ಮಂಡ್ಯ ಲೋಕಸಭೆ ಕ್ಷೇತ್ರದಿಂದ ಹಿಂದೆ ಸರಿದ ಸುಮಲತಾ-ಮಂಡ್ಯ ಬಿಟ್ಟು ನಾನು ಎಲ್ಲೂ ಹೋಗಲ್ಲ-ಬಿಜೆಪಿಗೆ ನನ್ನ ಬೆಂಬಲ-ಸುಮಲತಾ ಅಂಬರೀಷ್

ಮಂಗಳೂರು(ಮಂಡ್ಯ): ಇಂದು ಮಂಡ್ಯದಲ್ಲಿ ನಡೆದ ಬೆಂಬಲಿಗರ ಬಹಿರಂಗ ಸಭೆಯಲ್ಲಿ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಮಂಡ್ಯ ಲೋಕಸಭಾ ಕ್ಷೇತ್ರದ ಹಾಲಿ ಸಂಸದೆ ಸುಮಲತಾ ಅಂಬರೀಷ್, ತನ್ನ ಮುಂದಿನ ರಾಜಕೀಯ ನಡೆಯನ್ನು ಘೋಷಿಸಿದ್ದಾರೆ. ಇದಕ್ಕೂ ಮೊದಲು ಸಭೆಯಲ್ಲಿ ಸುಮಲತಾ ಸಾಧನೆ ಕುರಿತ ‘ನಮ್ಮ ಮಂಡ್ಯ ನಮ್ಮ ಆದ್ಯತೆ’ ಹೆಸರಿನ ಪುಸ್ತಕ ಬಿಡುಗಡೆ ಮಾಡಲಾಯಿತು. ಆ ಬಳಿಕ ಸಂಸದೆಯಾಗಿ ಐದು ವರ್ಷಗಳ ಸಾಧನೆ ಕುರಿತ ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಲಾಯಿತು.

ಬಳಿಕ ಸೇರಿದ್ದ ಜನರನ್ನುದ್ದೇಶಿಸಿ ಮಾತನಾಡಿದ ಸಂಸದೆ ಸುಮಲತಾ, ನಾನು ಈ ಬಾರಿಯ ಚುನಾವಣೆಯಲ್ಲಿ ಆಕಸ್ಮಿಕವಾಗಿ ರಾಜಕೀಯ ಪ್ರವೇಶ ಮಾಡಿದೆ. ಐದು ವರ್ಷಗಳ ಹಿಂದೆ ನನಗೆ ಐತಿಹಾಸಿಕ ಗೆಲುವು ನೀಡಿದ್ರಿ. ನನಗೆ ಐತಿಹಾಸಿಕ ಗೆಲುವು ಕೊಡುಗೆಯಾಗಿ ಕೊಟ್ಟಿದ್ದೀರಿ. ಐದು ವರ್ಷಗಳಲ್ಲಿ ನನ್ನ ಜೊತೆಗಿದ್ದ ಎಲ್ಲರಿಗೂ ವಂದನೆಗಳು. ಜನಸಾಮಾನ್ಯರ ಸಮಸ್ಯೆಗಳ ಪರ ನಾನು ನಿಂತಿದ್ದೇನೆ. ಜಿಲ್ಲೆ ಅಭಿವೃದ್ಧಿ ಮಾಡುವುದಷ್ಟೇ ನನ್ನ ಮನಸ್ಸಿನಲ್ಲಿದ್ದಿದ್ದು. ಕೆಆರ್​ಎಸ್​ ಡ್ಯಾಂ ಸಂರಕ್ಷಣೆ, ಅಕ್ರಮ ಗಣಿಗಾರಿಕೆ ವಿರುದ್ಧ ಯುದ್ಧವನ್ನೇ ಮಾಡಿದ್ದೇನೆ. ಮೈಷುಗರ್​ ಕಾರ್ಖಾನೆಗಾಗಿ ಎರಡು ವರ್ಷ ಹೋರಾಡಿದ್ದೇನೆ ಎಂದು ತಿಳಿಸಿದ್ದಾರೆ.

