ಮಂಗಳೂರು/ಶಿವಮೊಗ್ಗ: ಲೋಕಸಭೆ ಚುನಾವಣೆ 2024ಕ್ಕೆ ಬಿಜೆಪಿ ಕರ್ನಾಟಕದ 20 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ ಮಾಡಿದೆ. 9 ಹಾಲಿ ಸಂಸದರಿಗೆ ಟಿಕೆಟ್ ಕೈ ತಪ್ಪಿದೆ. ಉಡುಪಿ-ಚಿಕ್ಕಮಗಳೂರು ಹಾಲಿ ಸಂಸದೆ ಶೋಭಾ ಕರಂದ್ಲಾಜೆಗೆ ಕ್ಷೇತ್ರವೇ ಬದಲಾಗಿದೆ. ಆದರೆ ಪುತ್ರ ಕಾಂತೇಶ್ ಈಶ್ವರಪ್ಪಗೆ ಹಾವೇರಿ-ಗದಗ ಟಿಕೆಟ್‌ಗಾಗಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಪಟ್ಟು ಹಿಡಿದಿದ್ದರು. ಆದರೆ ಟಿಕೆಟ್ ಕೈತಪ್ಪಿದ್ದರಿಂದ ಈಶ್ವರಪ್ಪ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ಹಾವೇರಿಯಿಂದ ಕೆ.ಇ.ಕಾಂತೇಶ್ ಅವರಿಗೆ ಬಿಜೆಪಿ ಟಿಕೆಟ್ ನೀಡುವುದಾಗಿ ಯಡಿಯೂರಪ್ಪ ಭರವಸೆ ನೀಡಿದ್ದರು. ಅವರ ಮಾತಿನಂತೆ ನಮ್ಮ ಮಗ ಜನರ ವಿಶ್ವಾಸವನ್ನು ಗಳಿಸಲು ಪ್ರಯತ್ನಿಸುತ್ತಿದ್ದರು. ಆದರೆ, ಅಂತಿಮವಾಗಿ ನನ್ನ ಮಗನಿಗೆ ಟಿಕೆಟ್ ನಿರಾಕರಿಸಲಾಗಿದ್ದು ಯಡಿಯೂರಪ್ಪ ನಮಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿರುವ ಅವರು, ಶೋಭಾ ಕರಂದ್ಲಾಜೆ ದೆಹಲಿಗೆ ಹೋಗಿ ಟಿಕೆಟ್ ಕೇಳಲಿಲ್ಲ. ಯಡಿಯೂರಪ್ಪ ಅವರ ಪರವಾಗಿ ಹೈಕಮಾಂಡ್ ಜೊತೆ ಮಾತನಾಡಿ ಟಿಕೆಟ್ ಕೊಡಿಸಿದ್ದಾರೆ. ಹಿಂದುತ್ವದ ಪರ ಹಾಗೂ ಸಂಘ ನಿಷ್ಠ ಬಿಜೆಪಿ ಮುಖಂಡರನ್ನು ಯಡಿಯೂರಪ್ಪ ಬದಿಗೆ ಸರಿಸುವ ಕೆಲಸ ಮಾಡಿದ್ದಾರೆ. ಅದಕ್ಕೆ ನಾನು, ನಳಿನ್ ಕುಮಾರ್ ಕಟೀಲ್, ಪ್ರತಾಪಸಿಂಹ, ಸಿ.ಟಿ.ರವಿ, ಡಿ.ವಿ.ಸದಾನಂದಗೌಡ, ಬಸನಗೌಡ ಪಾಟೀಲ ಯತ್ನಾಳ ಸಾಕ್ಷಿ’ ಎಂದು ವಾಗ್ದಾಳಿ ನಡೆಸಿದರು.
ಈ ವಿಚಾರದಲ್ಲಿ ನನ್ನ ಅಭಿಮಾನಿಗಳು ಏನು ಹೇಳುತ್ತಾರೊ ಅದನ್ನು ಕೇಳುತ್ತೇನೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಬಿಜೆಪಿಯಲ್ಲಿ ಕಡೆಗಣಿಸುತ್ತಿದ್ದಾರೆ. ಪಕ್ಷ ಕರ್ನಾಟಕದಲ್ಲಿ ಒಂದು ಕುಟುಂಬದ ಹಿಡಿತದಲ್ಲಿದೆ. ಯಡಿಯೂರಪ್ಪ ವೈಯಕ್ತಿಕ ಹಿತಾಸಕ್ತಿಯಿಂದ ತಾಯಿಯ ಕುತ್ತಿಗೆ ಹಿಸುಕುತ್ತಿದ್ದಾರೆ. ಪಕ್ಷ ಉಳಿಸಬೇಕಿದೆ. ಹೀಗಾಗಿ ಅದರ ವಿರುದ್ಧ ನಾನು ಧ್ವನಿ ಎತ್ತಲಿದ್ದೇನೆ. ಕಾಂತೇಶ್ ಗೆ ಪದವೀಧರ ಕ್ಷೇತ್ರದ ಟಿಕೆಟ್ ಕೊಡಿಸುತ್ತೇವೆ ಎಂದು ಕರ್ನಾಟಕ ಚುನಾವಣೆ ಉಸ್ತುವಾರಿ ರಾಧಾಮೋಹನ್ ಹೇಳಿದ್ದಾರೆ. ನಾನು ಇನ್ನು ಆ ಬಗ್ಗೆ ಏನು ತೀರ್ಮಾನ ಮಾಡಿಲ್ಲ. ‘ನಾನು ಯಾವಾಗಲೂ ಮೋದಿ ಪರವಾಗಿಯೇ ಇರುತ್ತೇನೆ. ಪಕ್ಷೇತರನಾಗಿ ಸ್ಪರ್ಧೆ ಮಾಡಿದರೂ ನನ್ನ ಬೆಂಬಲ ಅವರಿಗೆ ಇರಲಿದೆ’ ಎಂದವರು ಹೇಳಿದ್ದಾರೆ.