ಪತಿ ಪತ್ನಿಯ ಪ್ರೇಮದ ಕಾಣಿಕೆ ಬ್ಯಾಂಡೇಯ್ಡ್ -ಹೆಂಡತಿಯ ಮೇಲಿನ ಪ್ರೀತಿಯೇ ಬ್ಯಾಂಡೇಯ್ಡ್  ಆವಿಷ್ಕಾರಕ್ಕೆ ಕಾರಣ-‌ಬ್ಯಾಂಡೇಯ್ಡ್ ವಿಶ್ವದಾದ್ಯಂತ ಇಂದೂ ಜನಪ್ರಿಯ

ನಮ್ಮ ಕೈಗೆ ಕತ್ತಿ ಅಥವಾ ಬ್ಲೇಡ್ ತಾಗಿ ಗಾಯವಾದ ತಕ್ಷಣ ಓಡಿ ಹೋಗಿ ಅಂಗಡಿಯಿಂದ ಬ್ಯಾಂಡ್ -ಏಯ್ಡ್ ತಂದು ಕಟ್ಕೋತೇವೆ. ಎಷ್ಟು ಸುಲಭ ಅಲ್ವಾ? ಆದರೆ ಇದನ್ನು ಕಂಡುಹಿಡಿದ ಸಂಶೋಧನೆಯ ಹಿಂದೆ ಒಂದು ರೋಚಕ ಕಥೆಯಿದೆ. ಇತಿಹಾಸದಲ್ಲಿ ಅವನ ಹೆಸರು ಸ್ವಲ್ಪಮಟ್ಟಿಗೆ ಕಳೆದುಹೋಗಿದ್ದರೂ, ಅಪಘಾತ-ಪೀಡಿತ ಪ್ರಪಂಚದ ಅತ್ಯಂತ ಉಪಯುಕ್ತ ಸಾಧನಗಳ ಆವಿಷ್ಕಾರಕ್ಕೆ ಅರ್ಲೆ ಡಿಕ್ಸನ್ (1893-1961) ಕಾರಣವಾಗಿದ್ದಾನೆ. ಅರ್ಲೆ ಡಿಕ್ಸನ್ ಅಕ್ಟೋಬರ್ 10, 1892 ರಲ್ಲಿ ಅಮೇರಿಕಾದಲ್ಲಿ ಜನಿಸಿದರು. ಈತ ಅಂಟಿಕೊಳ್ಳುವ ಬ್ಯಾಂಡ್ -ಏಯ್ಡ್ ಗಳನ್ನು ಆವಿಷ್ಕರಿಸಿದ ಅಮೇರಿಕನ್ ಸಂಶೋಧಕ.

ಅರ್ಲೆ ಡಿಕ್ಸನ್, ಜಾನ್ಸನ್ ಅಂಡ್ ಜಾನ್ಸನ್‌ ಕಂಪನಿಯಲ್ಲಿ ಹತ್ತಿ ಖರೀದುದಾರರಾಗಿ ಕೆಲಸ ಮಾಡುತ್ತಿದ್ದನು .1917 ರಲ್ಲಿ ಡಿಕ್ಸನ್ ಜೋಸೆಫೀನ್ ಫ್ರಾನ್ಸಿಸ್ ನೈಟ್ ಅವರನ್ನು ವಿವಾಹವಾಗುತ್ತಾರೆ. ಸಂಶೋಧನೆ ನಡೆದ ಕಾಲದಲ್ಲಿ ಡಿಕ್ಸನ್ ಮತ್ತು ಜೋಸೆಫೀನ್‌ ಹೊಸ ಮದುವೆಯಾದ ನವ ದಂಪತಿಗಳು. ಡಿಕ್ಸನ್ ತನ್ನ ಹೆಂಡತಿ ಜೋಸೆಫೀನ್‌ ನೈಟ್ ಳನ್ನು ಬಹಳವಾಗಿ ಪ್ರೀತಿಸುತ್ತಿದ್ದನು. ಅಡುಗೆ ಮನೆಯಲ್ಲಿ ಕೆಲಸ ಮಾಡುವಾಗ ತನ್ನ ಹೊಸ ವಧು ನಿರಂತರವಾಗಿ ತನ್ನ ಬೆರಳುಗಳಿಗೆ ಗಾಯ ಮಾಡಿಕೊಳ್ಳುತ್ತಾಳೆ ಎಂದು ಅವನು ಬೇಗನೆ ಅರಿತುಕೊಳ್ಳುತ್ತಾನೆ. ಆತುರಾತುರವಾಗಿ ಮನೆ ಕೆಲಸ ಮಾಡುವಾಗ ಜೋಸೆಫೀನ್‌ ಏನಾದರೊಂದು ಗಾಯಗಳನ್ನು ಮಾಡಿಕೊಳ್ಳುತ್ತಿದ್ದಳು. ಅಡುಗೆ ಮಾಡುವಾಗ ಅವಳಿಗೆ ಆಗಾಗ್ಗೆ ಸಣ್ಣ ಗಾಯಗಳು ,ಕೈ ಕತ್ತರಿಸಿಕೊಳ್ಳುವುದು ಮತ್ತು ಸುಟ್ಟಗಾಯಗಳಾಗುವುದು ನಡೆದೇ ಇತ್ತು. ಯಾಕೆಂದರೆ ಆಕೆ ತುಂಬಾ ಹೆದರಿಕೆಯ ಸ್ವಭಾವದವಳಾಗಿದ್ದಳು. ಇಂತಹ ಜನರಿಗೆ ಆಂಗ್ಲ ಭಾಷೆಯಲ್ಲಿ ಸೆಲ್ಫ್ ಹಾರ್ಮೆರ್ ಎನ್ನುತ್ತಾರೆ.

ಕೆಲಸದ ಮಧ್ಯೆ ಡಿಕ್ಸನ್‌ ಗೆ ಪತ್ನಿಯಿಂದ ಪ್ರತಿದಿನ ದೂರವಾಣಿ ಕರೆಗಳು ಬರತೊಡಗಿದವು. “ನನಗೇನೋ ಗಾಯವಾಗಿದೆ ಬನ್ನಿ” ಎಂಬ ಫೋನ್ ಕರೆಗಳು. ಇಂತಹ ಕರೆಗಳು ಬಂದಾಗ ಡಿಕ್ಸನ್ ಆಫೀಸ್ ಕೆಲಸದ ಮಧ್ಯೆ ಮೇಲಾಧಿಕಾರಿಯಿಂದ ಬಿಡುವು ಪಡೆದು ಮನೆಗೆ ಹೋಗಿ ಬ್ಯಾಂಡೇಜ್ ಕಟ್ಟಿ ಬರುವುದು ವಾಡಿಕೆಯಾಗಿತ್ತು. ಸ್ವಲ್ಪ ಮಟ್ಟಿಗೆ ಕಿರಿ ಕಿರಿಯಾಗುತಿದ್ದರೂ , ಹೆಂಡತಿಯನ್ನು ತುಂಬಾ ಪ್ರೀತಿಸುತಿದ್ದವನಾದ್ದರಿಂದ ಏನೂ ಬೇಸರವಿಲ್ಲದೆ ಮನೆಗೆ ಹೋಗಿ ಬ್ಯಾಂಡೇಜ್ ಕಟ್ಟಿ ಬರುತ್ತಿದ್ದನು. ಗಾಯಗಳಾದಾಗ ಔಷದಿಯನ್ನು ಬಿಳಿ ವಸ್ತ್ರದ ಮದ್ಯದಲ್ಲಿಟ್ಟು ಕಟ್ಟುವುದು ಆಗಿನ ಕಾಲದಲ್ಲಿ ರೂಢಿಯಲ್ಲಿತ್ತು. ದಿನ ಕಳೆದಂತೆ ಡಿಕ್ಸನ್‌ ಗೆ ಇದೊಂದು ತ್ರಾಸದಾಯಕ ಕೆಲಸ ಎಂಬ ಅರಿವಾಗತೊಡಗಿತು. ಆಫೀಸ್ ಫೋನ್ ರಿಂಗಣಿಸಿದಾಗಲೆಲ್ಲ ಸಹೋದ್ಯೋಗಿಗಳು “ನೋಡೋ ಹೆಂಡತಿಯ ಫೋನ್ ಬಂತು ಮನೆಗೆ ಹೋಗು ” ಎಂದು ರೇಗಿಸುತ್ತಿದ್ದರು. ಇದು ಹೀಗೇ ಮುಂದುವರಿದಿತ್ತು. ಒಂದು ದಿನ ಅವನಿಗೂ ಯಾಕೋ ಬೇಜಾರಾಯಿತು. ಎಷ್ಟು ಬಾರಿ ಈ ಥರ ಮೇಲಾಧಿಕಾರಿಯಿಂದ ಅಪ್ಪಣೆ ಪಡೆದು ಹೋಗುವುದು? ಇದಕ್ಕೆ ಏನಾದರೊಂದು ಪರಿಹಾರ ಕಂಡು ಹಿಡಿಯಲೇಬೇಕೆಂದು ಯೋಚಿಸತೊಡಗುತ್ತಾನೆ. ಒಂದು ಭಾನುವಾರದಂದು ಡಿಕ್ಸನ್ ಜಿಗಟು ಟೇಪ್ ಗಳ ಮೇಲೆ ಮಧ್ಯ ಭಾಗದಲ್ಲಿ ಹತ್ತಿಯನ್ನಿಟ್ಟು ಅದರಲ್ಲಿ ಸ್ವಲ್ಪ ಮುಲಾಮುವನ್ನು ಹಾಕಿ ಡ್ರಾಯರ್ ನಲ್ಲಿರಿಸಿ, “ಇನ್ನು ನನ್ನನ್ನು ಕರೆಯಬೇಡ , ನಿನ್ನ ಗಾಯಕ್ಕೆ ಎಲ್ಲಾ ವ್ಯವಸ್ಥೆ ಮಾಡಿದ್ದೇನೆ, ಏನಾದರೂ ಗಾಯವಾದರೆ ಡ್ರಾಯರ್ ಒಳಗಡೆ ಬ್ಯಾಂಡೇಜ್ ಗಳಿವೆ, ಒಂದನ್ನು ಎತ್ತಿ ಹತ್ತಿಯ ಭಾಗವನ್ನು ಗಾಯದ ಮೇಲಿಟ್ಟು ಅಂಟಿಸಿಬಿಡು” ಎಂದು ಮಡದಿಗೆ ಹೇಳಿ ಆಫೀಸಿಗೆ ಹೊರಡುತ್ತಾನೆ.

ಹೋದ ಸ್ವಲ್ಪ ಸಮಯದಲ್ಲೇ ಡಿಕ್ಸನ್‌ ಗೆ ಮನೆಯಿಂದ ಫೋನ್ ಕರೆ ಬರುತ್ತದೆ” ನಿನ್ನ ಎಲ್ಲಾ ಬ್ಯಾಂಡೇಜ್ ಗಳು ಒಂದಕ್ಕೊಂದು ಅಂಟಿವೆ, ಬೇಗ ಬಾ ಮನೆಗೆ” ಎಂದು ಹೇಳುತ್ತಾಳೆ. ಡಿಕ್ಸನ್ ಮನೆಗೆ ತೆರಳಿ ನೋಡಿದಾಗ ಅಂಟಿನಿಂದಾಗಿ ಎಲ್ಲಾ ಬ್ಯಾಂಡೆಡ್ ಗಳು ಒಂದರ ಮೇಲೊಂದು ಅಂಟಿಕೊಂಡಿತ್ತು. ಮಾತ್ರವಲ್ಲದೆ ವೇಗವಾಗಿ ಕೆಲಸ ಮಾಡುವ ಅವಳ ಬೆರಳುಗಳ ಮಧ್ಯೆ ಪಟ್ಟಿಯ ಅಂಟು ನಿರೀಕ್ಷಿಸಿದಷ್ಟು ಕೆಲಸ ಮಾಡಲಿಲ್ಲ. ಅದು ಉದುರಿ ಬೀಳುತಿತ್ತು. ಇನ್ನಷ್ಟು ಯೋಚಿಸಿ, ಬ್ಯಾಂಡೆಡ್ ಟೇಪ್ಗಳು ಒಂದಕ್ಕೊಂದು ಅಂಟದ ಹಾಗೆ ನಡುವಿನಲ್ಲಿ ಒಂದು ಪ್ಲಾಸ್ಟಿಕ್ ನಂತಹ ಹಾಳೆಯನ್ನು ಇರಿಸುತ್ತಾನೆ. ಟೇಪ್‌ನ ರೋಲ್‌ನ ಮಧ್ಯಂತರದಲ್ಲಿ ಬಲೆ ಚೌಕಗಳನ್ನು ಕ್ರಿನೋಲಿನ್‌ನೊಂದಿಗೆ ಇರಿಸುತ್ತಾನೆ. ಆಗ ಬ್ಯಾಂಡೈಡ್ ಗಳು ಒಂದಕ್ಕೊಂದು ಅಂಟುತ್ತಿರಲಿಲ್ಲ. ಇದುವೇ ಡಿಕ್ಸನ್ ಮಾಡಿದ ಆವಿಷ್ಕಾರ. ಮತ್ತು ಎಂದೆಂದಿಗೂ ಫೋನ್ ಕರೆ ಬರಲೇ ಇಲ್ಲ. ಸಹೋದ್ಯೋಗಿಗಳ ತಮಾಷೆಯ ಮಾತುಗಳೂ ನಿಂತು ಹೋಗುತ್ತದೆ.

ಈ ಸುದ್ದಿಯನ್ನು ತನ್ನ ಸಹೋದ್ಯೋಗಿಗಳೊಂದಿಗೆ ಡಿಕ್ಸನ್ ಹಂಚಿಕೊಳ್ಳುತ್ತಾನೆ. ತನ್ನ ಕಂಪನಿಯ ಮೇಲಾಧಿಕಾರಿಗೂ ಈ ವಿಷಯ ತಿಳಿಸುತ್ತಾನೆ. ಡಿಕ್ಸನ್‌ ಮೇಲಾಧಿಕಾರಿಯಾಗಿದ್ದ ಜೇಮ್ಸ್ ವುಡ್ ಜಾನ್ಸನ್ ಈ ಐಡಿಯಾವನ್ನು ಇಷ್ಟಪಡುತ್ತಾನೆ, “ನಾಳೆ ಬರುವಾಗ ನೀನು ಮಾಡಿದ ಒಂದು ಬ್ಯಾಂಡೆಡ್ ಅನ್ನು ತಂದು ನನಗೆ ತೋರಿಸಬೇಕು. ನೋಡುವ ಕುತೂಹಲವಾಗಿದೆ.” ಎನ್ನುತ್ತಾನೆ. ಮರುದಿನ ಡಿಕ್ಸನ್ ಕಚೇರಿಗೆ ಬರುವಾಗ ಒಂದು ಬ್ಯಾಂಡೆಡ್ ಅನ್ನು ತರುತ್ತಾನೆ. ಅದನ್ನು ನೋಡಿದ ಮೇಲಾಧಿಕಾರಿ ಜೇಮ್ಸ್ ವುಡ್ ಜಾನ್ಸನ್ ತುಂಬಾ ಖುಷಿ ಪಡುತ್ತಾನೆ. ಡಿಕ್ಸನ್ ಮೇಲಾಧಿಕಾರಿಯೊಂದಿಗೆ ತನ್ನ ಆವಿಷ್ಕಾರವನ್ನು ಹಂಚಿಕೊಳ್ಳುತ್ತಾನೆ. ಮೇಲಾಧಿಕಾರಿ ಈ ಉತ್ಪನ್ನದ ಸಾಮರ್ಥ್ಯವನ್ನು ಅಂದಾಜಿಸುತ್ತಾನೆ. ಇದರ ಮುಂದುವರಿದ ಭಾಗ ಬ್ಯಾಂಡೇಯ್ಡ್ ಅನ್ನೋ ದೊಡ್ಡ ಉತ್ಪನ್ನದ ಅವಿಷ್ಕಾರಕ್ಕೆ ನಾಂದಿಯಾಗುತ್ತದೆ. ಈ ಉತ್ಪನ್ನವನ್ನು ಬ್ಯಾಂಡೇಯ್ಡ್ ಎಂದು ಕರೆಯುತ್ತಾರೆ. ತಕ್ಷಣವೇ ಯಾರ ಸಹಾಯವಿಲ್ಲದೆ ಗಾಯಗಳನ್ನು ಮುಚ್ಚಿಡುವ ಮತ್ತು ಗುಣ ಪಡಿಸುವ ಸಾಮರ್ಥ್ಯ ಇದು ಹೊಂದಿತ್ತು. ಪರೀಕ್ಷಾರ್ಥವಾಗಿ ಜಾನ್ಸನ್ ಅಂಡ್ ಜಾನ್ಸನ್ ಬ್ಯಾಂಡೇಯ್ಡ್ ಗಳನ್ನು ತಯಾರಿಸಿ ಅವುಗಳನ್ನು ಔಷಧಿ ಅಂಗಡಿಗೆ ಮಾರಾಟ ಮಾಡುತ್ತಾರೆ. ಆರಂಭದಲ್ಲಿ ಬ್ಯಾಂಡೇಯ್ಡ್ ಉತ್ಪನ್ನವು ನಿಧಾನಗತಿಯ ಪ್ರಾರಂಭವನ್ನು ಕಾಣುತ್ತದೆ. ಕಾರಣ ಇದೊಂದು ಹೊಸ ಐಡಿಯಾ ಮತ್ತು ಅದನ್ನು ಹೇಗೆ ಬಳಸಬೇಕೆಂದು ಜನರಿಗೆ ಕಲಿಸಬೇಕಾಗಿತ್ತು. ಬ್ಯಾಂಡೇಜ್ ಅನ್ನು ರಚಿಸಲು ಡಿಕ್ಸನ್ ಕಂಪನಿಯ ಎರಡು ಆರಂಭಿಕ ಉತ್ಪನ್ನಗಳಾದ ಅಂಟಿಕೊಳ್ಳುವ ಟೇಪ್ ಮತ್ತು ಗಾಝ್ ಅನ್ನು ಸಂಯೋಜಿಸಿ ಮೊದಲ ಬ್ಯಾಂಡೇಯ್ಡ್ ಗಳನ್ನು ಕೈಯಿಂದ ತಯಾರಿಸಲಾಗುತ್ತದೆ. ಇದನ್ನು 3,000 ಡಾಲರ್ ಗೆ ಮಾರಾಟ ಮಾಡಲಾಗುತ್ತದೆ. 3 ಇಂಚು ಅಗಲ ಮತ್ತು 18 ಇಂಚು ಉದ್ದವಿದ್ದ ಬ್ಯಾಂಡೇಯ್ಡ್  ಅನ್ನು ಮೊದ ಮೊದಲು ರೈಲು ಮಾರ್ಗ ನಿರ್ಮಿಸುವಾಗ ಗಾಯಗೊಂಡ ಕಾರ್ಮಿಕರಿಗೆ ಉಪಯೋಗವಾಗುವಂತೆ  ವಿನ್ಯಾಸಗೊಳಿಸಲಾಗಿತ್ತು. ಆದರೆ ಶೀಘ್ರದಲ್ಲೇ ಸಾರ್ವಜನಿಕರಿಗೂ ಇದರ ಉಪಯೋಗ ಸಿಗುವಂತಾಯಿತು. ಇಂದು ಬ್ಯಾಂಡೇಯ್ಡ್  ಪ್ರಥಮ ಚಿಕಿತ್ಸೆಯಲ್ಲಿ ವಿಶ್ವದಲ್ಲಿಯೇ ಮುಂಚೂಣಿಯಲ್ಲಿದೆ.

