ಮಂಗಳೂರು(ಶಿವಮೊಗ್ಗ): ಇಲ್ಲಿನ ಅಲ್ಲಮಪ್ರಭು ಮೈದಾನದಲ್ಲಿ ಮಾ.18ರಂದು ಜನರ ಗುಂಪಿನ ನಡುವಿನಿಂದ ತೆರೆದ ವಾಹನದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಕೈ ಬೀಸುತ್ತಾ ಮುಖ್ಯವೇದಿಕೆಗೆ ಬಂದು ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದರು.
ನರೇಂದ್ರ ಮೋದಿ ಅಕ್ಕಪಕ್ಕದಲ್ಲಿ ನಿಂತು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಹಾಗೂ ದಾವಣಗೆರೆ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ ಜನರಿಗೆ ನಮಸ್ಕರಿಸಿದರು. ಈ ವೇಳೆ ಬಿಜೆಪಿ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಗುಣಗಾನ ಮಾಡುವ ಡಿ.ಜೆ ಸಂಗೀತದ ಅಬ್ಬರ ಸಭೆಯಲ್ಲಿ ಅನುರಣಿಸಿತು. ಪ್ರಧಾನ ವೇದಿಕೆಯ ಹಿಂಬದಿಯ ಪರದೆಯಲ್ಲಿ ಮೋದಿ ಸಾಧನೆಗಳ ಕುರಿತಾದ ವಿಡಿಯೋ ಪ್ರದರ್ಶನಗೊಂಡಿತು. ಸಭೆಯಲ್ಲಿ ನೆರೆದ ಭಾರೀ ಸಂಖ್ಯೆಯ ಬಿಜೆಪಿ ಬೆಂಬಲಿಗರು ಕೇಸರಿ ಶಾಲು, ಟೋಪಿ ಬೀಸಿ ಜಯಘೋಷದ ಮೂಲಕ ಸ್ವಾಗತಿಸಿದರು.