ಬಣ್ಣ ಕಳಚಿದ ವಿ.ಜಿ ಪಾಲ್ ಬಾರದ ಲೋಕಕ್ಕೆ-ತುಳು ರಂಗಕರ್ಮಿ, ಮೇರುನಟ ವಿ.ಜಿ ಪಾಲ್ ಇನ್ನಿಲ್ಲ

ಮಂಗಳೂರು: ತುಳು ರಂಗಭೂಮಿ ಮತ್ತು ಸಿನಿಮಾ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವ ವಿ.ಜಿ. ಪಾಲ್‌ ಎಂದೇ ಖ್ಯಾತರಾಗಿರುವ ರಂಗಕರ್ಮಿ, ಸಂಘಟಕ, ನಿರ್ದೇಶಕ ವೇಣುಗೋಪಾಲ್‌ ಟಿ. ಕೋಟ್ಯಾನ್‌ ಮಾ.20ರಂದು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಮಂಗಳೂರಿನ‌ ಬೊಕ್ಕಪಟ್ಣದಲ್ಲಿ 1946ರಲ್ಲಿ ಜನಿಸಿದ ಅವರು ಬೊಕ್ಕಪಟ್ಣ ಶಾಲೆಯಲ್ಲಿ ಶಿಕ್ಷಣ, ಬಳಿಕ ಐಟಿಐ ಶಿಕ್ಷಣ ಪಡೆದು ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮದಲ್ಲಿ ಉದ್ಯೋಗಿಯಾಗಿದ್ದರು. ಸುಮಾರು 3 ಸಾವಿರಕ್ಕೂ ಅಧಿಕ ‌ನಾಟಕಗಳಲ್ಲಿ ಮತ್ತು 101 ಸಿನಿಮಾಗಳಲ್ಲಿ ನಟಿಸಿದ್ದು, ದುಬೈ ಕೊಲ್ಲಿ ರಾಷ್ಟ್ರಗಳಿಗೆ ತುಳು ಸಿನಿಮಾ ಪರಿಚಯಿಸಿದ ಕೀರ್ತಿ ವಿ.ಜಿ. ಪಾಲ್‌ ಅವರಿಗೆ ಸಲ್ಲುತ್ತದೆ. 1961ರಲ್ಲಿ ಕಲ್ಜಿಗದ ಕುರುಕ್ಷೇತ್ರ ತುಳುನಾಟಕದ ಮೂಲಕ ಮೊದಲ ರಂಗಪ್ರವೇಶ ಮಾಡಿದರು. ಸುಮಾರು 2 ಸಾವಿರ ಸಾಮಾಜಿಕ, ಐತಿಹಾಸಿಕ, ಪೌರಾಣಿಕ ನಾಟಕಗಳಲ್ಲಿ ಅಭಿನಯಿಸಿದ್ದಾರೆ. 50 ಧ್ವನಿ ಸುರುಳಿಗಳಿಗೆ ಕಂಠದಾನ ಮಾಡಿದ್ದಾರೆ. ಪೂ ಪನ್ನೀರ್‌ ತುಳು ವೀಡಿಯೋ ಚಿತ್ರ, ಹಲವು ಕಿರುತೆರೆ ಚಿತ್ರಗಳಲ್ಲಿ ಅಭಿನಯಿಸಿದ್ದು ಕೇಂದ್ರ ಸರಕಾರದ ಕರಾವಳಿ ಮತ್ತು ತೆರೆಗಳು ಸಾಕ್ಷ್ಯಚಿತ್ರಗಳಲ್ಲೂ ಪಾತ್ರ ಮಾಡಿದ್ದಾರೆ. ನಾಟಕ ಅಕಾಡೆಮಿ, ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ದ.ಕ. ರಾಜ್ಯೋತ್ಸವ ಪ್ರಶಸ್ತಿ, ರಂಗ ಚಾವಡಿ ಪ್ರಶಸ್ತಿ, ಮೊಗವೀರಸಾಧನಾ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳು ಸಂದಿವೆ. ಮೃತರು ಪತ್ನಿ, ಇಬ್ಬರು ಪುತ್ರರು, ಪುತ್ರಿಯನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here