



ಮಂಗಳೂರು(ಭೂತಾನ್): ಭಾರತದ ಸಹಭಾಗಿತ್ವದಲ್ಲಿ ಭೂತಾನ್ನ ತಿಂಪುವಿನಲ್ಲಿ ನಿರ್ಮಿಸಲಾಗಿರುವ ತಾಯಿ ಮಕ್ಕಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಪ್ರಧಾನಿ ನರೇಂದ್ರ ಮೋದಿ ಮಾ.23ರಂದು ಲೋಕಾರ್ಪಣೆ ಮಾಡಿದ್ದಾರೆ.







ಈ ವೇಳೆ, ಭೂತಾನ್ ರಾಜ ಜಿಗ್ಮಿ ಕೇಸರ್, ಭೂತಾನ್ ಪ್ರಧಾನಿ ಶೆರಿಂಗ್ ಟೊಬ್ಗೆ ಉಪಸ್ಥಿತರಿದ್ದರು. ಆಸ್ಪತ್ರೆಯ ಒಳಗೆ ಪ್ರವೇಶಿಸಿದ ಮೋದಿ ಅವರು, ಅಲ್ಲಿನ ಸಿಬ್ಬಂದಿಯಿಂದ ಆಸ್ಪತ್ರೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಇದರೊಂದಿಗೆ ಎರಡು ದಿನಗಳ ಭೂತಾನ್ ಪ್ರವಾಸವನ್ನು ಯಶಸ್ವಿಗೊಳಿಸಿದ ಪ್ರಧಾನಿ ಭಾರತಕ್ಕೆ ಮರಳಿದ್ದಾರೆ. ಇಂಧನ, ವ್ಯಾಪಾರ, ಡಿಜಿಟಲ್ ಸಂಪರ್ಕ, ಬಾಹ್ಯಾಕಾಶ ಮತ್ತು ಕೃಷಿ ವಲಯದಲ್ಲಿ ಸಹಕಾರ ಸೇರಿ ಹಲವು ಒಪ್ಪಂದಗಳಿಗೆ ಭಾರತ ಮತ್ತು ಭೂತಾನ್ ಶುಕ್ರವಾರ(ಮಾ.22) ಸಹಿ ಹಾಕಿವೆ. ಉಭಯ ರಾಷ್ಟ್ರಗಳ ನಡುವೆ ರೈಲು ಸಂಪರ್ಕ ಕಲ್ಪಿಸುವ ಯೋಜನೆಗೂ ಒಡಂಬಡಿಕೆ ಅಂತಿಮಗೊಳಿಸಲಾಗಿದೆ. ಶುಕ್ರವಾರ ಮೊದಲ ದಿನದ ಭೇಟಿಯಲ್ಲಿ ನರೇಂದ್ರ ಮೋದಿ ಅವರಿಗೆ ಭೂತಾನ್ ತನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಆರ್ಡರ್ ಆಫ್ ದಿ ಡ್ರುಕ್ ಗ್ಯಾಲ್ಪೊ’ ನೀಡಿ ಗೌರವಿಸಿದೆ. ಶನಿವಾರ ಬೆಳಿಗ್ಗೆ ತಿಂಪುವಿನಿಂದ ಹೊರಟ ಪ್ರಧಾನಿಯವರಿಗೆ ಭೂತಾನ್ ಸರ್ಕಾರದ ವತಿಯಿಂದ ಸಾಂಪ್ರದಾಯಿಕ ಬಿಳ್ಕೊಡುಗೆ ನೀಡಲಾಯಿತು. ಪ್ರಧಾನಿಯವರು ತಮ್ಮ ಭೇಟಿಯ ಸಂಗತಿಗಳನ್ನು ಎಕ್ಸ್ ನಲ್ಲಿ ಭೂತಾನಿ ಭಾಷೆಯಲ್ಲಿಯೇ ಟ್ವೀಟ್ ಮಾಡಿ ಹಂಚಿಕೊಂಡಿದ್ದಾರೆ.















