ಚಾರ್ಲ್ಸ್ ಗುಡ್‌ಇಯರ್-ಟಯರ್‌ ಆವಿಷ್ಕಾರದ ಹಿಂದಿನ ಸತ್ಯಕಥೆ

ಬೋಯಿಂಗ್ ವಿಮಾನ ಲ್ಯಾಂಡ್ ಆಗುವ ವೇಳೆ ಭೂಮಿಯನ್ನು ಸ್ಪರ್ಶಿಸಿದಾಗ ನಾವು ಚಾರ್ಲ್ಸ್ ಗುಡ್‌ಇಯರ್ ಅವರನ್ನು ನೆನಪಿಸಿಕೊಳ್ಳಲೇಬೇಕು. ಸುಮಾರು 350-400 ಜನರಿರುವ, ಲಗೇಜ್‌, ಪೆಟ್ರೋಲ್‌ ಇನ್ನಿತರ ವಸ್ತುಗಳೊಂದಿಗೆ ಅಷ್ಟೊಂದು ದೊಡ್ಡ ತೂಕದ ವಿಮಾನ ಭೂಮಿಯನ್ನು ಸ್ಪರ್ಶಿಸುವ ಸಮಯದ ಆ ಘರ್ಷಣೆ ನಮಗೆ ಒಂದಿಷ್ಟೂ ತಿಳೀಯುವುದಿಲ್ಲ ವಿಮಾನ ಭೂಮಿಯನ್ನು ಸ್ಪರ್ಶಿಸುತ್ತಿದ್ದಂತೆ ನಮಗೆ ಮೆತ್ತೆಯ ಅನುಭವ ಸಿಗುತ್ತಿದ್ದರೆ ಅದಕ್ಕೆ ಕಾರಣ ಓರ್ವ ವ್ಯಕ್ತಿಯ ಛಲ ಬಿಡದ ಸಾಧನೆಯ ಫಲ. ಆ ವ್ಯಕ್ತಿಯೇ ಗುಡ್ ಇಯರ್.

ಡಿಸೆಂಬರ್ 29, 1800 ರಂದು ಕನೆಕ್ಟಿಕಟ್‌ನ ನ್ಯೂ ಹೆವನ್‌ನಲ್ಲಿ ಹಾರ್ಡ್ವೇರ್ ಅಂಗಡಿಯ ಮಾಲೀಕನ ಮಗನಾಗಿ ಜನಿಸಿದ ಗುಡ್ ಇಯರ್ 1830 ರಲ್ಲಿ ಆತನ ತಂದೆಯ ವ್ಯವಹಾರ ನೆಲಕಚ್ಚಿದಾಗ, ಗುಡ್ಇಯರ್ ರಬ್ಬರ್ ಉತ್ಪನ್ನಗಳ ಹೊಸ ಕ್ಷೇತ್ರದಲ್ಲಿ ತನ್ನ ಅದೃಷ್ಟವನ್ನು ಹುಡುಕಲು ನಿರ್ಧರಿಸುತ್ತಾನೆ. ಯಂತ್ರಶಾಸ್ತ್ರ ಮತ್ತು ರಸಾಯನಶಾಸ್ತ್ರದಲ್ಲಿ ತೀವ್ರ ಆಸಕ್ತಿಯೊಂದಿಗೆ ಬೆಳೆದ ಗುಡ್ ಇಯರ್, ಆರಂಭದಲ್ಲಿ ವ್ಯವಹಾರ ಕ್ಷೇತ್ರದಲ್ಲಿ ತನ್ನ ಅದೃಷ್ಟ ಪರೀಕ್ಷಿಸುತ್ತಾನೆ. ವ್ಯವಹಾರದಲ್ಲಿ ಆತನ ಆರಂಭಿಕ ಉದ್ಯಮ ಸಫಲತೆ ಕಾಣದೆ ತನ್ನ ಜೀವನದುದ್ದಕ್ಕೂ ಆರ್ಥಿಕ ತೊಂದರೆಗಳಿಂದ ಬಳಲುತ್ತಾನೆ. ಆದರೆ ಆತನ ಸಾಧನೆಯ ಫಲವಾಗಿ ಇಂದು ವಿಶ್ವದಾದ್ಯಂತ ಆತನ ಹೆಸರಿನ ಟಯರ್ ತಯಾರಿಸುವ ಕಂಪನಿಗಳಿವೆ.

