ಬೆಳ್ಳಂಬೆಳಗ್ಗೆ ರಾಜ್ಯದ ವಿವಿಧೆಡೆ ಲೋಕಾಯುಕ್ತ ದಾಳಿ- ರಾಮನಗರ, ಕಾರವಾರ ಬೀದರ್ ನಲ್ಲಿ ಕಾರ್ಯಾಚರಣೆ ಭ್ರಷ್ಟರ ಬೇಟೆ-20 ಕೋಟಿಗೂ ಅಧಿಕ ಆಸ್ತಿ ಹೊಂದಿರುವ ಪಿಡಿಒ ಲೋಕಾಯುಕ್ತ ವಶಕ್ಕೆ

ಮಂಗಳೂರು(ಬೆಂಗಳೂರು): ಲೋಕಾಯುಕ್ತ ಅಧಿಕಾರಿಗಳು ಬುಧವಾರ(ಮಾ.27) ಬೆಳ್ಳಂಬೆಳಗ್ಗೆ ರಾಜ್ಯದ ವಿವಿಧೆಡೆಡೆ ಭ್ರಷ್ಟರ ನಿವಾಸ, ಕಚೇರಿಗಳಿಗೆ ದಾಳಿ ನಡೆಸಿದ್ದಾರೆ.

ರಾಮನಗರದಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಮಂಚನಾಯ್ಕನಹಳ್ಳಿ ಗ್ರಾಪಂ ಪಿಡಿಒ ಯತೀಶ್ ರನ್ನು ವಶಕ್ಕೆ ಪಡೆದಿದ್ದಾರೆ. ಅಕ್ರಮ ಆಸ್ತಿಗಳಿಸಿದ ದೂರಿನ ಹಿನ್ನೆಲೆ ಪಿಡಿಒಗೆ ಸೇರಿದ ಮನೆ, ಕಚೇರಿ ಮೇಲೆ ದಾಳಿ ಮಾಡಲಾಗಿದೆ. ಮೈಸೂರು, ಚನ್ನಪಟ್ಟಣದಲ್ಲಿ ಮನೆಗಳನ್ನ ಹೊಂದಿದ್ದು, ಒಟ್ಟು ಏಳು ಕಡೆ ಏಕಕಾಲದಲ್ಲಿ ದಾಳಿ ಮಾಡಲಾಗಿದೆ.

ಚನ್ನಪಟ್ಟಣ ತಾಲೂಕಿನ ಮೈನಾಯಕನಹಳ್ಳಿ ಗ್ರಾಮ ಪಂಚಾಯತ್ ಪಿಡಿಒ ಶಿಭಾ ನಿಖಾತ್ ಮನೆ ಮೇಲೂ‌ ದಾಳಿ ನಡೆಸಲಾಗಿದೆ. ಚನ್ನಪಟ್ಟಣದಲ್ಲಿ ಮನೆ ಹೊಂದಿರೋ ಶಿಭಾ ನಿಖಾತ್ ಹಾಗೂ ಯತೀಶ್ ಒಂದೇ ಬ್ಯಾಚ್ ಪಿಡಿಒಗಳಾಗಿದ್ದಾರೆ. ಇಬ್ಬರ ಮೇಲೂ ಅಕ್ರಮ ಆಸ್ತಿ ಗಳಿಕೆ ದೂರು ಕೇಳಿ ಬಂದಿತ್ತು. ಯತೀಶ್ 20 ಕೋಟಿಗೂ ಅಧಿಕ ಆಸ್ತಿ ಹೊಂದಿದ್ದಾರೆ ಎಂದು ಹೇಳಲಾಗಿದೆ..

ಕಾರವಾರ ನಗರಾಭಿವೃದ್ಧಿ ಪ್ರಾಧಿಕಾರದ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ (ಎಇಇ) ಪ್ರಕಾಶ್ ರೇವಣಕರ್ ಮನೆ, ಕಚೇರಿ ಮೇಲೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಐಶ್ವರ್ಯ ರೆಸಿಡೆನ್ಸಿ, ಪ್ರಕಾಶ್ ರೇವಣಕರ್ ಮನೆ, ನಗರಾಭಿವೃದ್ಧಿ ಪ್ರಾಧಿಕಾದ ಕಚೇರಿಯಲ್ಲಿ ದಾಖಲೆಗಳ ಹಾಗೂ ಅಕ್ರಮ ಸಂಪತ್ತಿನ ತಪಾಸಣೆ ನಡೆಯುತ್ತಿದ್ದು, ಹೆಚ್ಚಿನ ವಿವರಗಳು ಇನ್ನಷ್ಟೇ ತಿಳಿದು ಬರಬೇಕಿದೆ. ಕಾರವಾರ ಲೋಕಾಯುಕ್ತ ಎಸ್ಪಿ ಹಾಗೂ ಪಕ್ಕದ ಜಿಲ್ಲೆಯ ಎಸ್ಪಿ ದಾಳಿಯ ನೇತೃತ್ವ ವಹಿಸಿದ್ದಾರೆ.

