ತಡೆಯಾಜ್ಞೆಗೆ ಕಾಲಮಿತಿ ಇಲ್ಲ, ತಾನಾಗಿಯೇ ತೆರವಾಗದು-ಮಹತ್ವದ ತೀರ್ಪು ನೀಡಿದ ಸುಪ್ರೀಂ ಕೋರ್ಟ್‌

ಮಂಗಳೂರು: ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೆಳ ಹಂತದ ನ್ಯಾಯಾಲಯಗಳು ಅಥವಾ ಹೈಕೋರ್ಟ್ ನೀಡುವ ತಡೆಯಾಜ್ಞೆ ಈ ಹಿಂದೆ ಆರು ತಿಂಗಳ ಮಟ್ಟಿಗೆ ಊರ್ಜಿತದಲ್ಲಿತ್ತು. ಆ ಬಳಿಕ ಅದನ್ನು ತೆರವಾಗಿದೆ ಎಂದು ಭಾವಿಸಲಾಗುತ್ತಿತ್ತು.

ಆದರೆ, ಈ ಪೂರ್ವಭಾವನೆಯನ್ನು ಸುಪ್ರೀಂ ಕೋರ್ಟ್ ತನ್ನ ಐತಿಹಾಸಿಕ ತೀರ್ಪು ಮೂಲಕ ಹೊಡೆದುಹಾಕಿದೆ. ತಡೆಯಾಜ್ಞೆ ತಾನಾಗಿಯೇ ತೆರವಾಗದು, ಅದಕ್ಕೆ ಕಾಲಮಿತಿ ಇಲ್ಲ ಎಂಬ ಮಹತ್ವದ ತೀರ್ಪನ್ನು ಸುಪ್ರೀಂ ಕೋರ್ಟ್‌ ನೀಡಿದೆ. ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾ. ಅಭಯ ಶ್ರೀನಿವಾಸ ಓಕ, ನ್ಯಾ. ಜೆ.ಬಿ. ಪರ್ದೀವಾಲಾ, ನ್ಯಾ. ಪಂಕಜ್ ಮಿತ್ತಲ್ ಮತ್ತು ನ್ಯಾ. ಮನೋಜ್ ಮಿಶ್ರಾ ಅವರಿದ್ದ ಐವರು ನ್ಯಾಯಮೂರ್ತಿಗಳ ಸಂವಿಧಾನಿಕ ಪೀಠ ಈ ಐತಿಹಾಸಿಕ ತೀರ್ಪು ನೀಡಿದೆ. ಅಸಾಮಾನ್ಯ ಸಂದರ್ಭಗಳಲ್ಲಿ ಮಾತ್ರವೇ ಪ್ರಕರಣಗಳ ಇತ್ಯರ್ಥಕ್ಕೆ ಕಾಲಮಿತಿ ನಿಗದಿ ಮಾಡಬಹುದು. ಪ್ರಕರಣಗಳನ್ನು ಇತ್ಯರ್ಥಪಡಿಸುವಾಗ ಯಾವುದಕ್ಕೆ ಮಹತ್ವ ಯಾ ಆದ್ಯತೆ ನೀಡಬೇಕು ಎಂಬುದನ್ನು ಸಂಬಂಧಪಟ್ಟ ನ್ಯಾಯಾಲಯಗಳ ವಿವೇಚನೆಗೆ ಬಿಡುವುದು ಒಳ್ಳೆಯದು ಎಂದು ಸಂವಿಧಾನ ಪೀಠ ಹೇಳಿದೆ. ಈ ತೀರ್ಪಿಗೆ ಸಹಮತ ವ್ಯಕ್ತಪಡಿಸಿ ನ್ಯಾ. ಓಕಾ ಮತ್ತು ನ್ಯಾ. ಮಿಶ್ರಾ ಅವರು ಪ್ರತ್ಯೇಕ ತೀರ್ಪುಗಳನ್ನು ಬರೆದಿದ್ದಾರೆ.

ಈ ಮೂಲಕ 2018ರಲ್ಲಿ ಮೂವರು ನ್ಯಾಯಮೂರ್ತಿಗಳ ಸುಪ್ರೀಂ ಕೋರ್ಟ್‌ ನ್ಯಾಯಪೀಠ ನೀಡಿದ್ದ ತೀರ್ಪನ್ನು ಇದು ಪಲ್ಲಟಗೊಳಿಸಿದೆ. 2018ರ ನ್ಯಾಯಪೀಠದ ಆ ತೀರ್ಪು, ಹೈಕೋರ್ಟ್ ಸಹಿತ ಎಲ್ಲ ನ್ಯಾಯಾಲಯಗಳು ನೀಡುವ ಮಧ್ಯಂತರ ತಡೆಯಾಜ್ಞೆಗಳನ್ನು ನಿರ್ದಿಷ್ಟವಾಗಿ ವಿಸ್ತರಿಸುವ ಆದೇಶ ಇಲ್ಲದೆ ಇದ್ದ ಸಂದರ್ಭಗಳಲ್ಲಿ ಅವು ತಾವಾಗಿಯೇ ತೆರವಾಗುತ್ತವೆ ಎಂದು ಹೇಳಿತ್ತು. ಅಂದರೆ, ಆರು ತಿಂಗಳ ನಂತರದಲ್ಲಿ ಯಾವುದೇ ವಿಚಾರಣೆ ಅಥವಾ ಕಾನೂನು ಪ್ರಕ್ರಿಯೆಗೆ ತಡೆ ಇರುವುದಿಲ್ಲ ಎಂದು ಹೇಳಿತ್ತು. ಸುಪ್ರೀಂ ಕೋರ್ಟ್ ನೀಡಿದ್ದ ತಡೆಯಾಜ್ಞೆಗಳಿಗೆ ಈ ಮಾತು ಅನ್ವಯಿಸದು ಎಂದು ಆ ತೀರ್ಪು ಹೇಳಿತ್ತು. ತೀರ್ಪನ್ನು ಪ್ರಕಟಿಸಿದ ಅಭಯ ಶ್ರೀನಿವಾಸ ಓಕಾ ಅವರು 2018ರ ಪ್ರಕರಣದ ತೀರ್ಪನ್ನು ಒಪ್ಪಿಕೊಳ್ಳಲು ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

 

 

 

 

LEAVE A REPLY

Please enter your comment!
Please enter your name here