



ಮಂಗಳೂರು: ಸಾಮಾನ್ಯ ಕಾರ್ಯಕರ್ತರನ್ನ ಗುರುತಿಸೋದು ಬಿಜೆಪಿಯ ವಿಶೇಷತೆ. ಪಕ್ಷದ ರಾಷ್ಟ್ರೀಯ ನಾಯಕರು ಯೋಚನೆ ಮಾಡಿಕೊಂಡು ಅಭ್ಯರ್ಥಿಯ ಆಯ್ಕೆ ಮಾಡ್ತಾರೆ. ಪಕ್ಷ ನಿಂತ ನೀರಾಗಬಾರದು, ಹೊಸಬರು ಬರ್ತಾ ಇರಬೇಕು, ಅದನ್ನು ನಾನು ಸ್ವಾಗತಿಸ್ತೇನೆ. ಪಕ್ಷದ ರಾಷ್ಟ್ರೀಯ ನಾಯಕರ ನಿರ್ಧಾರಕ್ಕೆ ನಾವು ಬದ್ದರಾಗಿದ್ದೇವೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.







ಈ ಬಾರಿ ಸಂಸದ ನಳಿನ್ ಕುಮಾರ್ ಕಟೀಲ್ ಗೆ ಬಿಜೆಪಿ ಟಿಕೆಟ್ ಕೈ ತಪ್ಪೋ ಸಾಧ್ಯತೆ ಇದೆ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ. ಯಾರು ಅಭ್ಯರ್ಥಿಯದರೂ ಮೋದಿ ಪ್ರಧಾನಿಯಾಗಬೇಕು, ಬಿಜೆಪಿ ಮತ್ತೆ ಗೆಲ್ಲಬೇಕು. ರಾಷ್ಟ್ರೀಯ ನಾಯಕರ ಯೋಚನೆಗೆ ನಾವು ಬದ್ದರಾಗಿ ಕೆಲಸ ಮಾಡ್ತೇವೆ. ಪಾರ್ಟಿ ಏನು ಹೇಳುತ್ತೋ ಅದನ್ನ ನಾವು ಮಾಡ್ತೇವೆ. ಗುಡಿಸಿ ಅಂದ್ರೆ ಗುಡಿಸ್ತೇವೆ, ಒರೆಸಿ ಅಂದ್ರೆ ಒರೆಸ್ತೇವೆ. ಅಧಿಕಾರ ಪ್ರಮುಖ ಅಲ್ಲ, ರಾಷ್ಟ್ರೀಯ ನಾಯಕರ ಚಿಂತನೆ ಮುಖ್ಯ. ನಾನು ಸಾಮಾಜಿಕ ತಾಣಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ, ಪಕ್ಷದ ನಿರ್ಧಾರಕ್ಕೆ ಬದ್ದ ಎಂದವರು ಹೇಳಿದ್ದಾರೆ. ಮುಂದುವರಿದು ಮಾತನಾಡಿದ ಅವರು, ನಾವು ಇದನ್ನೇ ನಂಬಿ ಇದ್ದವರಲ್ಲ, ಸಂಘಟನೆ ಕಾರ್ಯವನ್ನು ನಂಬಿದವರು. ಕಾರ್ಯಕರ್ತರ ಆಧಾರದಲ್ಲಿ ಇದೆಲ್ಲಾ ಕಾರ್ಯಗಳು ಆಗುತ್ತೆ. ರಾಷ್ಟ್ರೀಯ ನಾಯಕರ ಯಾವ ತೀರ್ಮಾನಕ್ಕೂ ನಾವು ಬದ್ದ. ನನಗೆ ಮೂರು ಬಾರಿ ಅವಕಾಶ ಕೊಡಲಾಗಿದೆ, 15 ವರ್ಷ ಕೆಲಸ ಮಾಡಿದ್ದೇನೆ.ಎಲ್ಲೂ ವ್ಯತ್ಯಾಸಗಳಿಲ್ಲ, ನಮ್ಮ ಪಕ್ಷದಲ್ಲಿ ತುಳಿಯೋ ಕೆಲಸ ನಡೆಯಲ್ಲ, ಬೆಳೆಸೋ ಕೆಲಸ ಮಾಡ್ತಾರೆ. ನಾನು ಸಾಮಾನ್ಯ ಕಾರ್ಯಕರ್ತನಾಗಿದ್ದೆ, ಸಂಘದ ವಿಚಾರ ಇಟ್ಟುಕೊಂಡಿದ್ದೆ. ಬಿಜೆಪಿ ಕೆಲಸ ಮಾಡು ಅಂತ ಹೇಳಿದ್ರು, ಲೋಕಸಭೆಗೆ ನಿಂತೆ. ಸಾಮಾನ್ಯ ಕಾರ್ಯಕರ್ತನಿಗೆ ರಾಜ್ಯಾಧ್ಯಕ್ಷ ಸ್ಥಾನ ಕೂಡ ಕೊಟ್ಟರು. ಅವಕಾಶ ಸಿಕ್ಕಾಗ ನ್ಯಾಯ ಸಿಕ್ಕಿದೆ, ಸಿಗದೇ ಇದ್ದಾಗ ಅನ್ಯಾಯ ಆಗಿದೆ ಅನ್ನೋ ಹಕ್ಕು ನನಗಿಲ್ಲ. ಪಕ್ಷ ಎಲ್ಲರನ್ನೂ ಬೆಳೆಸಿದೆ, ಪಕ್ಷದ ಕೆಲಸಕ್ಕೆ ಜನ ಬೇಕಿದೆ. ಅಸಮಾಧಾನ ಯಾಕೆ? ನಾವು ಮಾಡೋದು ಸಂಘಟನೆ ಕಾರ್ಯ. ಅಸಮಾಧಾನ ಯಾವುದೇ ಸಂಧರ್ಭದಲ್ಲಿ ಇರಲ್ಲ, ಅದು ಅಸಾಧ್ಯ ಎಂದು ಹೇಳಿದ್ದಾರೆ.



ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ












