ಮಂಗಳೂರು(ಬೆಂಗಳೂರು): ಲೋಕಸಭಾ ಚುನಾವಣೆಗೆ ದಿನಾಂಕ ಪ್ರಕಟವಾದ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಶಸ್ತ್ರಾಸ್ತ್ರ ಪರವಾನಗಿ ಹೊಂದಿರುವವರು ತಮ್ಮ ಬಳಿ ಇರುವ ಶಸ್ತ್ರಾಸ್ತ್ರಗಳನ್ನ ಸಂಬಂಧಪಟ್ಟ ಠಾಣೆಗಳಲ್ಲಿ ಠೇವಣಿ ಇರಿಸಲು ಬೆಂಗಳೂರು ಪೊಲೀಸರು ಸೂಚಿಸಿದ್ದಾರೆ. ಈ ವೇಳೆ ಶಸ್ತ್ರಾಸ್ತ್ರ ಪರವಾನಗಿ ಹೊಂದಿರುವವರ ಪೈಕಿ ಆರು ಜನ ರೌಡಿ ಆಸಾಮಿಗಳು ಸಹ ಇರುವುದು ಪತ್ತೆಯಾಗಿದೆ.
ಗಣ್ಯರು, ಉದ್ಯಮಿಗಳು, ಭದ್ರತಾ ಸಿಬ್ಬಂದಿ ಸೇರಿದಂತೆ ಅನೇಕರು ತಮ್ಮ ಆಸ್ತಿ, ಸಂಪತ್ತು ರಕ್ಷಣೆಗಾಗಿ, ಜೀವ ಭಯದಿಂದ ಶಸ್ತ್ರಾಸ್ತ್ರಗಳ ಪರವಾನಗಿ ಪಡೆದು ಬಂದೂಕು, ಡಬಲ್ ಬ್ಯಾರೆಲ್ ಗನ್, ಸಿಂಗಲ್ ಬ್ಯಾರೆಲ್ ಗನ್, ಶಾರ್ಟ್ ರೇಂಜ್ ಗನ್, ಪಿಸ್ತೂಲು, ರಿವಾಲ್ವರ್ ಪರವಾನಗಿ ಪಡೆದಿರುತ್ತಾರೆ. ಈ ಪ್ರಕ್ರಿಯೆಯಲ್ಲಿ ಆರು ಜನ ರೌಡಿಗಳ ಹೆಸರು ಸಹ ಇರುವುದು ತಿಳಿದು ಬಂದಿದೆ. ಈ ವಿಚಾರ ತಿಳಿದು ಗರಂ ಆಗಿರುವ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಅವರು ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.