2019 ರಲ್ಲಿ, ಬ್ಯಾಂಡೇಯ್ಡ್  ಕಂಪೆನಿಯು ಅಮೆರಿಕಾದಲ್ಲಿ ಸುಮಾರು 168 ಮಿಲಿಯನ್ ಡಾಲರ್‌ ಗೆ ಮಾರಾಟವಾಗುತ್ತದೆ. ಇದು ದೇಶದ ಪ್ರಮುಖ ಪ್ರಥಮ ಚಿಕಿತ್ಸಾ ಬ್ಯಾಂಡೇಯ್ಡ್  ಆಗಿದೆ. 2022 ರಲ್ಲಿ, ಬ್ಯಾಂಡೇಯ್ಡ್  ಅನ್ನು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಅತ್ಯಂತ ವಿಶ್ವಾಸಾರ್ಹ ಬ್ರ್ಯಾಂಡ್ ಎಂದು ಹೆಸರಿಸಲಾಯಿತು. ಜಾನ್ಸನ್ & ಜಾನ್ಸನ್ ಅಂತಿಮವಾಗಿ ಡಿಕ್ಸನ್ ಅವರನ್ನು ಕಂಪನಿಯಲ್ಲಿ ಉಪಾಧ್ಯಕ್ಷರನ್ನಾಗಿ ನೇಮಿಸುತ್ತಾರೆ. 1957 ರಲ್ಲಿ ನಿವೃತ್ತರಾಗುವವರೆಗೂ ಡಿಕ್ಸನ್‌ ಈ ಹುದ್ದೆಯಲ್ಲಿದ್ದರು. ಡಿಕ್ಸನ್ 1961 ರಲ್ಲಿ ಕೊನೆಯುಸಿರೆಳೆಯುತ್ತಾರೆ. ಅದುವರೆಗೂ ಆತ ನಿರ್ದೇಶಕರ ಮಂಡಳಿಯ ಸದಸ್ಯರಾಗಿದ್ದರು. ಅವರ ಮರಣದ ಸಮಯದಲ್ಲಿ, ಜಾನ್ಸನ್ & ಜಾನ್ಸನ್ ಪ್ರತಿ ವರ್ಷ 30,000,000‌ ಡಾಲರ್ ಮೌಲ್ಯದ‌‌‌‍‌‌‌‌‌‌‌‌.‌‌‌‌‌‌‌‍‌‍ ಬ್ಯಾಂಡೇಯ್ಡ್ ®️ ಅನ್ನು ಮಾರಾಟ ಮಾಡುತ್ತಿತ್ತು.

ಬರಹ: ಫಾರೂಕ್‌ ಕೆಮ್ಮಿಂಜೆ
ಫಿಕ್ಸೆಲ್‌ ಇನ್‌ ಫೊಟೆಕ್ಸ್ ಬೆಂಗಳೂರು

LEAVE A REPLY

Please enter your comment!
Please enter your name here