ಮಂಗಳೂರು(ಬೆಂಗಳೂರು): ಇಲ್ಲಿನ ಅರಮನೆ ಮೈದಾನವನ್ನು ಸರ್ಕಾರದ ವಶಕ್ಕೆ ತೆಗೆದುಕೊಳ್ಳುವ ಸಂಬಂಧ ಸುಪ್ರೀಂ ಕೋರ್ಟ್ನಲ್ಲಿರುವ ಅರ್ಜಿಯನ್ನು ಆದಷ್ಟು ಬೇಗ ಇತ್ಯರ್ಥಗೊಳಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ.
ಗುರುವಾರ(ಮಾ.14) ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬಂದಿದ್ದು, ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ಸೂಕ್ತ ಕ್ರಮ ಜರುಗಿಸುವಂತೆ ಮುಖ್ಯಕಾರ್ಯದರ್ಶಿಗೆ ನಿರ್ದೇಶನ ನೀಡಿದ್ದಾರೆ. ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಂದಾಯ ಸಚಿವ ಕೃಷ್ಣಬೈರೇಗೌಡ, ‘ಈ ಜಾಗ ಸಾರ್ವಜನಿಕರದ್ದು ಎಂದು ಕಾನೂನು ಮಾಡಲಾಗಿದೆ. ಅದನ್ನು ಹೈಕೋರ್ಟ್ ಸಹ ಒಪ್ಪಿದೆ. ಅದರ ವಿರುದ್ಧ ರಾಜವಂಶಸ್ಥರು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಹಾಕಿದ್ದಾರೆ. ಯಥಾಸ್ಥಿತಿ ಕಾಪಾಡುವಂತೆಯೂ ಸುಪ್ರೀಂಕೋರ್ಟ್ ಸೂಚಿಸಿದೆ. ಆದರೆ, ಇಷ್ಟು ದಿನ ಯಥಾಸ್ಥಿತಿ ಏಕೆ? ಸೂಕ್ತ ವಕೀಲರನ್ನು ನೇಮಕ ಮಾಡಿ ಸರ್ಕಾರದ ನಿಲುವಿಗೆ ಪೂರಕವಾಗಿ ಮೂಲದಾವೆ ಪ್ರಕಾರ ಮುಂದುವರೆಯಬೇಕು ಎಂದು ಮುಖ್ಯಮಂತ್ರಿ ಸೂಚಿಸಿದರು’ ಎಂದು ಹೇಳಿದ್ದಾರೆ.
ಬೆಂಗಳೂರು ಅರಮನೆ ಜಾಗದ ಹೊರ ಭಾಗದಲ್ಲಿ ರಸ್ತೆ ಅಗಲೀಕರಣ ಮಾಡುವುದಾದರೆ ಟಿಡಿಆರ್ (ಅಭಿವೃದ್ಧಿ ಹಕ್ಕುಗಳ ವರ್ಗಾವಣೆ) ಕೊಟ್ಟು ರಸ್ತೆ ಮಾಡಲು ನ್ಯಾಯಾಲಯ ಆದೇಶಿಸಿತ್ತು. ಆ ಬಳಿಕ ಸರ್ಕಾರ ಹಿಂದಕ್ಕೆ ಸರಿಯಿತು. ಮತ್ತೆ ಸರ್ಕಾರ ಭೂಮಿ ವಶಕ್ಕೆ ಪಡೆದು ಕಾಂಪೌಂಡ್ ಹಾಕಿತು ಎಂದು ಕೃಷ್ಣಬೈರೇಗೌಡ ತಿಳಿಸಿದರು. ಇದರ ವಿರುದ್ಧ ಸುಪ್ರೀಂ ಕೋರ್ಟ್ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆಯಾಯಿತು. ಮುಂದಿನ ವಾರವೇ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಹೆಚ್ಚುವರಿ ಕಾರ್ಯದರ್ಶಿ, ಬಿಬಿಎಂಪಿ ಆಯುಕ್ತರ ಖುದ್ದು ಹಾಜರಿಗೆ ಸೂಚನೆ ನೀಡಿದೆ. ಹೀಗಾಗಿ ಸಂಪುಟದಲ್ಲಿ ಚರ್ಚೆ ಮಾಡಿ ರಸ್ತೆ ಅಗಲೀಕರಣ ಮಾಡಬೇಕೆಂಬ ನಿರ್ಧಾರಕ್ಕೆ ಬರಲಾಗಿದೆ. 15.5 ಎಕರೆ ಟಿಡಿಆರ್ ಕೊಡಲು ತಾತ್ವಿಕ ತೀರ್ಮಾನ ತೆಗೆದುಕೊಳ್ಳಲಾಗಿದ್ದು, ಟಿಡಿಆರ್ ಯಾರಿಗೆ ಕೊಡುವುದು ಎಂಬ ಪ್ರಶ್ನೆ ಎದುರಾಗಿದೆ ಎಂದು ಅವರು ಹೇಳಿದ್ದಾರೆ.