ಇಂದು ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ-ಎನ್‌ಡಿಎ ಅಭ್ಯರ್ಥಿಗಳ ಪರ ಮತಯಾಚನೆ

ಮಂಗಳೂರು(ಬೆಂಗಳೂರು): ಪ್ರಧಾನಿ ನರೇಂದ್ರ ಮೋದಿ ಇಂದು (ಏ.14) ರಾಜ್ಯಕ್ಕೆ ಆಗಮಿಸಲಿದ್ದು, ಸಂಜೆ 4.30 ರಿಂದ 5.20ರವರೆಗೆ ಮೈಸೂರಿನಲ್ಲಿ ಸಮಾವೇಶ ನಡೆಸಲಿದ್ದಾರೆ. ಆ ಮೂಲಕ ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ಅಬ್ಬರದ ಪ್ರಚಾರ ಮಾಡಲಿದ್ದಾರೆ. ಹಳೇ ಮೈಸೂರು ಭಾಗದ ಎನ್‌ಡಿಎ ಅಭ್ಯರ್ಥಿಗಳ ಪರ ಮತಯಾಚಿಸಲಿದ್ದಾರೆ. ಈ ವೇಳೆ ಮಾಜಿ ಪ್ರಧಾನಿ ದೇವೇಗೌಡರು ಮೋದಿಗೆ ಸಾಥ್ ನೀಡಲಿದ್ದಾರೆ.

ಸಂಜೆ 4.30 ರಿಂದ 5.20 ರವರೆಗೆ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಸಾರ್ವಜನಿಕ ಸಮಾವೇಶ ಆಯೋಜಿಸಲಾಗಿದ್ದು, ಹಳೇ ಮೈಸೂರು ಭಾಗವನ್ನೇ ಗುರಿಯಾಗಿಸಿ ಪ್ರಧಾನಿ ಮೋದಿ ಮತಯಾಚನೆ ಮಾಡಲಿದ್ದಾರೆ. ಬಳಿಕ ಮೈತ್ರಿ ಕಾರ್ಯಕರ್ತರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಇನ್ನು ಸಮಾವೇಶದಲ್ಲಿ 3 ಕ್ಷೇತ್ರಗಳಿಂದ 1 ಲಕ್ಷಕ್ಕೂ ಹೆಚ್ಚು ಜನರನ್ನ ಸೇರಿಸಲು ಪ್ಲ್ಯಾನ್ ಮಾಡಲಾಗಿದೆ.

ಮಂಗಳೂರಿನಲ್ಲಿ ಪ್ರಧಾನಿ ಮೋದಿ ಭರ್ಜರಿ ರೋಡ್ ಶೋ
ಇನ್ನು ಮೈಸೂರಿನ ಸಮಾವೇಶದ ಬಳಿಕ ಪ್ರಧಾನಿ ಮೋದಿ ಮಂಗಳೂರಿಗೆ ತೆರಳಲಿದ್ದು, ಬಿಜೆಪಿ ಅಭ್ಯರ್ಥಿಗಳ ಪರವಾಗಿ ಅಬ್ಬರದ ರೋಡ್ ಶೋ ನಡೆಸಲಿದ್ದಾರೆ. ಸಂಜೆ 7:45 ಕ್ಕೆ ನಾರಾಯಣಗುರು ವೃತ್ತದಲ್ಲಿ ನಾರಾಯಣಗುರು ಪ್ರತಿಮೆಗೆ ಮಾಲಾರ್ಪಣೆ ಮಾಡಿ ರೋಡ್ ಶೋ ಆರಂಭಿಸಲಿದ್ದಾರೆ. ಮಹಾನಗರ ಪಾಲಿಕೆ ಮುಂಭಾಗದಿಂದ ಬಲ್ಲಾಳ ಬಾಗ್, ಎಂ.ಜಿ.ರಸ್ತೆಯಾಗಿ ಪಿವಿಎಸ್ ಸರ್ಕಲ್ ಬಳಿ ಬಲಕ್ಕೆ ತಿರುಗಿ ರಾಷ್ಟ್ರಕವಿ ಗೋವಿಂದ ಪೈ ಸರ್ಕಲ್​​ವರೆಗೆ ರೋಡ್ ಶೋ ಸಾಗಲಿದೆ. ರಾತ್ರಿ 8:30ರೊಳಗೆ ರೋಡ್ ಶೋ ಮುಗಿಯಲಿದೆ. ಈಗಾಗಲೇ ಮಂಗಳೂರಿನಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಮೈಸೂರು, ಮಂಗಳೂರು, ಬೆಂಗಳೂರಿನಲ್ಲಿ ಗೋ ಬ್ಯಾಕ್ ಮೋದಿ ಎಂದು ಕಾಂಗ್ರೆಸ್ ಅಭಿಯಾನ ನಡೆಸಿದೆ. ಮೋದಿ ಆಗಮನದ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾತನಾಡಿ, ಮೋದಿ ಮೈಸೂರಿಗೆ ಬರ್ತಿರೋದಕ್ಕೆ ನನ್ನ ಅಭ್ಯಂತರವಿಲ್ಲ, ಆದರೆ ರಾಜ್ಯಕ್ಕೆ ಏನ್ ಕೊಡುಗೆ ಕೊಟ್ಟಿದ್ದಾರೆ? ಕರುನಾಡಿಗೆ ತೆರಿಗೆ ಹಂಚಿಕೆಯಲ್ಲಿ ಅನ್ಯಾಯ ಆಗಿದೆ ಎಂದು ಕಿಡಿಕಾರಿದ್ದಾರೆ.

LEAVE A REPLY

Please enter your comment!
Please enter your name here