ಮಂಗಳೂರು(ಹಾಸನ): ತಾಳಿ ಕಟ್ಟುವ ವೇಳೆ ಪ್ರಿಯಕರನ ಪ್ರವೇಶದಿಂದ ಮದುವೆ ಮುರಿದು ಬಿದ್ದ ಘಟನೆ ಜಿಲ್ಲೆಯ ಬೇಲೂರಿನಲ್ಲಿ ನಡೆದಿದೆ. ಬೇಲೂರಿನ ಒಕ್ಕಲಿಗ ಸಮುದಾಯ ಭವನದಲ್ಲಿ ಬೇಲೂರಿನ ಯುವತಿ ಹಾಗೂ ಶಿವಮೊಗ್ಗ ಮೂಲದ ಯುವಕನೊಂದಿಗೆ ಮದುವೆ ನಡೆಯಬೇಕಿತ್ತು. ಆದರೆ ತಾಳಿ ಕಟ್ಟುವ ವೇಳೆ ಕಲ್ಯಾಣಮಂಟಪಕ್ಕೆ ಬಂದ ನವೀನ್ ಎಂಬ ಯುವಕ ಮದುವೆಗೆ ಅಡ್ಡಿಪಡಿಸಿದ್ದಾನೆ. ತಾಳಿ ಕಿತ್ತುಕೊಂಡು ತೇಜಸ್ವಿನಿ ನನ್ನನ್ನು ಪ್ರೀತಿಸುತ್ತಿದ್ದಾಳೆ. ನನ್ನ ಜೊತೆ ಮದುವೆ ಮಾಡಿ ಎಂದು ಪಟ್ಟುಹಿಡಿದಿದ್ದಾನೆ. ಹೀಗಾಗಿ ಕಲ್ಯಾಣಮಂಟಪದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಮಧ್ಯಪ್ರವೇಶಿಸಿದ ಬೇಲೂರು ಪೊಲೀಸರು ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ತೇಜಸ್ವಿನಿ ನನ್ನನ್ನು ಪ್ರೀತಿಸುತ್ತಿದ್ದು, ನನ್ನಿಂದ ವಿಚಾರ ಮುಚ್ಚಿಟ್ಟು ಮದುವೆ ಮಾಡಿಕೊಳ್ಳಲಾಗುತ್ತಿದೆ ಎಂದು ಯುವಕ ಆರೋಪಿಸಿದ್ದಾನೆ. ಇತ್ತ ಪ್ರೀತಿ ವಿಚಾರ ತಿಳಿದ ಮದುಮಗ ಮದುವೆ ಬೇಡ ಎಂದು ಹೊರಟು ಹೋಗಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.