ಕಾದ ಇಳೆ-ತಂಪೆರೆದ ಮಳೆ-ಹಲವು ಜಿಲ್ಲೆಗಳಲ್ಲಿ ಮಳೆ-ಸಂಭ್ರಮಿಸಿದ ಜನತೆ

ಮಂಗಳೂರು(ಚಿತ್ರದುರ್ಗ/ಚಿಕ್ಕಮಗಳೂರು/ಶಿವಮೊಗ್ಗ): ಚಿತ್ರದುರ್ಗ ನಗರ ಸೇರಿ ಜಿಲ್ಲೆಯ ಕೆಲ ಭಾಗಗಳಲ್ಲಿ ಶುಕ್ರವಾರ ಗುಡುಗು, ಸಿಡಿಲು ಸಹಿತ ಬಿರುಸಿನ ಮಳೆಯಾಗಿದ್ದರೆ, ಚಿಕ್ಕಮಗಳೂರು ಜಿಲ್ಲೆಯ ಕೆಲವೆಡೆ ಆಲಿಕಲ್ಲು ಸಹಿತ ಮಳೆಯಾಗಿದೆ. ಬೇಸಿಗೆಯ ಬಿರು ಬಿಸಿಲಿನಿಂದ ಬಸವಳಿದಿದ್ದ ಜನರ ಮೊಗದಲ್ಲಿ ಮಂದಹಾಸ ಮೂಡಿದೆ.

ಚಿಕ್ಕಜಾಜೂರಿನಲ್ಲಿ ಆಲಿಕಲ್ಲು ಮಳೆ ಸುರಿದಿದ್ದು, ಜನರು ಹರ್ಷ ವ್ಯಕ್ತಪಡಿಸಿದರು. ಬಿರುಗಾಳಿಗೆ ನೂರಾರು ಅಡಿಕೆ ಹಾಗೂ ತೆಂಗಿನ ಮರಗಳು, ವಿದ್ಯುತ್‌ ಕಂಬಗಳು ಬಿದ್ದಿವೆ. ಚಿತ್ರದುರ್ಗ ನಗರದಲ್ಲಿ 15 ನಿಮಿಷಗಳ ಕಾಲ ಜೋರಾಗಿ ಮಳೆ ಸುರಿದಿದೆ. ಶಿವಮೊಗ್ಗ ಜಿಲ್ಲೆಯ ಬಹುತೇಕ ಕಡೆ ಮಳೆಯಾಗಿದ್ದು ನಗರದಲ್ಲಿ ಅರ್ಧ ಗಂಟೆ ಉತ್ತಮ ಮಳೆ ಸುರಿದಿದೆ. ಶಿಕಾರಿಪುರ, ರಿಪ್ಪನ್‌ಪೇಟೆ, ಕೋಣಂದೂರು, ಸೊರಬ ಸುತ್ತಮುತ್ತ ಮಳೆಯಾಗಿದೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ, ನ್ಯಾಮತಿ, ತ್ಯಾವಣಿಗೆಯಲ್ಲಿ ಒಂದು ತಾಸಿಗೂ ಹೆಚ್ಚು ಸಮಯ ಉತ್ತಮ ಮಳೆಯಾಗಿದೆ. ದಾವಣಗೆರೆ ನಗರದಲ್ಲಿ ಬಿರುಗಾಳಿ, ಗುಡುಗು ಸಮೇತ ಸಾಧಾರಣ ಮಳೆ ಸುರಿದಿದೆ. ಉತ್ತಮ ಮಳೆಯಾಗಿದ್ದರಿಂದ ಅನ್ನದಾತರು ಸಂಭ್ರಮಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಧಾರಾಕಾರ ಮಳೆಯಾಗಿದ್ದು, ಆಲ್ದೂರು ಸುತ್ತಮತ್ತ ಆಲಿಕಲ್ಲು ಸಹಿತ ಮಳೆ ಸುರಿದಿದೆ. ಬಿಸಿಲಿನಲ್ಲಿ ಬೆಳೆ ಉಳಿಸಿಕೊಳ್ಳಲು ಪರದಾಡುತ್ತಿದ್ದ ಕಾಫಿ ಬೆಳೆಗಾರರು ನಿಟ್ಟುಸಿರು ಬಿಟ್ಟಿದ್ದಾರೆ. ಮಾವಿನಗುಣಿ, ಆಲ್ದೂರು, ಅರೇನೂರು, ಕೆಳಗೂರು, ಶಂಕರ್ ಫಾಲ್ಸ್ ಸುತ್ತಮುತ್ತ ಮಳೆಯಾಗಿದೆ. ಕಾಫಿ ಗಿಡಗಳಲ್ಲಿ ಮೊಗ್ಗು ಅರಳಿ ಕಾಯಿ ಕಟ್ಟುವಿಕೆಗೆ ಈ ಮಳೆ ಅನುಕೂಲವಾಗಿದೆ. ಎನ್.ಆರ್.ಪುರ, ಬಾಳೆಹೊನ್ನೂರು ಸುತ್ತಮುತ್ತ ಗುಡುಗು ಸಹಿತ ಸಾಧಾರಣ ಮಳೆ ಸುರಿದಿದೆ. ಚಿಕ್ಕಮಗಳೂರು ನಗರ, ಕಡೂರು, ತರೀಕೆರೆ ಸುತ್ತಮುತ್ತ ತುಂತುರ ಮಳೆ ಸುರಿದು ತಂಪೆರೆದಿದೆ. ಗುರುವಾರ ರಾತ್ರಿ ಎನ್.ಆರ್.ಪುರ ತಾಲ್ಲೂಕಿನ ಹಲವೆಡೆ ಧಾರಾಕಾರ ಮಳೆಯಾಗಿದ್ದು, ಸಾಲು –ಸಾಲು ಮರಗಳು, ವಿದ್ಯುತ್ ಕಂಬಗಳು ಉರುಳಿ ಬಿದ್ದಿದೆ. ಬಾಳೆ ತೋಟವೊಂದು ಸಂಪೂರ್ಣ ಹಾಳಾಗಿದೆ.

