ಕಾಶಿಯಲ್ಲಿ ಪೊಲೀಸರಿಗೆ ಧೋತಿ-ಕುರ್ತಾ ಸಮವಸ್ತ್ರ ಕಡ್ಡಾಯ – ಅಖಿಲೇಶ್ ಯಾದವ್ ಟೀಕೆ

ಮಂಗಳೂರು(ವಾರಾಣಸಿ): ದೇಶದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಉತ್ತರ ಪ್ರದೇಶದ ಕಾಶಿ ವಿಶ್ವನಾಥ ದೇಗುಲದಲ್ಲಿ ಕಾರ್ಯನಿರ್ವಹಿಸುವ ಪೊಲೀಸರಿಗೆ ಹೊಸ ಸಮವಸ್ತ್ರ ನೀತಿಯನ್ನು ಜಾರಿಗೊಳಿಸಲಾಗಿದೆ.

ಕಾಶಿ ವಿಶ್ವನಾಥ ದೇಗುಲದ ಗರ್ಭಗುಡಿಯ ಸಮೀಪ ಕಾರ್ಯ ನಿರ್ವಹಿಸುವ ಪೊಲೀಸರು ಕಡ್ಡಾಯವಾಗಿ ಧೋತಿ-ಕುರ್ತಾ ಧರಿಸಬೇಕೆಂಬ ನಿಯಮವನ್ನು ಜಾರಿಗೆ ಮಾಡಿ ಪೊಲೀಸ್ ಇಲಾಖೆ ಆದೇಶ ನೀಡಿದೆ. ಈ ಕುರಿತು ಮಾಹಿತಿ ನೀಡಿರುವ ವಾರಾಣಾಸಿಯ ಜ್ಞಾನವಾಪಿ ಎಸ್ಪಿ ಶೈಲೇಂದ್ರ ಕುಮಾರ್ ರಾಯ್, ಈ ವಸ್ತ್ರ ಸಂಹಿತೆ ನಿಯಮ ದೇವಾಲಯದ ಗರ್ಭಗುಡಿಯ ಬಳಿ ಕಾರ್ಯನಿರ್ವಹಿಸುವ ಪೊಲೀಸರಿಗೆ ಮಾತ್ರ ಅನ್ವಯವಾಗುತ್ತದೆ. ಇನ್ನುಳಿದ ಪೊಲೀಸರು ತಮ್ಮ ಸಾಮಾನ್ಯ ಸಮವಸ್ತ್ರ ಧರಿಸಿ ಕಾರ್ಯನಿರ್ವಹಿಸುತ್ತಾರೆ ಎಂದು ತಿಳಿಸಿದ್ದಾರೆ. ಈ ಹಿಂದೆ ಪೊಲೀಸರು ಬೆಲ್ಟ್ ಧರಿಸಿ, ಇಲಾಖೆ ಸಮವಸ್ತ್ರದಲ್ಲಿಯೇ ಗರ್ಭಗುಡಿ ಬಳಿ ಕರ್ತವ್ಯ ನಿರ್ವಹಿಸುತ್ತಿರುವುದಕ್ಕೆ ಭಾರಿ ವಿರೋಧ ವ್ಯಕ್ತವಾಗಿತ್ತು. ಸದ್ಯ ಪೊಲೀಸ್ ಇಲಾಖೆಯ ಈ ಹೊಸ ನಿಯಮವನ್ನು ದೇವಾಲಯದ ಆಡಳಿತ ಮಂಡಳಿ ಸ್ವಾಗತಿಸಿದೆ. ಈ ನಿಯಮ ಸೋಮವಾರದಿಂದಲೇ ಜಾರಿಯಾಗಿದ್ದು, ಧೋತಿ-ಕುರ್ತಾ ಧರಿಸಿ ಕಾರ್ಯನಿರ್ವಹಿಸುತ್ತಿದ್ದ ಪೊಲೀಸರನ್ನು ಕಂಡ ಭಕ್ತರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.‌

ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಅಖಿಲೇಶ್ ಯಾದವ್, “ಪೊಲೀಸ್ ಕೈಪಿಡಿಯ ಪ್ರಕಾರ, ಪೊಲೀಸ್ ಅಧಿಕಾರಿಗಳು ಅರ್ಚಕರ ರೀತಿ ವಸ್ತ್ರ ತೊಡುವುದು ಸರಿಯೆ? ಇಂತಹ ಆದೇಶ ನೀಡಿರುವವರನ್ನು ಅಮಾನತುಗೊಳಿಸಬೇಕು. ಒಂದು ವೇಳೆ ನಾಳೆ ಯಾರಾದರೂ ವಂಚಕನು ಇದರ ಲಾಭ ಪಡೆದು ಮುಗ್ಧ ಜನರನ್ನು ಲೂಟಿ ಮಾಡಿದರೆ, ಉತ್ತರ ಪ್ರದೇಶ ಸರಕಾರ ಹಾಗೂ ಆಡಳಿತವು ಏನು ಉತ್ತರ ನೀಡುತ್ತದೆ? ಇದು ಖಂಡನೀಯ!” ಎಂದು ಟೀಕಿಸಿದ್ದಾರೆ.

LEAVE A REPLY

Please enter your comment!
Please enter your name here