2.6 ಕಿ.ಮೀ ಉದ್ದದ ಬಾಲ್ಟಿಮೋರ್ ಸೇತುವೆಗೆ ಹಡಗು ಡಿಕ್ಕಿ-ಹಲವಾರು ಮಂದಿ ನಾಪತ್ತೆ-ಮುಂದುವರಿದ ಶೋಧ-ಸೇತುವೆ ನದಿಗುರುಳಿದೆ-ವಿಡಿಯೋ ವೈರಲ್

ಮಂಗಳೂರು(ಅಮೆರಿಕ): ಸಿಂಗಾಪುರಕ್ಕೆ ಸೇರಿದ ಸರಕು ಸಾಗಣೆ ಮಾಡುತ್ತಿದ್ದ ಹಡಗು ಡಿಕ್ಕಿ ಹೊಡೆದ ಪರಿಣಾಮ ಅಮೆರಿಕದ ಬಾಲ್ಟಿಮೋರ್‌ನಲ್ಲಿರುವ 2.6 ಕಿಮೀ ಉದ್ದದ ಪ್ರಮುಖ ಸೇತುವೆಯೊಂದು ಮಾ.26ರಂದು ಕುಸಿದುಬಿದ್ದಿದೆ.

ಸೇತುವೆ ನೀರಿಗೆ ಉರುಳಿದ್ದು, ಕೆಲವು ವಾಹನಗಳು ಸಹ ನೀರುಪಾಲಾಗಿವೆ. ಈವರೆಗೆ ದೊರಕಿರುವ ಮಾಹಿತಿಯ ಪ್ರಕಾರ ಸುಮಾರು ಏಳು ಮಂದಿ ನಾಪತ್ತೆಯಾಗಿರುವುದಾಗಿ ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದೆ. ಡಿಕ್ಕಿ ಹೊಡೆದ ಘಟನೆಯ ದೃಶ್ಯವು ಸಿಸಿಟಿವಿಯಲ್ಲಿ ದಾಖಲಾಗಿದ್ದು, ಸಿನಿಮೀಯ ರೀತಿಯ ಘಟನೆಯಂತೆ ಕಾಣುತ್ತಿದೆ. ಕಂಟೇನರ್ ತುಂಬಿದ್ದ ಹಡಗು ಸೇತುವೆಯ ಸಮೀಪ ಬರುತ್ತಿದಂತೆಯೇ ಹಡಗಿನ ವಿದ್ಯುತ್ ಸಂಪರ್ಕ ಕಡಿತಗೊಂಡ ಪರಿಣಾಮ ಸೇತುವೆ ಪಿಲ್ಲರ್‌ ಗೆ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ. ಸೇತುವೆಯ ಹಲವು ಭಾಗಗಳು ಪಾಟಾಪ್‌ಸ್ಕೋ ನದಿಗೆ ಉರುಳಿದೆ. ಬೃಹತ್ ಸೇತುವೆಯ ಪ್ರಮುಖ ಭಾಗ ನದಿಯಲ್ಲಿ ಮುಳುಗಿದೆ. ಘಟನೆಯಿಂದಾಗಿ ಹಡಗಿಗೂ ಕೂಡ ಅಪಾರ ಪ್ರಮಾಣ ಹಾನಿಯಾಗಿದೆ. ಘಟನೆಯ ಸಂದರ್ಭದಲ್ಲಿ ಸೇತುವೆ ಮೇಲಿದ್ದವರ ಬಗ್ಗೆ ಅಧಿಕೃತವಾಗಿ ತಿಳಿದುಬಂದಿಲ್ಲ. ಈವರೆಗೆ ದೊರಕಿರುವ ಮಾಹಿತಿಯ ಪ್ರಕಾರ ಸುಮಾರು ಏಳು ಮಂದಿ ನಾಪತ್ತೆಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಅಮೆರಿಕದ ಸ್ಥಳೀಯ ಕಾಲಮಾನ ರಾತ್ರಿ 1.30 ಗಂಟೆ ಸುಮಾರಿಗೆ ಈ ದುರಂತ ಸಂಭವಿಸಿದೆ. ಕನಿಷ್ಠ 20 ಮಂದಿ ನೀರಿಗೆ ಬಿದ್ದಿರುವ ಶಂಕೆಯೊಂದಿಗೆ ರಕ್ಷಣಾ ತಂಡಗಳು ಶೋಧ ಕಾರ್ಯ ಮುಂದುವರಿದಿದೆ. ಸುಮಾರು 3 ಕಿಮೀ ಉದ್ದದ ಬೃಹತ್ ಸೇತುವೆ ಕುಸಿತದ ಘಟನೆಯ ವಿಡಿಯೋ ವೈರಲ್ ಆಗಿದೆ. 300 ಮೀಟರ್ ಉದ್ದದ ಹಡಗು, ಉಕ್ಕಿನ ಸೇತುವೆಯನ್ನು ನೀರುಪಾಲು ಮಾಡಿದೆ. ಕ್ಷಣಮಾತ್ರದಲ್ಲಿ ಸೇತುವೆ ಕುಸಿದಿದ್ದು, ಡಿಕ್ಕಿ ಹೊಡೆದ ರಭಸಕ್ಕೆ ಹಡಗಿನಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಬಹುಭಾಗ ನೀರಿನಲ್ಲಿ ಮುಳುಗಿದೆ. ಸಿಂಗಾಪುರ ಧ್ವಜವುಳ್ಳ ಕಂಟೇನರ್ ಹಡಗು ‘ಡಾಲಿ’, ಮೇರಿಲ್ಯಾಂಡ್‌ನ ಬಾಲ್ಟಿಮೋರ್‌ನಲ್ಲಿನ ಫ್ರಾನ್ಸಿಸ್ ಸ್ಕಾಟ್ ಕೀ ಬ್ರಿಡ್ಜ್‌ನ ಪಿಲ್ಲರ್‌ಗೆ ಡಿಕ್ಕಿ ಹೊಡೆದಿದೆ. ಇದು ಶ್ರೀಲಂಕಾದ ಕೊಲೊಂಬೋಗೆ ಸರಕು ತುಂಬಿಕೊಂಡು ಹೋಗುತ್ತಿತ್ತು ಎಂದು ಸಿನರ್ಜಿ ಮೆರೈನ್ ಗ್ರೂಪ್‌ ಮಾಲೀಕ ಗ್ರೇಸ್ ಓಷನ್ ಪ್ರೈ ಲಿ ತಿಳಿಸಿದೆ. “ಹಡಗಿನಲ್ಲಿದ್ದ ಇಬ್ಬರು ಪೈಲಟ್‌ಗಳು ಸೇರಿದಂತೆ ಎಲ್ಲಾ ಸಿಬ್ಬಂದಿಯನ್ನು ಇದಕ್ಕೆ ಹೊಣೆಗಾರರನ್ನಾಗಿ ಮಾಡಲಾಗಿದೆ. ವಿಶಾಲವಾದ ಪಿಲ್ಲರ್‌ಗಳ ನಡುವೆ ಸಾಕಷ್ಟು ಅಂತರವಿದ್ದರೂ, ಈ ಹಡಗು ಪಿಲ್ಲರ್‌ಗೆ ಡಿಕ್ಕಿ ಹೊಡೆದಿದ್ದು ಹೇಗೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ” ಎಂದು ಸಂಸ್ಥೆ ಮಾಹಿತಿ ನೀಡಿದೆ.