ಬೀದರ್‌ ತಾಲ್ಲೂಕು ಹಾಗೂ ಔರಾದ್‌ ತಾಲ್ಲೂಕಿನ ಕೆಲ ಗ್ರಾಮಗಳಲ್ಲಿ ಶುಕ್ರವಾರ ಮಳೆಯಾಗಿದೆ. ಬೀದರ್‌ ತಾಲ್ಲೂಕಿನ ಬರೂರ ಗ್ರಾಮದ ಜಮೀನಿನಲ್ಲಿ ಮಧ್ಯಾಹ್ನ ಪುಷ್ಪಲತಾ ರವೀಂದ್ರ ರೆಡ್ಡಿ (50) ಅವರು ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಔರಾದ್‌ ತಾಲ್ಲೂಕಿನ ಚಿಕ್ಲಿ (ಜೆ) ತಾಂಡಾ ನಿವಾಸಿ ಭೀಮಲಾ (70) ಸಂಜೆ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ತಾಲ್ಲೂಕಿನ ಚಿಂತಾಕಿ ಹಾಗೂ ವಡಗಾಂವ್ ಹೋಬಳಿಯಲ್ಲಿ ಸಂಜೆ ಗಾಳಿ ಸಹಿತ ಮಳೆಯಾಗಿದೆ. ಬೀದರ್‌, ಭಾಲ್ಕಿ ತಾಲ್ಲೂಕಿನಲ್ಲಿ ಶುಕ್ರವಾರ ಮಧ್ಯಾಹ್ನ ಕೆಲ ಕಾಲ ತುಂತುರು ಮಳೆಯಾಗಿದೆ. ಕಲಬುರಗಿ ನಗರದಲ್ಲಿ ಬೆಳಗಿನ ಜಾವ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆ ಸುರಿದು, ವಾತಾವರಣವನ್ನು ತುಸು ತಂಪು ಮಾಡಿದೆ. ಚಿಂಚೋಳಿ, ಆಳಂದದಲ್ಲೂ ಕೆಲ ಕಾಲ ಮಳೆಯಾಗಿದೆ.