ಮರಗಳ ಲ್ಯಾಟೆಕ್ಸ್‌ನಿಂದ ಪಡೆದ ನೈಸರ್ಗಿಕ ರಬ್ಬರ್ ಬಿಸಿ ವಾತಾವರಣದಲ್ಲಿ ಮೃದು ಮತ್ತು ಶೀತ ತಾಪಮಾನದಲ್ಲಿ ಗಟ್ಟಿಯಾಗುತ್ತದೆ.
ನೈಸರ್ಗಿಕ ರಬ್ಬರನ್ನು “ಇಂಡಿಯಾ ರಬ್ಬರ್” ಅಥವಾ “ಕೌಟ್ಚೌಕ್” ಎಂದೂ ಕರೆಯುತ್ತಾರೆ. ಒಂದು ಹಾಲಿನ ರಸವಾಗಿದ್ದು ಇದನ್ನು ವಿವಿಧ ಉಷ್ಣವಲಯದ ಮರಗಳಿಂದ ಟ್ಯಾಪ್ ಮಾಡಬಹುದಾಗಿದೆ. ಆಮ್ಲದೊಂದಿಗೆ ಹೆಪ್ಪುಗಟ್ಟಿದ ನಂತರ, ಅದು ಮೃದುವಾಗಿ, ಮತ್ತು ಜಿಗುಟಾಗಿ ಉಳಿಯುತ್ತದೆ. 19 ನೇ ಶತಮಾನದ ಮೊದಲ ತ್ರೈಮಾಸಿಕದಲ್ಲಿ, “ರಬ್ಬರ್ ಜ್ವರ” ಹೊಂದಿರುವ ಡಜನ್ ಗಟ್ಟಲೆ ಅಮೇರಿಕನ್ ವಾಣಿಜ್ಯೋದ್ಯಮಿಗಳು ರಬ್ಬರನ್ನು ಮುಖ್ಯವಾಗಿ ಬ್ರೆಜಿಲ್‌ನಿಂದ ಆಮದು ಮಾಡಿಕೊಂಡರು ಮತ್ತು ಹಲವು ಸಾಮಾಗ್ರಿಗಳನ್ನು, ಜೀವ ರಕ್ಷಕಗಳಂತಹ ರಬ್ಬರ್ ಉತ್ಪನ್ನಗಳನ್ನು ಉತ್ಪಾದಿಸಲು ಕಾರ್ಖಾನೆಗಳನ್ನು ತೆರೆದರು. ಇದು ಜಲನಿರೋಧಕ ಮತ್ತು ಕೈಗಾರಿಕಾ ಯಂತ್ರೋಪಕರಣಗಳವರೆಗೆ ಇದರ ಉಪಯೋಗವನ್ನು ಸೀಮಿತಗೊಳಿಸಿತು. ಚಾರ್ಲ್ಸ್ ಇದರಿಂದ ಸಂತೋಷವಾಗಿರಲಿಲ್ಲ. ನಾನು ಅದರಿಂದ ಇನ್ನೂ ದೊಡ್ಡದನ್ನು ಉತ್ಪಾದಿಸಬೇಕಾಗಿದೆ ಎಂದು ರಬ್ಬರ್ ಗೆ ಬೇರೆ ಬೇರೆ ರಾಸಾಯನಿಕ ವಸ್ತುಗಳನ್ನು ಸೇರಿಸಿ ರಬ್ಬರನ್ನು ಗಟ್ಟಿಯಾಗಿಸಲು ನಿರಂತರ ಪ್ರಯತ್ನ ಮಾಡುತ್ತಲೇ ಇದ್ದ.

ಒಂದು ಸುಪ್ರಭಾತದಲ್ಲಿ ಗುಡ್‌ಇಯರ್ ಅಂಗಡಿಯೊಂದರಿಂದ ರಬ್ಬರ್ ಉಂಡೆ ಖರೀದಿಸುವ ವೇಳೆ ಅದು ಆಕಸ್ಮಿಕವಾಗಿ ಆತನ ಕೈಯಿಂದ ಜಾರಿ ಅಲ್ಲೇ ಇದ್ದ ಸ್ಟವ್ ಮೇಲಿಟ್ಟಿದ್ದ ಪಾತ್ರೆಯೊಳಗೆ ಬೀಳುತ್ತದೆ. ಮನೆಗೆ ಬಂದು ನೋಡಿದಾಗ ಸ್ಟವ್ ಮೇಲಿಟ್ಟಿದ್ದ ಪಾತ್ರೆಯೊಳಗೆ ಬಿದ್ದಿದ್ದ ರಬ್ಬರ್ ಗಟ್ಟಿಯಾಗಿತ್ತು. ಕುತೂಹಲ ತಡೆಯಲಾಗದೆ ಗುಡ್‌ಇಯರ್ ಮತ್ತೆ ಅಂಗಡಿಗಯತ್ತ ಹೆಜ್ಜೆಹಾಕುತ್ತಾನೆ.  ಅಂಗಡಿಯಾತನನ್ನು ಸಮೀಪಿಸಿ ನೀನು ಒಲೆಯಲ್ಲಿ ಏನು ಕಾಯಿಸುತಿದ್ದೆ ? ಎಂದು ಪ್ರಶ್ನಿಸುತ್ತಾನೆ. ಅಂಗಡಿ ಮಾಲೀಕ ಸಲ್ಫರ್ ಎಂದು ಉತ್ತರ ಕೊಡುತ್ತಾನೆ. ಆ ಮಾತು ಕೇಳುತ್ತಲೇ ಗುಡ್‌ಇಯರ್ ಕೇಕೆ ಹಾಕಿ ಕೂಗಾಡಿ ತನಗಾದ ಸಂತೋಷವನ್ನು ಹೊರಹಾಕುತ್ತಾನೆ. ರಬ್ಬರ್ ಮತ್ತು ಸಲ್ಫರ್ ಮಿಶ್ರಣವು ಬಿಸಿ ಒಲೆಯ ಮೇಲೆ ಬೀಳಿಸಿದ ಪರಿಣಾಮ ಅದು ಗಟ್ಟಿಯಾಗಿತ್ತು. ಇದು ವಲ್ಕನೀಕರಣದ ಆವಿಷ್ಕಾರಕ್ಕೆ ಕಾರಣವಾಯಿತು. ಇದನ್ನು ರಬ್ಬರ್‌ನ “ವಲ್ಕನೀಕರಣ” (ರೋಮನ್ ಬೆಂಕಿಯ ದೇವರು) ಎಂದು ಕರೆಯಲಾಯಿತು. ಗುಡ್‌ಇಯರ್‌ನ ದಣಿವರಿಯದ ಪ್ರಯೋಗ ಮತ್ತು ಅವರ ಕರಕುಶಲತೆಯ ಸಮರ್ಪಣೆ ಅಂತಿಮವಾಗಿ ಈ ಅದ್ಭುತ ಆವಿಷ್ಕಾರಕ್ಕೆ ಕಾರಣವಾಯಿತು. ರಬ್ಬರ್ ಗಟ್ಟಿಯಾಯಿತು. ಗಟ್ಟಿಯಾದ ರಬ್ಬರ್ ನೆಲಕ್ಕೆ ಬಡಿದರೆ ಪುಟಿಯುತಿತ್ತು . ಗುಡ್ ಇಯರ್ ನ ಸಂತೋಷಕ್ಕೆ ಪಾರವಿರಲಿಲ್ಲ. ವಲ್ಕನೀಕರಣದೊಂದಿಗೆ, ಗುಡ್‌ಇಯರ್ ರಬ್ಬರ್ ಉದ್ಯಮದಲ್ಲಿ ಕ್ರಾಂತಿಯನ್ನುಂಟು ಮಾಡುತ್ತಾನೆ. ವಲ್ಕನೀಕರಿಸಿದ ರಬ್ಬರ್ ಹೆಚ್ಚು ಬಾಳಿಕೆ ಬರುವ, ಸ್ಥಿತಿಸ್ಥಾಪಕವಾಗಿ ಮತ್ತು ಬಹುಮುಖವಾಗಿ ಮಾರ್ಪಟ್ಟಿತ್ತು. ಇದು ಆಧುನಿಕ ರಬ್ಬರ್ ಉದ್ಯಮಕ್ಕೆ ಅಡಿಪಾಯವನ್ನು ಹಾಕಿತು. ಟೈರುಗಳು ಮತ್ತು ಪಾದರಕ್ಷೆಗಳಿಂದ ಹಿಡಿದು ಕೈಗಾರಿಕಾ ಯಂತ್ರಗಳಲ್ಲಿ ಮತ್ತು ಕನ್ವೇಯರ್ ಬೆಲ್ಟ್‌ಗಳವರೆಗೆ ಎಲ್ಲವನ್ನೂ ಉತ್ಪಾದಿಸಲು ಇದು ಅನುವು ಮಾಡಿಕೊಟ್ಟಿತು.