ಬೀದರ್ ಕಾರಂಜಾ ವಿಭಾಗದ ಇಇ ಶಿವಕುಮಾರ ಸ್ವಾಮಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್ ನೀಡಿದ್ದಾರೆ. ಅಕ್ರಮ ಅಸ್ತಿ ಗಳಿಕೆ ಆರೋಪ ಹಿನ್ನಲೆ ಲೋಕಾಯುಕ್ತ ಡಿವೈಎಸ್.ಪಿ ಓಲೇಕಾರ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಬೀದರ್ ಅಗ್ರಿಕಲ್ಚರ್ ಕಾಲೋನಿಯ ಮನೆ, ನಾಗೂರ (ಬಿ) ಗ್ರಾಮದ ಮನೆ,ಭಾಲ್ಕಿಯಲ್ಲಿರುವ ಕಾರಂಜಾ ಕಚೇರಿ, ಕಲ್ಬುರ್ಗಿ ಪಟ್ಣಣದ ಮನೆಯಲ್ಲಿ ಅಧಿಕಾರಿಗಳಿಂದ ಶೋಧ ನಡೆಸಲಾಗುತ್ತಿದೆ. ಮಹತ್ವದ ದಾಖಲೆ ವಶಪಡಿಸಿ ಕೊಂಡಿರುವ ಲೋಕಾಯುಕ್ತ ಅಧಿಕಾರಿಗಳು ಶೋಧ ಮುಂದುವರೆಸಿದ್ದಾರೆ ಎಂದು ತಿಳಿದು ಬಂದಿದೆ.

ಚಿಕ್ಕಬಳ್ಳಾಪುರ ಕೆಆರ್‌ಐಡಿಎಲ್ ಇಇ ಸದಾಶಿವಯ್ಯ ಅವರ ಚಿಕ್ಕಬಳ್ಳಾಪುರ ಕಚೇರಿ, ಆಸ್ತಿ ಪಾಸ್ತಿ ಮೇಲೆ ದಾಳಿ ನಡೆಸಲಾಗಿದೆ. ಯಲಹಂಕದ ಬಾಡಿಗೆ ಮನೆ, ಮೈಸೂರಿನ ರಾಮಕೃಷ್ಣ ನಗರದ ಮನೆ, ಬಗಾದಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಮನೆ, ಟಿ.ನರಸೀಪುರದ ಒಕ್ಕಲಿಗೆರೆ ಮನೆ ಸೇರಿದಂತೆ ಆಸ್ತಿಗಳ ಮೇಲೆ ಚಿಕ್ಕಬಳ್ಳಾಪುರ ಲೋಕಾಯುಕ್ತ ಎಸ್ಪಿ ಡಾ.ರಾಮ್ ಅರಸಿದ್ದಿ ಮತ್ತು ಡಿವೈಎಸ್ಪಿ ವಿರೇಂದ್ರ ಕುಮಾರ್,ಮೋಹನ್ ಶಿವಪ್ರಸಾದ್ ನೇತೃತ್ವದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ.

ವಿಜಯಪುರ ನಗರದಲ್ಲಿರುವ ಬಾಗಲಕೋಟ ಜಿಲ್ಲೆಯ ಎಆರ್ ಟಿಒ ಮತ್ತು ಸಂಬಂಧಿಕರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನಗರದ ಚಾಲುಕ್ಯ ನಗರದಲ್ಲಿ ಇರುವ ಬಾಗಲಕೋಟ ಜಿಲ್ಲೆಯ ಜಮಖಂಡಿ ಪ್ರಾದೇಶಿಕ ಸಾರಿಗೆ ಕಛೇರಿಯ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಷಣ್ಮುಖಪ್ಪ ತೀರ್ಥ ಅವರ ಮನೆ ಹಾಗೂ ಅವರ ಸಂಬಂಧಿಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ. ಲೋಕಾಯುಕ್ತ ಎಸ್ಪಿ ಟಿ.ಮಲ್ಲೇಶ ನೇತೃತ್ವದಲ್ಲಿ ಡಿಎಸ್ಪಿ ಸುರೆಶರೆಡ್ಡಿ, ಸಿಪಿಐ ಆನಂದ ಠಕ್ಕನವರ ಹಾಗೂ ಸಿಬ್ಬಂದಿಯೊಂದಿಗೆ ದಾಳಿ ನಡೆಸಿದ್ದು, ಅಕ್ರಮ ಆಸ್ತಿ ಗಳಿಕೆಯ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.

ಕಡಬ ತಾಲೂಕು ಪಂಚಾಯತ್‌ ನ ನೂತನ ಕಾರ್ಯ ನಿರ್ವಾಹಕಾಧಿಕಾರಿ ಬಿ ವೆ ಜಯಣ್ಣ ಅವರಿಗೆ ಸೇರಿದ ಸೋಮವಾರಪೇಟೆ ಮನೆ, ಕಡಬ ಪಂಜ ರಸ್ತೆಯ ವಿದ್ಯಾನಗರದ ಬಾಡಿಗೆ ಮನೆ ಸೇರಿದಂತೆ ಕಡಬ ತಾಲೂಕು ಪಂಚಾಯತ್‌ ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳು  ದಾಳಿ ನಡೆಸಿದ್ದು, ವಿಚಾರಣೆ ನಡೆಸಲಾಗಿದೆ.

LEAVE A REPLY

Please enter your comment!
Please enter your name here