ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ ನಾನು ಟಿಕೆಟ್ ಆಕಾಂಕ್ಷಿ – ನನಗೆ ಟಿಕೆಟ್ ಸಿಗುವ ವಿಶ್ವಾಸವಿದೆ – ಡಿವಿ ಸದಾನಂದ ಗೌಡ ಅಚ್ಚರಿಯ ಹೇಳಿಕೆ

ಮಂಗಳೂರು(ಬೆಂಗಳೂರು): ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿದ್ದ ಸಂಸದ ಡಿ.ವಿ ಸದಾನಂದಗೌಡ, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಎನ್ನುವ ಮೂಲಕ ಮತ್ತೊಮ್ಮೆ ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಈ ಹಿಂದೆ ಬೇರೆಯವರಿಗೆ ಟಿಕೆಟ್ ಕೊಡಿ ಎಂದು ಹೇಳಿದ್ದೆ. ಕ್ಷೇತ್ರದ ಎಲ್ಲಾ ಶಾಸಕರು, ಮುಖಂಡರು ನೀವೇ ಸ್ಪರ್ಧಿಸುವಂತೆ ಒತ್ತಾಯ ಮಾಡಿದ್ದಾರೆ. ಇನ್ನೂ ನಾನು ಹತ್ತು ವರ್ಷ ರಾಜಕೀಯದಲ್ಲಿರಬಹುದು. ಒಂದು ವೇಳೆ ನನಗೆ ಟಿಕೆಟ್ ಕೊಡದಿದ್ರೆ, ಸ್ವಲ್ಪ ನೋವಾಗುತ್ತದೆ. ನನಗೆ ಟಿಕೆಟ್ ಸಿಗುವ ವಿಶ್ವಾಸವಿದೆ, ಬಿಜೆಪಿ ನನಗೆ ಎಲ್ಲವೂ ಕೊಟ್ಟಿದೆ ಎಂದಿದ್ದಾರೆ. ಕೆಲ ಸಮಯದ ಹಿಂದೆ ಹಾಸನದಲ್ಲಿ ಮಾತನಾಡಿದ್ದ ಡಿ.ವಿ.ಸದಾನಂದ ಗೌಡ, ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದು, ವಿಪಕ್ಷ ನಾಯಕ ಆರ್.ಅಶೋಕ್ ಸಹಿತ ಪಕ್ಷದ ಕೆಲ ನಾಯಕರು ಅವರ ಮನವೊಲಿಸುವಲ್ಲಿ ಸಫಲರಾಗಿದ್ದರು.ಅದಾದ ಬಳಿಕ ಅವರು, ಚುನಾವಣಾ ರಾಜಕಾರಣಕ್ಕೆ ನಿವೃತ್ತಿ ಘೋಷಣೆಯನ್ನು ಹಿಂಪಡೆಯುತ್ತೇನೆ ಎಂದಿದ್ದರು.ಇದೀಗ, ನಾನು ಈ ಬಾರಿಯ ಬಿಜೆಪಿ ಟಿಕೆಟ್ ಆಕಾಂಕ್ಷಿ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಇನ್ನು ವಿರೋಧ ಪಕ್ಷದ ನಾಯಕ ಆರ್ ಅಶೋಕ ಅವರಲ್ಲಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಡಿವಿ ಸದಾನಂದ ಗೌಡ ಅವರ ಮನವೊಲಿಸಿ ಟಿಕೆಟ್ ನೀಡುವ ಚರ್ಚೆ ನಡೆದಿದೆಯೇ ಎಂದು ಕೇಳಿದ ಪ್ರಶ್ನೆಗೆ ಅಶೋಕ್ ಸ್ಪಷ್ಟವಾದ ಉತ್ತರ ನೀಡಿಲ್ಲ. ಬೆಂಗಳೂರು ಉತ್ತರ, ದಕ್ಷಿಣ ಮತ್ತು ಕೇಂದ್ರ ಸೇರಿದಂತೆ ಎಲ್ಲ ಕ್ಷೇತ್ರಗಳಿಗೆ ಸಂಭಾವ್ಯ ಅಭ್ಯರ್ಥಿಗಳ ಬಗ್ಗೆ ವರಿಷ್ಠರಿಗೆ ತಿಳಿಸಲಾಗಿದೆ, ಕೇಂದ್ರೀಯ ನಾಯಕರು ಬಂದು ಸಮೀಕ್ಷೆ ನಡೆಸಿದ್ದಾರೆ ಎಂದಷ್ಟೇ ಹೇಳಿದ್ದಾರೆ.

LEAVE A REPLY

Please enter your comment!
Please enter your name here