ಪೂಜಾರಿಯವರು ಹಾಕಿಕೊಟ್ಟ ಹೆಜ್ಜೆಯಲ್ಲಿ ಮುಂದುವರಿಯುವೆ- ಅಭಿವೃದ್ಧಿ ಪರ, ಸೌಹಾರ್ದಯುತ ದಕ್ಷಿಣ ಕನ್ನಡ ನನ್ನ ಕನಸು-ಪದ್ಮರಾಜ್ ಆರ್

ಮಂಗಳೂರು: ದ.ಕ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಅವರನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು, ಹಿತೈಷಿಗಳು ಸ್ವಾಗತಿಸಿದರು.

ಗುರುವಾರ(ಮಾ.21) ರಾತ್ರಿ ಪದ್ಮರಾಜ್ ಅವರಿಗೆ ಟಿಕೆಟ್ ಘೋಷಣೆಯಾಗಿತ್ತು. ಶುಕ್ರವಾರ(ಮಾ.22) ಬೆಳಗ್ಗೆ ಬೆಂಗಳೂರಿನಿಂದ ಮಂಗಳೂರಿಗೆ ಮರಳಿದ ಪದ್ಮರಾಜ್, ಕಾರ್ಯಕರ್ತರು ಮತ್ತು ಬೆಂಬಲಿಗರ ಸಂಭ್ರಮಕ್ಕೆ ಜೊತೆಯಾದರು. ಬಳಿಕ ಆಧುನಿಕ ಮಂಗಳೂರು ಶಿಲ್ಪಿ ಉಳ್ಳಾಲ ಶ್ರೀನಿವಾಸ್ ಮಲ್ಯರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿ, ಕದ್ರಿಯ ವೀರಯೋಧರ ಸ್ಮಾರಕ್ಕೆ ತೆರಳಿ ದೇಶಕ್ಕಾಗಿ ಮಡಿದ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದರು. ಬಳಿಕ ಎಂ.ಜಿ ರಸ್ತೆಯಲ್ಲಿರುವ ಗಾಂಧಿ ಪ್ರತಿಮೆಗೆ, ಮಂಗಳೂರು ಪುರಭವನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ, ಬಾವುಡಗುಡ್ಡೆಯಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆಗೆ ಮತ್ತು ಟಾಗೋರ್ ಪಾರ್ಕ್‌ನಲ್ಲಿ ರವೀಂದ್ರನಾಥ ಟಾಗೋರ್ ಪ್ರತಿಮೆಗೆ ನಮನ ಸಲ್ಲಿಸಿದರು.

ಈ ವೇಳೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ತನ್ನನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ ಹೈಕಮಾಂಡ್ ನಾಯಕರಿಗೆ ಮತ್ತು ತನ್ನನ್ನು ಬೆಂಬಲಿಸಿದ ರಾಜ್ಯ ನಾಯಕರು ಮತ್ತು ಜಿಲ್ಲಾ ನಾಯಕರಿಗೆ ಧನ್ಯವಾದ ಸಲ್ಲಿಸಿದರು. ತನ್ನ ರಾಜಕೀಯ ಗುರುಗಳಾದ ಜನಾರ್ದನ ಪೂಜಾರಿಯವರ ಹಾದಿಯಲ್ಲಿ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ರಾಜಕಾರಣ ಮಾಡುವುದಾಗಿ ತಿಳಿಸಿದರು. ತುಳುನಾಡಿನ ಸಮಗ್ರ ಅಭಿವೃದ್ಧಿ ಜತೆಗೆ ಸೌಹಾರ್ದ ಪರಂಪರೆಯನ್ನು ಮರಳಿ ಕಟ್ಟುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಗತವೈಭವ ಮರುಕಳಿಸುವಂತೆ ಮಾಡುವುದು ನನ್ನ ಉದ್ದೇಶ ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆ ವಿಪಕ್ಷ ನಾಯಕ ಪ್ರವೀಣ್‌ಚಂದ್ರ ಆಳ್ವ, ಪಕ್ಷದ ಕಾರ್ಯಕರ್ತರು, ಹಿತೈಷಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಕಾಪೋರೇಟರ್‌ಗಳು, ಮಾಜಿ ಕಾಪೋರೇಟರ್‌ಗಳು ಉಪಸ್ಥಿತರಿದ್ದರು.

ಮಂಗಳೂರು ಲೋಕಸಭಾ ಅಭ್ಯರ್ಥಿ ಪದ್ಮರಾಜ್ ಅವರನ್ನು ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಪೀತಾಂಬರ ಹೆರಾಜೆ, ಉಪಾಧ್ಯಕ್ಷ ರವಿಪೂಜಾರಿ ಚಿಲಿಂಬಿ ಅಭಿನಂದಿಸಿದರು. ಮಾಜಿ ಸಚಿವ ಅಭಯಚಂದ್ರ ಜೈನ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಹರೀಶ್ ಕೆ ಪೂಜಾರಿ, ಶ್ರೀ ನಾರಾಯಣ ಗುರು ಸಂಘ ಬೆಳ್ತಂಗಡಿ ಮಾಜಿ ಅಧ್ಯಕ್ಷ ಜಯರಾಮ ಬಂಗೇರ, ನಾರಾಯಣ ಮಚ್ಚಿನ, ದೀಪಕ್ ಪೆರ್ಮುದೆ, ಪದ್ಮನಾಭ ಅಮೀನ್, ಸಂತೋಷ್ ಶೆಟ್ಟಿ, ಯೋಗೀಶ್ ಮೂಲ್ಕಿ ಮುಂತಾದವರು ಉಪಸ್ಥಿತರಿದ್ದರು.

 

LEAVE A REPLY

Please enter your comment!
Please enter your name here