ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ನಾಮಪತ್ರ ಸಲ್ಲಿಕೆ

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಅವರು ಕುದ್ರೋಳಿ ಗೋಕರ್ಣ ನಾಥ ಕ್ಷೇತ್ರದಿಂದ ಭಾರಿ ಮೆರವಣಿಗೆಯಲ್ಲಿ ಸಾಗಿ ಇಂದು ನಾಮಪತ್ರ ಸಲ್ಲಿಸಿದರು.

ಪದ್ಮರಾಜ್ ಅವರು ಕುದ್ರೋಳಿ ಕ್ಷೇತ್ರದಲ್ಲಿ ಕೇಂದ್ರದ ಮಾಜಿ ಸಚಿವ ಬಿ.ಜನಾರ್ಧನ ಪೂಜಾರಿ ಅವರ ಜೊತೆ ಗೋಕರ್ಣನಾಥ ದೇವರು, ಪರಿವಾರ ದೇವರಿಗೆ ಹಾಗೂ ನಾರಾಯಣ ಗುರುಗಳ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಗೆ ಮುನ್ನ ಹಮ್ಮಿಕೊಂಡ ಮೆರವಣಿಗೆಗೆ ಜನಾರ್ದನ ಪೂಜಾರಿ ಚಾಲನೆ ನೀಡಿದರು. ಗಾರುಡಿ ಗೊಂಬೆ ಬಳಗ, ಚೆಂಡೆವಾದನ, ಕೊಂಬು ಕಹಳೆಗಳು ಮೆರವಣಿಗೆ ಗೆ ಮೆರುಗು ನೀಡಿದವು. ಕಾಂಗ್ರೆಸ್ ಧ್ವಜ ಹಿಡಿದು ಜಯಘೋಷ ಕೂಗುತ್ತಾ ಕಾರ್ಯಕರ್ತರು ಮೆರವಣಿಗೆಯುದ್ದಕ್ಕೂ ಹೆಜ್ಜೆ ಹಾಕಿದರು. ಮೆರವಣಿಗೆಯಲ್ಲಿ ಕಾಂಗ್ರೆಸ್ ಪಕ್ಷದ ಧ್ವಜಗಳ ಜೊತೆ ತುಳುನಾಡ ಧ್ವಜವೂ ರಾರಾಜಿಸುತ್ತಿತ್ತು. ಈ ಸಂದರ್ಭ ಕಾಂಗ್ರೆಸ್ ರಾಜ್ಯ ಚುನಾವಣಾ ಉಸ್ತುವಾರಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ, ಜಿಲ್ಲಾ ಚುನಾವಣಾ ಉಸ್ತುವಾರಿ ಬಿ. ರಮಾನಾಥ ರೈ, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಕೆಪಿಸಿಸಿ ಉಪಾಧ್ಯಕ್ಷ ಐವನ್ ಡಿಸೊಜಾ, ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, ಗೇರು ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಮಾಜಿ ಸಚಿವ ಅಭಯಚಂದ್ರ ಜೈನ್, ಶಾಸಕ ಅಶೋಕ್ ಕುಮಾರ್ ರೈ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಮಾಜಿ ಶಾಸಕ ಜೆ.ಆರ್. ಲೋಬೊ, ವಿಜಯ್ ಕುಮಾರ್ ಶೆಟ್ಟಿ, ಡಾ. ರಘು, ಇನಾಯತ್ ಆಲಿ, ರಕ್ಷಿತ್ ಶಿವರಾಮ್, ಮಿಥುನ್ ರೈ ಮೊದಲಾದವರು ಉಪಸ್ಥಿತರಿದ್ದರು.

ಪದ್ಮರಾಜ್ ಅವರು ಬುಧವಾರ ಬೆಳಿಗ್ಗೆ ಶರವು ಮಹಾಗಣಪತಿ ದೇವಸ್ಥಾನ, ಮಹಾಲಿಂಗೇಶ್ವರ ದೇವಸ್ಥಾನ, ಕಂಕನಾಡಿ ಬ್ರಹ್ಮಬೈದರ್ಕಳ ಗರೋಡಿಗಳಿಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್,’ ಪ್ರಜಾಪ್ರಭುತ್ವದ ಕಗ್ಗೊಲೆಗೆ ಬಿಜೆಪಿ ಪ್ರಯತ್ನ ನಡೆಸುತ್ತಿದೆ. ಸುಳ್ಳು ಪ್ರಕರಣ ದಾಖಲಿಸಿ ವಿರೋಧ ಪಕ್ಷದವರನ್ನು ಜೈಲಿಗೆ ಕಳುಹಿಸುವ ಹುನ್ನಾರ ನಡೆಸಿದೆ. ಕೇಂದ್ರ ಸರ್ಕಾರವು ರಾಜ್ಯಕ್ಕೆ ಅನುದಾನ‌ ಹಂಚಿಕೆಯಲ್ಲಿ ತಾರತಮ್ಯ ನಡೆಸಿರುವುದು ಜನರ ಗಮನದಲ್ಲಿದೆ. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ 135 ಸ್ಥಾನ ಗೆದ್ದು ಜಯಭೇರಿ ಭಾರಿಸಿದಂತೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 20 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ. ಪದ್ಮರಾಜ್ ಆರ್.ಪೂಜಾರಿ ಅವರೂ ಗೆಲುವು ಸಾಧಿಸಲಿದ್ದಾರೆ ಎಂದು ಹೇಳಿದ್ದಾರೆ.

ಅಭ್ಯರ್ಥಿ ಪದ್ಮರಾಜ್ ಮಾತನಾಡಿ,’ ಕಾರ್ಯಕರ್ತರ ಕಷ್ಟಗಳ ಅರಿವು ನನಗಿದೆ. ಗೆದ್ದ ಬಳಿಕ 60 ತಿಂಗಳ ಕಾಲ ನಿಮ್ಮ ಜೊತೆಗೇ ಇದ್ದು ಸಮಸ್ಯೆಗಳಿಗೆ ಸ್ಪಂದಿಸಲಿದ್ದೇನೆ. ಕಾಂಗ್ರೇಸ್ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನೇ ಮುಂದಿಟ್ಟು ಮತಯಾಚಿಸೋಣ. ಸರ್ವ ಧರ್ಮ ಸಮನ್ವಯ ಜಿಲ್ಲೆಯ ವೈಶಿಷ್ಟ್ಯ. ಅದನ್ನು ಪುನಃಸ್ಥಾಪನೆ ಮಾಡಲು ಪ್ರಯತ್ನಿಸೋಣ ಎಂದು ಹೇಳಿದ್ದಾರೆ. ಬಳಿಕ ಅಭ್ಯರ್ಥಿ ಪದ್ಮರಾಜ್ ಅವರು ಪಕ್ಷದ ಮುಖ‌ಂಡರ ಜತೆ ತೆರಳಿ ಜಿಲ್ಲಾ ಚುನಾವಣಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ಅವರಿಗೆ ನಾಮಪತ್ರ ಸಲ್ಲಿಸಿದರು.

LEAVE A REPLY

Please enter your comment!
Please enter your name here