ಉದ್ಯಮಕ್ಕೆ ಅವರ ಮಹತ್ವದ ಕೊಡುಗೆಯ ಹೊರತಾಗಿಯೂ, ಗುಡ್‌ಇಯರ್ ಅವರ ಜೀವನದುದ್ದಕ್ಕೂ ಹಲವಾರು ಸವಾಲುಗಳನ್ನು ಎದುರಿಸ ಬೇಕಾಯಿತು. ಹಣಕಾಸಿನ ತೊಂದರೆ, ಪೇಟೆಂಟ್ ವಿವಾದ ಮತ್ತು ಸ್ಪರ್ಧಿಗಳಿಂದ ಅವರ ಆಲೋಚನೆಗಳ ಕಳ್ಳತನದ ವಿರುದ್ಧ ಹೋರಾಡಬೇಕಾಯಿತು. ಸಾಲಗಾರರ ಭಾದೆಯಿಂದ ಎರಡು ಬಾರಿ ಜೈಲು ಸೇರಬೇಕಾಯಿತು. ಹಣಕ್ಕಾಗಿ ಕುಟುಂಬವನ್ನು ಬೇರೆಡೆ ಸಾಗಿಸಿ ಮನೆಯ ಪೀಠೋಪಕರಣಗಳನ್ನು ಮಾರಾಟ ಮಾಡುವ ಪರಿಸ್ಥಿತಿಯು ನಿರ್ಮಾಣವಾಗುತ್ತದೆ. ಈ ಹಿನ್ನಡೆಗಳ ಹೊರತಾಗಿಯೂ, ಗುಡ್‌ಇಯರ್ ತನ್ನ ಪ್ರಕ್ರಿಯೆಗಳನ್ನು ಆವಿಷ್ಕರಿಸಲು ಮತ್ತು ಪರಿಷ್ಕರಿಸುವುದನ್ನು ಮುಂದುವರೆಸುತ್ತಾರೆ. ವಿಜ್ಞಾನ ಮತ್ತು ಉದ್ಯಮಕ್ಕೆ ಗುಡ್‌ಇಯರ್ ಕೊಡುಗೆಗಳಿಗೆ ಮನ್ನಣೆ ಮತ್ತು ಪುರಸ್ಕಾರ ಸಿಗುತ್ತದೆ. ಇಂದು ಜಗತ್ತಿನಾದ್ಯಂತ ಲೆಕ್ಕವಿಲ್ಲದಷ್ಟು ಕೈಗಾರಿಕೆಗಳಲ್ಲಿ, ವಾಹನ ವಿಮಾನಗಳಲ್ಲಿ ಪ್ರತಿದಿನ ಗುಡ್ ಇಯರ್ ನ ವಲ್ಕನೈಸ್ಡ್ ರಬ್ಬರ್ ಉಪಯೋಗವಾಗುತ್ತಿದೆ. ಆವಿಷ್ಕಾರ ಮತ್ತು ಪರಿಷ್ಕಾರಕ್ಕಾಗಿ ಜೀವನ ಸವೆಸಿದ ಈತನ ಹೆಸರಿನ ಗುಡ್‌ಇಯರ್ ಟಯರ್‌ ಇಂದು ಮಾರ್ಕೆಟ್‌ ನಲ್ಲಿ ಲಭ್ಯವಿದೆ. ಪೆನ್ಸಿಲ್‌ ಗುರುತುಗಳನ್ನು ಅಳಿಸುವುದರಿಂದ ಹಿಡಿದು ಟಯರ್‌, ಟ್ಯೂಬ್‌ ಮತ್ತು ಹೆಚ್ಚಿನ ಸಂಖ್ಯೆಯ ಕೈಗಾರಿಕಾ ಉತ್ಪನ್ನಗಳ ತಯಾರಿಕೆಯವರೆಗೆ ರಬ್ಬರನ್ನು ವಿವಿಧ ಉದ್ದೇಶಗಳಿಗಾಗಿ ಬಳಸಲಾಗುತ್ತಿದೆ. ಇದರ ಹಿಂದಿರುವ ಶಕ್ತಿ ಚಾಲ್ಸ್‌ ಗುಡ್‌ಇಯರ್ ಎಂಬುವುದನ್ನು ನಾವು ಮರೆಯುವಂತಿಲ್ಲ.

ಲೇಖನ: ಫಾರೂಕ್‌ ಕೆಮ್ಮಿಂಜೆ(ಬೆಂಗಳೂರು)

LEAVE A REPLY

Please enter your comment!
Please enter your name here