ಮಂಗಳೂರು(ವಿಜಯಪುರ): ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಕೊಳವೆಬಾವಿಗೆ ಬಿದ್ದಿರುವ 2 ವರ್ಷದ ಮಗು ಸಾತ್ವಿಕ್ ನನ್ನು ಜೀವಂತವಾಗಿ ಮೇಲೆತ್ತುವಲ್ಲಿ ರಕ್ಷಣಾ ತಂಡ ಯಶಸ್ವಿಯಾಗಿದೆ.
ಎಸ್‌ಡಿಆರ್‌ಎಫ್, ಎನ್ಡಿಆರ್‌ಎಫ್, ಅಗ್ನಿಶಾಮಕ ದಳ, ಪೊಲೀಸ್ ಇಲಾಖೆ ಸೇರಿದಂತೆ ರಕ್ಷಣಾ ಕಾರ್ಯಾಚರಣಾ ತಂಡವು ನಿರಂತರ 20 ಗಂಟೆಗಳ ಅಹೋರಾತ್ರಿ ಕಾರ್ಯಾಚರಣೆ ಫಲ ನೀಡಿದೆ. ಮೇಲೆತ್ತಿದ ಕೂಡಲೇ ಸನ್ನದ್ಧರಾಗಿದ್ದ ವೈದ್ಯರ ತಂಡ ಮಗುವಿಗೆ ಸ್ಥಳದಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಆ್ಯಂಬುಲೆನ್ಸ್ ಮೂಲಕ ತಾಲೂಕು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಮಗು ಕೊಳವೆಬಾವಿಗೆ ಬಿದ್ದಿರುವ ವಿಷಯ ತಿಳಿಯುತ್ತಿದ್ದಂತೆ ಎ.3ರಂದು ಸಂಜೆ 6 ಗಂಟೆಗೆ ರಕ್ಷಣೆ ಕಾರ್ಯಾಚರಣೆ ಆರಂಭಿಸಲಾಗಿತ್ತು. ಕಾರ್ಯಾಚರಣೆಗೆ ಅಡ್ಡಿಯಾಗಿದ್ದ ಕಲ್ಲು ಬಂಡೆಗಳನ್ನು ಕೊರೆದ ತಂಡವು ಇಂದು ಬೆಳಿಗ್ಗೆಯೇ ಮಗುವನ್ನು ಸಮೀಪಿಸಿತ್ತು. ಈ ವೇಳೆ ಮಗುವಿಗೆ ನಿರಂತರ ಆಕ್ಸಿಜನ್ ಪೊರೈಕೆ ಮಾಡಲಾಗುತ್ತಿತ್ತು. ಅಂತಿಮವಾಗಿ ಕೊಳವೆ ಬಾವಿಯ ಪೈಪ್ ಅನ್ನು ಕತ್ತರಿಸಿ ಮಗುವನ್ನು ಮೇಲೆತ್ತಲಾಯಿತು. ಆತಂಕದಲ್ಲಿದ್ದ ಮಗುವಿನ ಪೋಷಕರು ಹಾಗೂ ಊರವರು ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ.