ಮಂಗಳೂರು(ದೆಹಲಿ):ಆಧ್ಯಾತ್ಮಿಕ ಗುರು ಮತ್ತು ಇಶಾ ಫೌಂಡೇಶನ್‌ನ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಅವರ ಮೆದುಳಿನಲ್ಲಿ “ಮಾರಣಾಂತಿಕ” ಊತ ಮತ್ತು ರಕ್ತಸ್ರಾವವಾದ ನಂತರ ಅವರಿಗೆ ತುರ್ತು ಮೆದುಳಿನ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಮಾರ್ಚ್ 17 ರಂದು ದೆಹಲಿಯ ಅಪೋಲೋ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಯಿತು ಎಂದು ಮೂಲಗಳು ಹೇಳಿವೆ. ಇಶಾ ಫೌಂಡೇಶನ್ ಪೋಸ್ಟ್ ಮಾಡಿದ ವಿಡಿಯೊದಲ್ಲಿ, ಸದ್ಗುರುವನ್ನು ಪರೀಕ್ಷಿಸಿದ ಅಪೋಲೋ ಆಸ್ಪತ್ರೆಯ ಹಿರಿಯ ನರವಿಜ್ಞಾನಿ ಡಾ ವಿನಿತ್ ಸೂರಿ, ಆಧ್ಯಾತ್ಮಿಕ ನಾಯಕ ಕಳೆದ ನಾಲ್ಕು ವಾರಗಳಿಂದ ತೀವ್ರ ತಲೆನೋವಿನಿಂದ ಬಳಲುತ್ತಿದ್ದರು ಎಂದು ಹೇಳಿದ್ದಾರೆ.
ನೋವಿದ್ದರೂ ಅವರು ತಮ್ಮ ಸಾಮಾನ್ಯ ದೈನಂದಿನ ವೇಳಾಪಟ್ಟಿ ಮತ್ತು ಸಾಮಾಜಿಕ ಚಟುವಟಿಕೆಗಳನ್ನು ಮುಂದುವರೆಸಿದರು. ಮಾರ್ಚ್ 8 ರಂದು ಮಹಾ ಶಿವರಾತ್ರಿ ಕಾರ್ಯಕ್ರಮವನ್ನು ಸಹ ನಡೆಸಿದರು. ಅವರು ಎಲ್ಲಾ ನೋವನ್ನು ನಿರ್ಲಕ್ಷಿಸಿ ಎಲ್ಲಾ ಸಭೆಗಳನ್ನು ಮುಂದುವರೆಸಿದರು ಎಂದು ಡಾ ಸೂರಿ ವಿಡಿಯೊದಲ್ಲಿ ಹೇಳಿದ್ದಾರೆ. ಮಾರ್ಚ್ 17 ರಂದು, 66 ವರ್ಷ ವಯಸ್ಸಿನ ಆಧ್ಯಾತ್ಮಿಕ ನಾಯಕರಿಗೆ ಅರೆ ಪ್ರಜ್ಞೆ ಮತ್ತು ಎಡಕಾಲು ಕ್ಷೀಣಿಸಿ ಅಸ್ವಸ್ಥರಾದ ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೂರರಿಂದ ನಾಲ್ಕು ವಾರಗಳ ಅವಧಿಯ ದೀರ್ಘಕಾಲದ ರಕ್ತಸ್ರಾವ ಮತ್ತು 24 ರಿಂದ 48 ಗಂಟೆಗಳ ಅವಧಿಯಲ್ಲಿಯೂ ರಕ್ತಸ್ರಾವ ಆಗಿತ್ತು ಎಂದು ಡಾ ಸೂರಿ ಹೇಳಿದ್ದಾರೆ. ನಾವು ಸಿ ಟಿ ಸ್ಕ್ಯಾನ್ ಮಾಡಿದಾಗ ಮೆದುಳಿನಲ್ಲಿ ಜೀವಕ್ಕೆ ಅಪಾಯಕಾರಿ ಊತ ಮತ್ತು ರಕ್ತಸ್ರಾವವಿತ್ತು. ಮೆದುಳು ಒಂದು ಬದಿಗೆ ಸರಿದಿತ್ತು. ಅವರು ತುಂಬಾ ಕ್ಷೀಣಿತರಾಗಿದ್ದರು. ನಾವು ತಕ್ಷಣ ಶಸ್ತ್ರಚಿಕಿತ್ಸೆಗೊಳಪಡಿಸಿದೆವು ಎಂದು ವೈದ್ಯರು ಹೇಳಿದ್ದಾರೆ. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಸಲಾಗಿದ್ದು, ಸದ್ಗುರು ಈಗ ವೆಂಟಿಲೇಟರ್‌ನಿಂದ ಹೊರಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಸದ್ಗುರು ಜತೆ ಮಾತಾಡಿದ ಮೋದಿ
ಸದ್ಗುರು ಜತೆ ಮಾತನಾಡಿದ್ದೇನೆ. ಅವರಿಗೆ ಉತ್ತಮ ಆರೋಗ್ಯ ಸಿಗಲಿ ಮತ್ತು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ ಎಂದು ಮೋದಿ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಬರೆದಿದ್ದಾರೆ. ಈ ಟ್ವೀಟ್ಗೆ ಸದ್ಗುರು ಪ್ರತಿಕ್ರಿಯಿಸಿದ್ದು ಪ್ರೀತಿಯ ಪ್ರಧಾನ ಮಂತ್ರಿಜೀ, ನನ್ನ ಬಗ್ಗೆ ನೀವು ಕಾಳಜಿ ವಹಿಸಬೇಡಿ. ನಿಮಗೆ ಮುನ್ನಡೆಸುವುದಕ್ಕೆ ಒಂದು ರಾಷ್ಟ್ರವಿದೆ. ನಾನು ಚೇತರಿಸಿಕೊಳ್ಳುತ್ತಿದ್ದು ನಿಮ್ಮ ಕಾಳಜಿಯಿಂದ ಮನತುಂಬಿ ಬಂತು. ಧನ್ಯವಾದಗಳು ಎಂದು ಹೇಳಿದ್ದಾರೆ.
An Update from Sadhguru… https://t.co/ouy3vwypse pic.twitter.com/yg5tYXP1Yo
— Sadhguru (@SadhguruJV) March 20, 2024