ಮಂಗಳೂರು(ಬೆಂಗಳೂರು): ಡಾ.ಡಿ.ಎಂ. ನಂಜುಂಡಪ್ಪ ವರದಿಯ ಪ್ರಾದೇಶಿಕ ಅಸಮತೋಲನ ನಿವಾರಣಾ ಆಯೋಗದ ಅಧ್ಯಕ್ಷರಾಗಿ ಆರ್ಥಿಕ ತಜ್ಞ ಪ್ರೊ.ಗೋವಿಂದ ರಾವ್ ಅವರನ್ನು ನೇಮಕ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ನಿರ್ದೇಶಕ ಡಿ.ಚಂದ್ರಶೇಖರಯ್ಯ ಆದೇಶ ಹೊರಡಿಸಿದ್ದು, ಈ ಕುರಿತಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಕ್ಸ್ ನಲ್ಲಿ ಆದೇಶದ ಪ್ರತಿಯನ್ನು ಹಂಚಿಕೊಂಡಿದ್ದಾರೆ. ಪ್ರಾದೇಶಿಕ ಅಸಮತೋಲನ ನಿವಾರಣಾ ವರದಿಯು 22 ವರ್ಷಗಳಷ್ಟು ಹಳೆಯದಾಗಿದೆ. ಹೀಗಾಗಿ ರಾಜ್ಯ ಸರಕಾರವು 233 ತಾಲೂಕುಗಳಲ್ಲಿ ಪ್ರಸ್ತುತ ಲಭ್ಯವಿರುವ ಅಂಕಿ-ಅಂಶಗಳ ಆಧಾರದ ಮೇಲೆ ಹಿಂದುಳಿದಿರುವಿಕೆ ಅಧ್ಯಯನ ಮಾಡಿ ಸಮಗ್ರ ಸಂಯುಕ್ತ ಅಭಿವೃದ್ಧಿ ಸೂಚ್ಯಂಕ ಗುರುತಿಸಲು ಆರ್ಥಿಕ ತಜ್ಞ ಪ್ರೊ.ಗೋವಿಂದ ರಾವ್ ಅವರನ್ನು ಪ್ರಾದೇಶಿಕ ಅಸಮತೋಲನ ನಿವಾರಣಾ ಆಯೋಗದ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.