ಮಂಗಳೂರು: ಹಿಂದೂ ಮುಖಂಡ, ಪುತ್ತಿಲ ಪರಿವಾರದ ನಾಯಕ ಅರುಣ್ ಕುಮಾರ್ ಪುತ್ತಿಲ ಅವರ ಪಕ್ಷ ಸೇರ್ಪಡೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನಿವಾಸದಲ್ಲಿ ಗುರುವಾರ(ಮಾ.14) ರಾತ್ರಿ ನಡೆದ ಸಭೆಯಲ್ಲಿ ಹಸಿರು ನಿಶಾನೆ ಸಿಕ್ಕಿದೆ.
ಬೆಂಗಳೂರಿನ ರಾಜ್ಯ ಬಿಜೆಪಿ ಕಚೇರಿಗೆ ಭೇಟಿ ನೀಡಿ ಪ್ರಮುಖ ನಾಯಕರೊಂದಿಗೆ ಸಮಾಲೋಚನೆ ಬಳಿಕ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನಿವಾಸಕ್ಕೆ ಆಗಮಿಸಿದ ಪುತ್ತಿಲರನ್ನು ಆತ್ಮೀಯವಾಗಿ ಬರಮಾಡಿಕೊಂಡ ವಿಜಯೇಂದ್ರ ಕೆಲ ಹೊತ್ತು ಚರ್ಚೆ ನಡೆಸಿದರು. ಬಳಿಕ ಕೈಗೊಂಡ ತೀರ್ಮಾನದಂತೆ ಪುತ್ತಿಲ ಅವರು ಮಂಗಳೂರು ಬಿಜೆಪಿ ಕಚೇರಿಯಲ್ಲಿ ಶುಕ್ರವಾರ(ಮಾ.15) ಸಂಜೆ ಪುತ್ತಿಲ ಅವರು ಪಕ್ಷಕ್ಕೆ ಮರು ಸೇರ್ಪಡೆಯಾಗಲಿದ್ದಾರೆ. ಪುತ್ತೂರು ಭಾಗದಲ್ಲಿ ಪ್ರಭಾವಿ ನಾಯಕರಾಗಿರುವ ಪುತ್ತಿಲ ಅವರು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ನಳಿನ್ ಕುಮಾರ್ ಕಟೀಲು ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು. ಪುತ್ತೂರು ಬಿಜೆಪಿ ಅಧ್ಯಕ್ಷ ಸ್ಥಾನ ನೀಡುವಂತೆ ಪಟ್ಟು ಹಿಡಿದಿದ್ದಲ್ಲದೆ, ಕಳೆದ ವಿಧಾನಸಭಾ ಚುನಾವಣೆಗೆ ಪಕ್ಷೇತರರಾಗಿ ಸ್ಪರ್ಧಿಸಿ 62,458 ಮತ ಗಳಿಸಿದ್ದರು. ಪರಿಣಾಮ ಬಿಜೆಪಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟು ಕಾಂಗ್ರೆಸ್ ಗೆಲುವಿನ ಗೆರೆ ದಾಟಿತ್ತು.
ಈ ಬಾರಿಯೂ ನಳಿನ್ ಕುಮಾರರಿಗೆ ಟಿಕೆಟ್ ಕೊಟ್ಟರೆ ಪ್ರತಿಸ್ಪರ್ಧಿಯಾಗಿ ಕಣಕ್ಕಿಳಿಯುವ ಎಚ್ಚರಿಕೆ ಕೊಟ್ಟಿದ್ದರು. ಈಗ ಕ್ಯಾ.ಬ್ರಜೇಶ್ ಚೌಟರಿಗೆ ಟಿಕೆಟ್ ಘೋಷಿಸಿದ್ದು, ಇದರ ಬೆನ್ನಲ್ಲೇ ಪುತ್ತಿಲ ಸೇರ್ಪಡೆಗೆ ಬಿಜೆಪಿ ವಲಯದಲ್ಲಿ ಹಸಿರು ನಿಶಾನೆ ದೊರೆತಿದೆ. ಈ ಮೂಲಕ ಪುತ್ತೂರಿನಲ್ಲಿನ ಬಿಜೆಪಿ ಬಣ ತಿಕ್ಕಾಟ ಕೊನೆಗೊಳ್ಳಲಿದೆ. ಪಕ್ಷ ಸೇರ್ಪಡೆ ಬಳಿಕವಷ್ಟೇ ಅರುಣ್ ಪುತ್ತಿಲ ಅವರಿಗೆ ಗೌರವಯುತ ಹುದ್ದೆ ನೀಡುವ ಬಗ್ಗೆ ಭರವಸೆ ನೀಡಿದ್ದಾರೆ ಎನ್ನಲಾಗಿದ್ದು ಇದಕ್ಕೆ ಪುತ್ತಿಲ ಸಹಮತ ಸೂಚಿಸಿದ್ದಾರೆ ಎನ್ನಲಾಗಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ಅರುಣ್ ಕುಮಾರ್ ಪುತ್ತಿಲ ಅವರು ‘ ಮೋದಿ ಪರಿವಾರದ ಜತೆ ಪುತ್ತಿಲ ಪರಿವಾರ ಕೆಲಸ ಮಾಡಲಿದೆ. ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ಕೆಲಸಕ್ಕೆ ನಾವೆಲ್ಲರೂ ಕೈಜೋಡಿಸಲಿದ್ದೇವೆ. ದಕ್ಷಿಣ ಕನ್ನಡದ ಬಿಜೆಪಿ ಅಭ್ಯರ್ಥಿಯನ್ನು ದೊಡ್ಡ ಅಂತರದಿಂದ ಗೆಲ್ಲಿಸುವಲ್ಲಿ ನಾವು ಶ್ರಮ ವಹಿಸುತ್ತೇವೆ” ಎಂದು ಹೇಳಿದ್ದಾರೆ.