ ಅಡವಿಟ್ಟು 8.08 ಲಕ್ಷ ಪಡೆದಿದ್ದಾರೆ. ರಾಜೀವ್ ದಂಪತಿ ಸಹಕಾರಿ ಸಂಘವೊಂದರ ಸಿಟಿ ಶಾಖೆಯಿಂದ ಸುಮಾರು 2 ವರ್ಷಗಳ ಅವಧಿಯಲ್ಲಿ 231 ಗ್ರಾಂ ಹಾಗೂ 188 ಗ್ರಾಂ ನಕಲಿ ಚಿನ್ನವನ್ನು ಅಡವಿಟ್ಟು 19 ಲಕ್ಷ ರೂ. ಸಾಲವಾಗಿ ಪಡೆದಿದ್ದಾರೆ. ಉಚ್ಚಿಲದ ಸಹಕಾರಿ ಬ್ಯಾಂಕ್ ಶಾಖೆಯೊಂದರಿಂದ ಮಾರ್ಚ್ 2023 ರಿಂದ ಫೆ.26, 2024 ರ ಅವಧಿಯಲ್ಲಿ 72 ಗ್ರಾಂ ಚಿನ್ನ ಅಡವಿಟ್ಟು 2.86 ಲಕ್ಷ ರೂ. ಗಳ ಸಹಿತ ಒಟ್ಟು 29.94 ಲಕ್ಷ ರೂ. ಪಡೆದಿದ್ದರು.