ಮಂಗಳೂರು(ಬ್ರೆಜಿಲ್): ಬ್ರೆಜಿಲ್ ದೇಶದ ಮಹಿಳೆಯೊಬ್ಬರು ಕಳೆದ 56 ವರ್ಷಗಳಿಂದ ಗರ್ಭಿಣಿಯಾಗಿ ಉಳಿದಿರುವ ಬಗ್ಗೆ ಅಲ್ಲಿನ ಅಧಿಕೃತ ಮಾಧ್ಯಮ ಡೈಲಿ ಸ್ಟಾರ್ ವರದಿ ಮಾಡಿದೆ.
81ರ ಹರೆಯದ ಡೇನಿಯೆಲ್ಲಾ ವೀರಾ ಎಂಬ ಮಹಿಳೆ ಕಳೆದ 56 ವರ್ಷಗಳಿಂದ ಹೊಟ್ಟೆಯಲ್ಲಿ ಮಗುವನ್ನು ಹೊತ್ತು ಜೀವನ ನಡೆಸುತ್ತಿದ್ದರು. ಆದರೆ ಈ ಮಹಿಳೆಗೆ ತನ್ನ ಹೊಟ್ಟೆಯಲ್ಲಿ ಮಗುವೊಂದು ಇರುವ ಬಗ್ಗೆ ಯಾವುದೇ ಅರಿವು ಇರಲಿಲ್ಲ. ಬ್ರೆಜಿಲ್‌ನ ಪರಾಗ್ವೆ ಗಡಿ ದಾಟುತ್ತಿದ್ದ ಮಹಿಳೆಗೆ ಇದ್ದಕ್ಕಿದ್ದಂತೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಹೊಟ್ಟೆಯಲ್ಲಿ ಮಗು ಇರುವ ವಿಷಯ ತಿಳಿದಿರದ ಮಹಿಳೆ ವೈದ್ಯರ ಬಳಿ ಹೋಗಿದ್ದಾರೆ. ವೈದ್ಯರು ಪರೀಕ್ಷೆ ನಡೆಸಿದಾಗ ಮಹಿಳೆಯ ಹೊಟ್ಟೆಯಲ್ಲಿ ಕ್ಯಾಲ್ಸಿಫೈಡ್ ಭ್ರೂಣ (ಕಲ್ಲಿನ ಭ್ರೂಣ) ಇರುವುದು ಪತ್ತೆಯಾಗಿದೆ. 7 ಮಕ್ಕಳ ತಾಯಿಯಾಗಿರುವ ಡೇನಿಯೆಲ್ಲಾ ಅವರಿಗೆ ಈ ಕುರಿತು ಯಾವುದೇ ಮಾಹಿತಿ ಇರಲಿಲ್ಲ. ಮಾರ್ಚ್ 14 ರಂದು, ವೈದ್ಯರು ಶಸ್ತ್ರಚಿಕಿತ್ಸೆಯ ಮೂಲಕ ಕ್ಯಾಲ್ಸಿಫೈಡ್ ಭ್ರೂಣವನ್ನು ತೆಗೆದಿದ್ದಾರೆ. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆದರೂ ಡೇನಿಯೆಲ್ಲಾ ಹೆಚ್ಚು ಕಾಲ ಬದುಕಲು ಸಾಧ್ಯವಾಗಲಿಲ್ಲ. ಶಸ್ತ್ರಚಿಕಿತ್ಸೆ ಮರುದಿನ ಆಕೆ ನಿಧನರಾಗಿದ್ದಾರೆ.ಶಸ್ತ್ರಚಿಕಿತ್ಸೆಯ ನಂತರ ಸೋಂಕಿನಿಂದ ಮಹಿಳೆ ಸಾವನ್ನಪ್ಪಿದ್ದಾಳೆ ಎಂದು ವೈದ್ಯ ಪ್ಯಾಟ್ರಿಕ್ ಡಿಜೈರ್ ತಿಳಿಸಿದ್ದಾರೆ.
ಕೆಲವೊಮ್ಮೆ ಗರ್ಭಾಶಯದ ಬದಲಾಗಿ ದೇಹದ ಇತರ ಭಾಗಗಳಲ್ಲಿ ಗರ್ಭಧಾರಣೆ ಸಂಭವಿಸುತ್ತದೆ, ಇದನ್ನು ಅಪಸ್ಥಾನೀಯ ಗರ್ಭಧಾರಣೆ ಎಂದು ಕರೆಯಲಾಗುತ್ತದೆ. ಮಹಿಳೆಯ ವಿಷಯದಲ್ಲೂ ಅದೇ ಸಂಭವಿಸಿದೆ. ಮಗುವಿನ ಬೆಳವಣಿಗೆಯ ಕೊರತೆಯಿಂದಾಗಿ, ಅದು ಕ್ಯಾಲ್ಸಿಫೈಡ್ ಆಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ತೀವ್ರವಾದ ನೋವು ಅಥವಾ ರಕ್ತಸ್ರಾವ ಇರುವುದಿಲ್ಲ. ಇದರಲ್ಲಿ ಯಾವುದೇ ರೋಗಲಕ್ಷಣಗಳಿಲ್ಲದ ಕಾರಣ ಎಕ್ಸ್-ರೇ ಮಾಡುವವರೆಗೆ ಇದು ಗಮನಕ್ಕೆ ಬರುವುದಿಲ್ಲ. ಡೇನಿಯೆಲ್ಲಾ ಮಹಿಳೆಯ ವಿಷಯದಲ್ಲೂ ಈ ರೀತಿ ನಡೆದಿದೆ ಎಂದು ವೈದ್ಯರು ಹೇಳಿದ್ದಾರೆ.