ಮಂಗಳೂರು: ಮಂಗಳೂರು ಟಿ.ಡಿ.ಆರ್. ಹಗರಣದಲ್ಲಿ ಶಾಸಕ ವೇದವ್ಯಾಸ ಕಾಮತ್ ಅವರ ಕೈವಾಡವಿದೆ ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ. ಅಲ್ಲದೆ ಇದಕ್ಕೆ ಸಂಬಂಧಿಸಿದ ಕಡತವನ್ನು ರಾಜ್ಯ ಸರಕಾರ ತಡೆ ಹಿಡಿದು ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಟಿ.ಡಿ.ಆರ್ ನಿಯಮದ ಪ್ರಕಾರ ಜಮೀನಿನ ಮೂಲ ಮಾಲಕನ ಮೂಲಕ ಮಾತ್ರ ಖರೀದಿ ಮಾಡಬೇಕು. ಮಧ್ಯವರ್ತಿ, ಎಗ್ರಿಮೆಂಟ್ ಹೋಲ್ಡರ್ನ ಜೊತೆಗೆ ಖರೀದಿ ಮಾಡುವ ಹಾಗಿಲ್ಲ. ಆದರೂ ಪಚ್ಚನಾಡಿಯ ಕಸದ ರಾಶಿಗೆ ತಾಗಿಕೊಂಡಿದ್ದ 10.8 ಎಕರೆ ಜಮೀನಿನ ಮೂಲ ಮಾಲಕನ ಬದಲಿಗೆ ಎಗ್ರಿಮೆಂಟ್ ಹೋಲ್ಡರ್ ಗಿರಿಧರ್ ಶೆಟ್ಟಿಯೊಂದಿಗೆ ಮಂಗಳೂರು ನಗರ ಪಾಲಿಕೆಯು ಟಿ.ಡಿ.ಆರ್ ಮೂಲಕ ಖರೀದಿಗೆ ವ್ಯವಹಾರ ಕುದುರಿಸಿ ದಾಖಲೆ ಸಿದ್ಧಪಡಿಸಿದ್ದು ಹೇಗೆ ಎಂದು ಪ್ರಶ್ನಿಸಿದ್ದಾರೆ. ಮೂಲಗಳ ಪ್ರಕಾರ ಜಮೀನಿನ ಮೂಲ ಮಾಲಕನಿಂದ ಗಿರಿಧರ್ ಶೆಟ್ಟಿ ಈ ಜಮೀನು ಖರೀದಿ ಮಾಡಲು ನಿಗದಿ ಮಾಡಿದ್ದು 7 ಕೋಟಿ ರೂ. ಅದರಲ್ಲಿ ಮುಂಗಡವಾಗಿ 1 ಕೋಟಿ ರೂ. ನೀಡಿ ಜಮೀನು ಖರೀದಿ ಒಪ್ಪಂದ ಮಾಡಿಕೊಂಡಿದ್ದಾರೆ. ನಗರ ಪಾಲಿಕೆಯ ಭ್ರಷ್ಟರೊಂದಿಗೆ ಮಾಡಿಕೊಂಡ ಟಿ.ಡಿ.ಆರ್ ಜಮೀನು ಪರಭಾರೆ ಡೀಲ್ ಪ್ರಕಾರ ಈ ಜಮೀನಿಗೆ ಸಿಗಲಿರುವ ಟಿ.ಡಿ.ಆರ್ ಮೌಲ್ಯ ಸುಮಾರು 50 ಕೋಟಿ ರೂ. ಅಂದರೆ 1ಕೋಟಿ ರೂ.ಹೂಡಿಕೆ ಮಾಡಿ ಅಂದಾಜು 40 ಕೋಟಿ ರೂ. ಲೂಟಿ ಮಾಡಲು ಯೋಜನೆ ರೂಪಿಸಲಾಗಿತ್ತು. ಈ ಎಲ್ಲಾ ವ್ಯವಹಾರಗಳ ತಾಂತ್ರಿಕ ಸಮಸ್ಯೆಯನ್ನು ಅರಿತಿದ್ದ ಮುಡಾ ಆಯುಕ್ತ ಮನ್ಸೂರ್ ಅಲಿ ಕಡತ ವಿಲೇವಾರಿ ಮಾಡಲು ಒಪ್ಪದೆ ಸರಕಾರಕ್ಕೆ ಪತ್ರ ಬರೆಯುವುದಾಗಿ ಹೇಳಿಕೊಂಡಿದ್ದರು. ಅದನ್ನರಿತ ಶಾಸಕ ವೇದವ್ಯಾಸ ಕಾಮತ್ ಮುಡಾ ಆಯುಕ್ತರನ್ನು ಸರ್ಕ್ಯೂಟ್ ಹೌಸಿಗೆ ಕರೆಸಿ ಟಿ.ಡಿ.ಆರ್ ಕಡತ ವಿಲೇವಾರಿ ಮಾಡಲು ಒತ್ತಡ ಹಾಕಿದ್ದರು ಎನ್ನಲಾಗಿದೆ. ಆದರೆ ಮುಡಾ ಆಯುಕ್ತರು ಅದಕ್ಕೆ ಒಪ್ಪದಿದ್ದಾಗ ನಂತರ ನಡೆದ ಬೆಳವಣಿಗೆಯ ಭಾಗವಾಗಿ ಲೋಕಾಯುಕ್ತ ದಾಳಿ ನಡೆಯಿತು ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ.