ಮಂಗಳೂರು(ರಾಯ್‌ಸೆನ್): ಮಧ್ಯಪ್ರದೇಶದ ರಾಯ್‌ಸೆನ್ ಜಿಲ್ಲೆಯ ಸುಲ್ತಾನ್‌ಪುರ ಪ್ರದೇಶದಲ್ಲಿ ಸೋಮವಾರ ಮದುವೆ ಮೆರವಣಿಗೆ ಹೋಗುತ್ತಿದ್ದವರ ಮೇಲೆ ಟ್ರಕ್ ಹರಿದು ಐದು ಮಂದಿ ಮೃತಪಟ್ಟಿದ್ದು, 11 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹೊಶಂಗಾಬಾದ್ ಜಿಲ್ಲೆಯ ಅಂಚಲಖೇಡದಿಂದ ಮದುವೆ ಮೆರವಣಿಗೆ ಆಗಮಿಸಿತ್ತು. ಖಮಾರಿಯಾ ಗ್ರಾಮದ ಬಳಿ ರಾತ್ರಿ 10 ಗಂಟೆ ಸುಮಾರಿಗೆ ದುರ್ಘಟನೆ ಸಂಭವಿಸಿದೆ ಎಂದು ರಾಯ್‌ಸೆನ್ ಜಿಲ್ಲಾಧಿಕಾರಿ ಅರವಿಂದ್ ದುಬೆ ತಿಳಿಸಿದ್ದಾರೆ. ಮೆರವಣಿಗೆಯ ಭಾಗವಾಗಿ ದೀಪ ಹಿಡಿದುಕೊಂಡು ಸಾಗುತ್ತಿದ್ದ ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಸುಲ್ತಾನಪುರ ಪೊಲೀಸ್ ಠಾಣೆಯ ಉಸ್ತುವಾರಿ ರಜತ್ ಸಾರಥೆ ಹೇಳಿದ್ದಾರೆ. ವಿರುದ್ಧ ದಿಕ್ಕಿನಿಂದ ವೇಗವಾಗಿ ಬಂದ ಟ್ರಕ್ ಓವರ್‌ಟೇಕ್ ಮಾಡುವ ಭರದಲ್ಲಿ ಅವಘಡ ಸಂಭವಿಸಿದೆ. ಟ್ರಕ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಅವರು ಹೇಳಿದರು. ಘಟನೆಗೆ ಸಂತಾಪ ಸೂಚಿಸಿರುವ ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್, ಮೃತರ ಕುಟುಂಬಕ್ಕೆ ₹4 ಲಕ್ಷ ಮತ್ತು ಗಾಯಗೊಂಡವರಿಗೆ ತಲಾ ₹50,000 ಪರಿಹಾರ ಘೋಷಿಸಿದ್ದಾರೆ.