ಮಂಗಳೂರು: ವಿಪರೀತ ಬಿಸಿಲಿನಿಂದ ತತ್ತರಿಸಿದ್ದ ಕರಾವಳಿಯ ಜನತೆಗೆ ಇಂದು ಮುಂಜಾನೆ ಸುರಿದ ಭಾರೀ ಮಳೆ ತಂಪೆರೆದಿದೆ. ಜಿಲ್ಲೆಯ ವಿವಿಧೆಡೆ ಶುಕ್ರವಾರ ಸಂಜೆಯ ವೇಳೆ ಸಿಡಿಲು ಸಹಿತ ಉತ್ತಮ ಮಳೆ ಸುರಿದಿದೆ. ಶನಿವಾರ ಮುಂಜಾನೆಯು 2 ಗಂಟೆಗೂ ಅಧಿಕ ಕಾಲ ಗುಡುಗು-ಮಿಂಚು ಸಹಿತ ಹಲವೆಡೆ ಧಾರಾಕಾರ ಮಳೆಯಾಗಿದೆ.
ಶುಕ್ರವಾರ ಸಂಜೆ ವೇಳೆಗೆ ಸುಳ್ಯ, ಕಡಬ, ಬೆಳ್ತಂಗಡಿ ತಾಲೂಕಿನ ವಿವಿಧೆಡೆ ಉತ್ತಮ ಮಳೆಯಾಗಿದೆ. ಬಂಟ್ವಾಳ, ಪುತ್ತೂರು ತಾಲೂಕಿನ ಕೆಲವು ಕಡೆ ಸಾಧಾರಣ ಮಳೆಯಾಗಿದೆ. ಕೆಲವೆಡೆ ಸ್ವಲ್ಪ ಸಮಯ ವಿದ್ಯುತ್ ಸರಬರಾಜು ಸ್ಥಗಿತಗೊಂಡಿತ್ತು. ಶುಕ್ರವಾರ ಚಾರ್ಮಾಡಿ, ನೆರಿಯ ಮುಂಡಾಜೆ, ಉಜಿರೆ, ಗುರಿಪಳ್ಳ, ಗೇರುಕಟ್ಟೆ, ತೋಟತ್ತಾಡಿ, ಚಿಬಿದ್ರೆ, ಕಡಿರುದ್ಯಾವರ, ದಿಡುಪೆ ಪರಿಸರದಲ್ಲಿ ಉತ್ತಮ ಮಳೆ ಸುರಿದಿದೆ. ಚಾರ್ಮಾಡಿ ಭಾಗದಲ್ಲಿ ಆಲಿಕಲ್ಲು ಸಹಿತ ಮಳೆಯಾದರೆ ನೆರಿಯ ಕಡೆ ಗಾಳಿ, ಗುಡುಗಿನ ಸಹಿತ ಮಳೆ ಬಿದ್ದಿದೆ. ಉಜಿರೆ ಧರ್ಮಸ್ಥಳ ಸುತ್ತಮುತ್ತ ಹನಿ ಮಳೆಯಾಗಿದೆ. ನಿಡಿಗಲ್-ಸೀಟು- ಸೋಮಂತಡ್ಕ ಪರಿಸರದಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವುದರಿಂದ ರಸ್ತೆಯನ್ನು ಸಂಪೂರ್ಣ ಅಗೆದು ಹಾಕಲಾಗಿದ್ದು, ವಾಹನ ಸವಾರರು ತೀವ್ರ ಪರದಾಟ ನಡೆಸುವಂತಾಯಿತು. ಸಂಜೆ ಬೀಸಿದ ಗಾಳಿ ಮಳೆಗೆ ಕನಕಮಜಲಿನಲ್ಲಿ ರಸ್ತೆಗೆ ಮರ, ವಿದ್ಯುತ್ ಕಂಬ ಉರುಳಿ ಸಂಚಾರಕ್ಕೆ ತಡೆ ಉಂಟಾಯಿತು.
ಗಾಳಿ ಮಳೆಯಿಂದಾಗಿ ಹಲವೆಡೆ ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಹಲವೆಡೆ ಮರಗಳು ಉರುಳಿಬಿದ್ದಿದ್ದು, ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು. ಮುಂದಿನ 3 ಗಂಟೆಗಳಲ್ಲಿ ದಕ್ಷಿಣ ಕನ್ನಡ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೊಡಗು, ಶಿವಮೊಗ್ಗ, ತುಮಕೂರು, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅಲ್ಲಲ್ಲಿ ಬಲವಾದ ಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಪ್ರಕಟನೆಯಲ್ಲಿ ತಿಳಿಸಿದೆ.