ಮಂಗಳೂರು(ಭಟ್ಕಳ): ಸಂಸದ ಅನಂತ ಕುಮಾರ್ ಹೆಗಡೆ ನೇತೃತ್ವದಲ್ಲಿ ತಾಲೂಕಿನ ತೆಂಗಿನಗುಂಡಿ ಬಂದರಿನಲ್ಲಿ ಮಾ.4ರಂದು ಹಾರಿಸಲಾಗಿದ್ದ ಹನುಮಧ್ವಜ ಮತ್ತು ವೀರ ಸಾರ್ವಕರ ನಾಮಫಲಕವನ್ನು ಮಾ.6ರ ಮಧ್ಯರಾತ್ರಿ ಹೆಬಳೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ತೆರವುಗೊಳಿಸಿದ್ದಾರೆ.
ಈ ಹಿಂದೆ ಕೂಡ ಹಾಕಲಾಗಿದ್ದ ನಾಮಫಲಕವನ್ನು ಗ್ರಾಮ ಪಂಚಾಯಿತಿ ಅಧಿಕಾರಿಗಳು ಜ.28ರಂದು ಜೆ.ಸಿ.ಬಿ ಮೂಲಕ ತೆರವುಗೊಳಿಸಿದ್ದರು. ನಾಮಫಲಕ ಮರುಸ್ಥಾಪನೆ ಮಾಡುವಂತೆ ಆಗ್ರಹಿಸಿ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರು, ಬಿಜೆಪಿ ಕಾರ್ಯಕರ್ತರು ಜ.30ರಂದು ಹೆಬಳೆ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದ್ದರು. ಅಲ್ಲದೇ, ಬಂದರಿನ ಸಮೀಪ ನಾಮಫಲಕ ಅಳವಡಿಕೆಗೆ ಕಟ್ಟೆ ಪುನರ್ ನಿರ್ಮಿಸಿದ್ದರು.
ಸೋಮವಾರ ಕಾರ್ಯಕರ್ತರ ಭೇಟಿಗೆ ಭಟ್ಕಳಕ್ಕೆ ಬಂದಿದ್ದ ಸಂಸದ ಅನಂತಕುಮಾರ ಹೆಗಡೆ ಹೆಬಳೆಯಲ್ಲಿ ಕಾರ್ಯಕರ್ತರ ಸಮ್ಮುಖದಲ್ಲಿ ವೀರ ಸಾರ್ವಕರ ನಾಮಫಲಕ ಅಳವಡಿಸಿ, ಹನುಮ ಧ್ವಜ ಹಾರಿಸಿದ್ದರು. ಘಟನೆಗೆ ಸಂಬಂಧಿಸಿದಂತೆ ಸಂಸದ ಅನಂತಕುಮಾರ ಹೆಗಡೆ ಸೇರಿ 21 ಜನರ ಮೇಲೆ ಮಂಗಳವಾರ ಪ್ರಕರಣ ಕೂಡ ದಾಖಲಾಗಿತ್ತು. ಬುಧವಾರ ಮಧ್ಯರಾತ್ರಿ ಪೊಲೀಸ್ ಬಂದೋಬಸ್ತ್‌ನಲ್ಲಿ ಕಟ್ಟೆ ತೆರವು ಕಾರ್ಯಚರಣೆ ನಡೆಸಲಾಗಿದ್ದು, ಬಂದರು ಸುತ್ತಮುತ್ತಲಿನ ಪ್ರದೇಶದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.