ಕುಚ್ಚಂಗಿ ಗ್ರಾಮದ ಕೆರೆ ಮಧ್ಯೆ ಸುಟ್ಟು ಕರಕಲಾದ ಕಾರಿನಲ್ಲಿ ಬೆಳ್ತಂಗಡಿಯವರದ್ದೆನ್ನಲಾದ ಮೂರು ಮೃತದೇಹ ಪತ್ತೆ

ಕಾರಿನಲ್ಲಿ ಸುಟ್ಟ ಸ್ಥಿತಿಯಲ್ಲಿ ಬೆಳ್ತಂಗಡಿ ಮೂಲದ ಮೂವರ ಮೃತದೇಹ ಪತ್ತೆ
ಮಂಗಳೂರು(ತುಮಕೂರು): ತುಮಕೂರಿನ ಕುಚ್ಚಂಗಿ ಗ್ರಾಮದ ಕೆರೆಯಲ್ಲಿ ಕಾರೊಂದು ಸಂಪೂರ್ಣ ಸುಟ್ಟು ಹೋಗಿದ್ದು, ಕಾರಿನಲ್ಲಿ ಸುಟ್ಟು ಕರಕಲಾದ ಮೂವರ ಮೃತದೇಹ ಪತ್ತೆಯಾಗಿದೆ. ಕೆರೆಯ ನೀರು ಸಂಪೂರ್ಣ ಬತ್ತಿಹೋಗಿದ್ದು ಕೆರೆಯ ಮಧ್ಯಭಾಗದಲ್ಲಿ ಬಿಳಿ ಬಣ್ಣದ ಎಸ್‌ ಪ್ರೆಸ್ಸೋ ಕಾರು ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಮೃತರನ್ನು ಬೆಳ್ತಂಗಡಿ ತಾಲೂಕಿನ ಟಿ.ಬಿ ಕ್ರಾಸ್ ನಿವಾಸಿ ಆಟೋ ಚಾಲಕ ಶಾಹುಲ್(45), ಮದ್ದಡ್ಕ ನಿವಾಸಿ ಇಸಾಕ್(56), ಶಿರ್ಲಾಲ್ ನಿವಾಸಿ ಇಮ್ತಿಯಾಝ್(34) ಎಂದು ಗುರುತಿಸಲಾಗಿದೆ ಎಂದು ತಿಳಿದುಬಂದಿದೆ. ಇಂದು ಸಾರ್ವಜನಿಕರು ಕೆರೆಗೆ ಭೇಟಿ ನೀಡಿದ ವೇಳೆ ಘಟನೆ ಬೆಳಕಿಗೆ ಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳಾದ ಅಶೋಕ್ ಕೆ.ವಿ, ಅಡಿಷನಲ್ ಎಸ್ಪಿ ಮರಿಯಪ್ಪ, ಡಿವೈಎಸ್ಪಿ ಚಂದ್ರಶೇಖರ್ ಸೇರಿದಂತೆ ಹಲವರು ಭೇಟಿ ನೀಡಿದ್ದಾರೆ. ಸ್ಥಳಕ್ಕೆ ಶ್ವಾನದಳ, ಫಾರೆನ್ಸಿಕ್ ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ. ಕಾರಿನ ನಂಬರ್‌ ಪತ್ತೆಯಾಗಿದ್ದು ಆ ಮೂಲಕ ಸುಟ್ಟು ಕರಕಲಾದ  ಶವಗಳ ಕುರಿತು ಮಾಹಿತಿ ಸಂಗ್ರಹಿಸಲಾಗಿದೆ. ಘಟನೆ ಸಂಬಂಧ ಪೊಲೀಸರು ಎಲ್ಲಾ ಆಯಾಮಗಳಲ್ಲೂ ತನಿಖೆ ಆರಂಭಿಸಿದ್ದು, ಕೋರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here