2019ರಲ್ಲಿ ಅದೊಂದು ಬೇರೆ ತರಹದ ಸವಾಲಾಗಿತ್ತು. ಈಗ ಬದಲಾದ ಪರಿಸ್ಥಿತಿಯಲ್ಲಿ ಮತ್ತೊಂದು ಸವಾಲು ಎದುರಿಸುತ್ತಿದ್ದೇನೆ. ಕೊನೆಗಳಿಗೆವರೆಗೂ ಬಿಜೆಪಿ ಟಿಕೆಟ್ ಉಳಿಸಿಕೊಳ್ಳಲು ಹೋರಾಟ ಮಾಡಿದೆ. ಬೆಂಗಳೂರು ಉತ್ತರ, ಮೈಸೂರು, ಚಿಕ್ಕಬಳ್ಳಾಪುರ ನಿಂತುಕೊಳ್ಳಲು ಹೇಳಿದರು. ನನಗೆ ಬೇರೆ ಬೇರೆ ಕ್ಷೇತ್ರದ ಆಫರ್​ ನೀಡಿದರು. ನಾನು ಮಂಡ್ಯ ಬಿಟ್ಟು ಎಲ್ಲೂ ಹೋಗುವುದಿಲ್ಲ. ಗೆದ್ದರು, ಸೋತರು ಮಂಡ್ಯ ಬಿಟ್ಟು ಎಲ್ಲೂ ಹೋಗಲ್ಲ. ನಾನು ಎಲ್ಲರಂತೆ ಟಿಪಿಕಲ್‌ ರಾಜಕಾರಣಿ ಅಲ್ಲ. ನನಗೆ ಬಿಜೆಪಿ ಹೈಕಮಾಂಡ್‌ ಬೇರೆ ಕಡೆಗೆ ಸ್ಪರ್ಧೆ ಮಾಡಲು ಸಾಕಷ್ಟು ಅವಕಾಶವನ್ನು ನೀಡಿತ್ತು. ಆದರೆ, ನನಗೆ ಮಂಡ್ಯ ಬಿಟ್ಟು ರಾಜಕಾರಣ ಮಾಡಲು ಆಗುವುದಿಲ್ಲ. ನಿಮ್ಮನ್ನು ಹಾಗೂ ಅಂಬರೀಶ್‌ ಅವರ ಕನಸನ್ನು ಬಿಟ್ಟು ಹೋದರೆ ಯಾರೂ ಮೆಚ್ಚಲಾರರು. ಹಾಗಾಗಿ ನಾನು ಮಂಡ್ಯದಲ್ಲಿಯೇ ಇರುತ್ತೇನೆ ಎಂದು ಸುಮಲತಾ ಅಂಬರೀಶ್‌ ಹೇಳಿದರು. ಇಂದು ನಾನು ಸಂಸದೆ. ಆದರೆ, ನಾಳೆ ನನ್ನ ಜಾಗಕ್ಕೆ ಇನ್ನೊಬ್ಬರು ಬರುತ್ತಾರೆ. ಕೊನೆಯವರೆಗೂ ನಾನು ಅಂಬರೀಶ್‌ ಪತ್ನಿ ಎಂಬುದನ್ನು ಯಾರಿಂದಲೂ ಕಿತ್ತುಕೊಳ್ಳಲಾಗದು ಎಂದು ಸುಮಲತಾ ಅಂಬರೀಶ್‌ ಹೇಳಿದ್ದಾರೆ.

ನನ್ನ ಮುಂದಿನ ದಾರಿ ಏನೆಂಬುದನ್ನು ನೋಡಿದೆ. ಸ್ವತಂತ್ರ ಸ್ಪರ್ಧೆ ಮಾಡುವುದು ಸೂಕ್ತ ಅಲ್ಲ ಎಂದೆನಿಸಿತು. ಕಾಂಗ್ರೆಸ್‌ನವರೇ ನನ್ನನ್ನು ಬೇಡ ಎಂದ ಮೇಲೆ ಆ ಪಕ್ಷಕ್ಕೆ ನಾನು ಎಂದೂ ಹೋಗಲಾರೆ. ಆದರೆ, ನಾನು ಪಕ್ಷೇತರವಾಗಿ ಸ್ಪರ್ಧೆ ಮಾಡಿ ಗೆದ್ದಿದ್ದರೂ ನನಗೆ ನನ್ನ ಕ್ಷೇತ್ರಕ್ಕೆ 4 ಸಾವಿರ ಕೋಟಿ ರೂಪಾಯಿ ಅನುದಾನವನ್ನು ಬಿಜೆಪಿ ಕೊಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಒಂದೇ ಒಂದು ಭ್ರಷ್ಟಾಚಾರದ ಕಪ್ಪು ಚುಕ್ಕಿ ಇಲ್ಲ. ನನ್ನ ಬೆಂಬಲಕ್ಕೆ ಸದಾ ಇದ್ದಾರೆ. ಅಲ್ಲದೆ, ನಾನು ಪಕ್ಷೇತರವಾಗಿ ಸ್ಪರ್ಧೆ ಮಾಡುವುದು ಬೇಡ ಎಂದು ಸ್ವತಃ ಪ್ರಧಾನಿಯವರೇ ಕರೆದು ಹೇಳಿದ್ದಾರೆ. ಒಬ್ಬ ಪ್ರಧಾನಿಯೇ ನನಗೆ ಗೌರವ ಕೊಡುವಾಗ ನನಗೆ ಇನ್ನೇನು ಬೇಕು? ಹೀಗಾಗಿ ಈ ತೀರ್ಮಾನವನ್ನು ಕೈಗೊಂಡಿದ್ದೇನೆ. ಯಾರೇ ಬರಲಿ, ಎಲ್ಲಿಯೇ ಇರಲಿ. ಇಂಡಿಯಾ ಅಂದ್ರೆ ಮಂಡ್ಯ, ಮಂಡ್ಯ ಅಂದರೆ ಇಂಡಿಯಾ ಎಂಬಂತೆ ಕೆಲಸ ಮಾಡಿದ್ದೇನೆ. ನನಗೆ ಐದು ವರ್ಷಗಳ ಕಾಲ ಸಹಕಾರ ನೀಡಿದ, ಕಷ್ಟಕ್ಕೆ ನಿಂತ ಎಲ್ಲರಿಗೂ ಅಭಿನಂದನೆಯನ್ನು ಸಲ್ಲಿಸುತ್ತೇನೆ. ಒಬ್ಬ ಪಕ್ಷೇತರ ಅಭ್ಯರ್ಥಿಯಾಗಿ ನಾನು ನಿಂತಾಗ ಸವಾಲುಗಳು ಬೆಟ್ಟದಷ್ಟಿತ್ತು. ಆದರೆ, ಜನರು ನನ್ನ ಕೈಬಿಡಲಿಲ್ಲ. ಸುಮಾರು 7 ಲಕ್ಷಕ್ಕಿಂತ ಹೆಚ್ಚಿನ ಮತಗಳನ್ನು ಹಾಕಿ 1.25 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಿದ ಮಂಡ್ಯ ಜಿಲ್ಲೆಯ ಮತದಾರ ಪ್ರಭುವಿಗೆ ನನ್ನ ಅನಂತಾನಂತ ಧನ್ಯವಾದಗಳು ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here