“ಐ- 695 ಕೀ ಬ್ರಿಡ್ಜ್‌ನ ಎರಡೂ ಮಾರ್ಗಗಳ ಎಲ್ಲಾ ಲೇನ್‌ಗಳನ್ನು ಬಂದ್ ಮಾಡಲಾಗಿದೆ. ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ” ಎಂದು ಮೇರಿಲ್ಯಾಂಡ್ ಸಾರಿಗೆ ಪ್ರಾಧಿಕಾರ ತಿಳಿಸಿದೆ. ಘಟನೆ ನಡೆದ ಸಂದರ್ಭದಲ್ಲಿ ಫ್ರಾನ್ಸಿಸ್ ಸ್ಕಾಟ್ ಕೀ ಸೇತುವೆಯಲ್ಲಿ 20 ನಿರ್ಮಾಣ ಕಾರ್ಮಿಕರು ಇದ್ದರು ಎನ್ನಲಾಗಿದೆ. ಎಷ್ಟು ವಾಹನಗಳು ನದಿ ನೀರಿಗೆ ಬಿದ್ದಿವೆ, ಹಾಗೂ ಅವುಗಳಲ್ಲಿ ಎಷ್ಟು ಜನರಿದ್ದರು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ದೊರಕಿಲ್ಲ. ಮುಳುಗು ತಜ್ಞರು, ರಕ್ಷಣಾ ತಂಡಗಳು ನೀರಿನಲ್ಲಿ ಇರಬಹುದಾದ ಜನರಿಗಾಗಿ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆ ನಡೆಸಿವೆ. 1.6 ಮೈಲು (2.6 ಕಿಮೀ) ಉದ್ದದ ನಾಲ್ಕು ಲೇನ್ ಸೇತುವೆಯನ್ನು 1977ರಲ್ಲಿ ಉದ್ಘಾಟಿಸಲಾಗಿತ್ತು. ಪ್ರತಿ ವರ್ಷ ಕೋಟ್ಯಂತರ ವಾಹನಗಳ ಇದರ ಮೇಲೆ ಓಡಾಡುತ್ತವೆ. ಅಮೆರಿಕ ರಾಜಧಾನಿ ವಾಷಿಂಗ್ಟನ್ ಡಿಸಿ ಪಕ್ಕದಲ್ಲಿನ ಪೂರ್ವ ಕರಾವಳಿಯ ಕೈಗಾರಿಕಾ ನಗರವಾದ ಬಾಲ್ಟಿಮೋರ್ ಸುತ್ತಮುತ್ತಲಿನ ರಸ್ತೆ ಸಂಪರ್ಕಗಳಿಗೆ ಈ ಸೇತುವೆ ಪ್ರಮುಖ ಕೊಂಡಿಯಾಗಿತ್ತು. ಅಮೆರಿಕದ ರಾಷ್ಟ್ರಗೀತೆಯಾದ ‘ದಿ ಸ್ಟಾರ್- ಸ್ಪಾಂಗಲ್ಡ್ ಬ್ಯಾನರ್’ ಅನ್ನು ರಚಿಸಿದ ಅಮೆರಿಕದ ವಕೀಲ, ಕವಿ ಫ್ರಾನ್ಸಿಸ್ ಸ್ಕಾಟ್ ಕೀ ಅವರ ಸ್ಮರಣಾರ್ಥ ಬಾಲ್ಟಿಮೋರ್ ಸೇತುವೆಗೆ ಅವರ ಹೆಸರು ಇಡಲಾಗಿದೆ.

LEAVE A REPLY

Please enter your comment!
Please enter your name here