ಮಂಗಳೂರು: ಮನುಷ್ಯರ ದೇಹದ ಕೆಲವು ಭಾಗಗಳಲ್ಲಿ ಕೂದಲು ಬೆಳೆಯುವುದು ಸಾಮಾನ್ಯ. ಆದ್ರೆ ಇಲ್ಲೊಂದು ಮಗುವಿಗೆ ದೇಹ ಹಾಗೂ ಮುಖದ ತುಂಬಾ ದಟ್ಟವಾಗಿ ಕೂದಲು ಬೆಳೆದಿದೆ. ಗರ್ಭಾವಸ್ಥೆಯಲ್ಲಿ ಕಾಡು ಬೆಕ್ಕಿನ ಮಾಂಸವನ್ನು ತಿಂದಿದ್ದೇ, ನನ್ನ ಮಗ ಈ ಪರಿಸ್ಥಿತಿಗೆ ಬರಲು ಕಾರಣವೆಂದು ಮಗುವಿನ ತಾಯಿ ಹೇಳಿದ್ದಾರೆ. ಇಂತಹದ್ದೊಂದು ಘಟನೆ ಫಿಲಿಪ್ಪೀನ್ಸ್ ನಲ್ಲಿ ನಡೆದಿದ್ದು, ಇಲ್ಲಿನ ಜರೆನ್ ಎಂಬ ಎರಡು ವರ್ಷದ ಬಾಲಕ ಮುಖದ ತುಂಬಾ ದಟ್ಟವಾದ ಕೂದಲುಗಳನ್ನು ಹೊಂದಿದ್ದಾನೆ. ಇದಕ್ಕೆ ಕಾರಣ ʼವೆರ್ವುಲ್ಫ್ ಸಿಂಡ್ರೋಮ್ʼ. ಈ ಸಮಸ್ಯೆಯಿಂದ ಬಳಲುತ್ತಿರುವವರಿಗೆ ದೇಹದಾದ್ಯಂತ ಕೂದಲು ಬೆಳೆಯುತ್ತದೆ. ಆದರೆ ನನ್ನ ಮಗನ ಈ ಸ್ಥಿತಿಗೆ ಗರ್ಭಿಣಿಯಾಗಿದ್ದಾಗ ನಾನು ಕಾಡು ಬೆಕ್ಕಿನ ಮಾಂಸವನ್ನು ತಿಂದಿದ್ದೇ ಕಾರಣ ಎಂದು ಜರೆನ್ ನ ತಾಯಿ ಅಲ್ಮಾ ಗಮೊಂಗನ್ ಹೇಳಿದ್ದಾರೆ.
ಗರ್ಭಿಣಿಯಾಗಿದ್ದಾಗ ಅಲ್ಮಾ ಅವರಿಗೆ ಕಾಡು ಬೆಕ್ಕಿನ ಮಾಂಸವನ್ನು ತಿನ್ನುವ ಬಯಕೆ ಉಂಟಾಗಿತ್ತಂತೆ. ಹಾಗಾಗಿ ಆಕೆ ಹಳ್ಳಿಯವರಿಗೆ ಹೇಳಿ ಕಾಡು ಬೆಕ್ಕಿನ ಮಾಂಸವನ್ನು ತರಿಸಿ, ಅದನ್ನು ಪದಾರ್ಥ ಮಾಡಿ ತಿಂದು ತನ್ನ ಗರ್ಭಿಣಿ ಬಯಕೆಯನ್ನು ಈಡೇರಿಸಿಕೊಂಡಿದ್ದಳು. ಈ ಕಾಡು ಬೆಕ್ಕಿನ ಮಾಂಸವನ್ನು ತಿಂದ ಕಾರಣ ನನ್ನ ಮಗನಿಗೆ ಶಾಪ ತಟ್ಟಿದೆ, ಅದರಿಂದ ಮಗುವಿನ ಮೈ ತುಂಬಾ ಕೂದಲು ಬೆಳೆದಿದೆ ಎಂದು ಅಲ್ಮಾ ತನ್ನನ್ನು ತಾನು ವಿಷಾಧಿಸಿದ್ದಾರೆ. ಆದರೆ ಈ ಮಗು ವೆರ್ ವುಲ್ಫ್ ಅಥವಾ ಹೈಪರ್ಟೀಕೋಸಿಕ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದು, ಈ ಕಾರಣದಿಂದ ಮುಖದಲ್ಲಿ ದಟ್ಟವಾಗಿ ಕೂದಲು ಬೆಳೆಯುತ್ತದೆ. ಇದಕ್ಕೂ ನಿಮಗೂ ಯಾವುದೇ ಸಂಬಂಧವಿಲ್ಲ ಎಂದು ಅಲ್ಮಾ ಅವರನ್ನು ವೈದ್ಯರು ಸಮಾಧಾನ ಪಡಿಸಿದ್ದಾರೆ.
ಈ ಸ್ಥಿತಿಯು ಒಂದು ಬಿಲಿಯನ್ ಜನರಲ್ಲಿ ಒಬ್ಬರಿಗೆ ಕಾಣಿಸಿಕೊಳ್ಳುತ್ತದೆ. ಇಲ್ಲಿಯವರೆಗೆ ಕೇವಲ 50 ವೂಲ್ಫ್ ಸಿಂಡ್ರೋಮ್ ಪ್ರಕರಣಗಳು ವರದಿಯಾಗಿವೆ ಎಂದು ಡಾ. ರಾವೆಲಿಂಡಾ ಸೊರಿಯಾನೊ ಪೆರೆಜ್ ಹೇಳಿದ್ದಾರೆ. ಈ ಸಿಂಡ್ರೋಮ್ ಗೆ ಯಾವುದೇ ಚಿಕಿತ್ಸೆ ಇಲ್ಲದಿದ್ದರೂ, ಲೇಸರ್ ಹೇರ್ ರಿಮೂವಲ್ ಟ್ರೀಟ್ಮೆಂಟ್ ಮೂಲಕ ಮುಖದ ಮೇಲಿನ ಈ ಕೂದಲನ್ನು ತೆಗೆಯಬಹುದಾಗಿದೆ.