ಮೈಸೂರು ಭಾಗದ ಕೊಡಗು, ಚಾಮರಾಜನಗರ, ಹಾಸನ ಮತ್ತು ಮಂಡ್ಯದಲ್ಲಿ ಶುಕ್ರವಾರ ಕೆಲಹೊತ್ತು ಗುಡುಗು ಸಹಿತ ಮಳೆಯಾಗಿದೆ. ಮಳೆ ನಿರೀಕ್ಷೆಯಲ್ಲಿದ್ದ ರೈತರಲ್ಲಿ ಹರ್ಷ ಮೂಡಿದೆ. ಕೊಡಗು ಜಿಲ್ಲೆಯ ನಾಪೋಕ್ಲು ಪಟ್ಟಣದ ಸುತ್ತಮುತ್ತ, ಬೇತು, ಕೊಟ್ಟಮುಡಿ, ಬಲಮುರಿ, ಪಾಲೂರು ಸೇರಿದಂತೆ ಹಲವೆಡೆ ಸುಮಾರು 30 ನಿಮಿಷಗಳ ಕಾಲ ಮಳೆ ಸುರಿದಿದೆ. ಬೇತು ಗ್ರಾಮ ವ್ಯಾಪ್ತಿಯಲ್ಲಿ 2 ಸೆಂ.ಮೀ ಮಳೆಯಾಗಿದೆ. ಸುಂಟಿಕೊಪ್ಪ ವ್ಯಾಪ್ತಿಯಲ್ಲಿಯೂ ಮಳೆಯಾಗಿದೆ. ಮಳೆಯಿಂದಾಗಿ ಇಲ್ಲಿನ ಚೆರಿಯಪರಂಬುವಿನ ಜನರಲ್ ಕೆ.ಎಸ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕುಂಡ್ಯೋಳಂಡ ಕಪ್ ಹಾಕಿ ಪಂದ್ಯಾವಳಿಗೆ ಅಡ್ಡಿಯಾಗಿದೆ. ಸಮೀಪದ ಪಾಲೂರು ಗ್ರಾಮದಲ್ಲಿ ವಾರ್ಷಿಕ ಉತ್ಸವದ ನೃತ್ಯಬಲಿಯನ್ನು ಮಳೆಯಲ್ಲಿಯೇ ಗ್ರಾಮಸ್ಥರು ನೆರವೇರಿಸುವಂತಾಯಿತು. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ಕೇಂದ್ರ ಸ್ಥಾನ ಸೇರಿದಂತೆ ತಾಲ್ಲೂಕಿನ ಪಾರೆಕೊಪ್ಪಲು, ಅಂಕನಹಳ್ಳಿ, ಕಿರನಲ್ಲಿ, ಹರವೆ ಮಲ್ಲರಾಜ ಪಟ್ಟಣ, ಹುಣಸೇಕುಪ್ಪೆ, ಮೆಲ್ಲಹಳ್ಳಿ, ಹುಣಸೂರು ತಾಲ್ಲೂಕಿನ ಹನಗೋಡಿನಲ್ಲಿ ಬಿರುಸು ಮಳೆಯಾಗಿದೆ. ಶುಂಠಿ, ತಂಬಾಕು, ಬಾಳೆ, ರಾಗಿ ಬೆಳೆಗೆ ಅನುಕೂಲಕರ ವಾತಾವರಣ ನಿರ್ಮಾಣವಾಗಿದ್ದರಿಂದ ರೈತರಲ್ಲಿ ಹರ್ಷ ಮೂಡಿದೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ಹತ್ತು ನಿಮಿಷಗಳ ಕಾಲ ಮಳೆಯಾಗಿದೆ.

ಮಂಡ್ಯ ಜಿಲ್ಲೆಯ ನಾಗಮಂಗಲ ಹಾಗೂ‌ ಸುತ್ತಮುತ್ತ ಹಳ್ಳಿಗಳಲ್ಲಿ ಗುಡುಗು ಮಿಂಚು ಸಹಿತ ಸುಮಾರು ಒಂದು ಗಂಟೆ ಮಳೆಯಾಗಿದ್ದು, ಜನರು ಸಂಭ್ರಮಿಸಿದ್ದಾರೆ. ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಸುರಿಯುವ ಮಳೆಯ ನಡುವೆಯೇ ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ಜನ ಪಾಲ್ಗೊಂಡಿದ್ದರು. ಚನ್ನರಾಯ ಪಟ್ಟಣ, ಹಾಸನ, ಮೈಸೂರು ನಗರದಲ್ಲೂ ಮಳೆಯಾಗಿದೆ.

ಸುಡು ಬಿಸಿಲಿನಿಂದ ಕಂಗೆಟ್ಟಿದ್ದ ಸಿಲಿಕಾನ್ ಸಿಟಿಯಲ್ಲಿ ಶುಕ್ರವಾರ ವರ್ಷದ ಮೊದಲ ಮಳೆಯಾಗಿದೆ. ಅಲ್ಲದೇ ಮಾಗಡಿ ರಸ್ತೆ, ಯಲಹಂಕ, ಕೆಂಗೇರಿ ಸೇರಿದಂತೆ ಕೆಲವು ಭಾಗಗಳಲ್ಲಿ ತುಂತುರು ಮಳೆಯ ಸಿಂಚನವಾಗಿದೆ. ಬಿಸಿಲ ಬೇಗೆಯಿಂದ ತಲ್ಲಣಗೊಂಡಿದ್ದ ಜನ ತುಸು ಈ ಮಳೆಯಿಂದ ನಿರಾಳರಾಗಿದ್ದಾರೆ. ಕೆಂಗೇರಿ, ನಾಗದೇವನಹಳ್ಳಿ, ಹುಣಸಮಾರನಹಳ್ಳಿ, ಅರಕೆರೆ, ರಾಜಾಧಿನುಕುಂಟೆ, ಬೆಟ್ಟ ಹಲಸೂರು, ಸೊನ್ನಪ್ಪನಹಳ್ಳಿ, ಯಲಹಂಕ ವ್ಯಾಪ್ತಿಯ ಕೆಲವು ಕಡೆ ಸಂಜೆ 5 ಗಂಟೆ ಸುಮಾರಿಗೆ ತುಂತುರು ಮಳೆಯಾಗಿದೆ. ಹಲವು ಭಾಗಗಳಲ್ಲಿ ಮೋಡ ಕವಿದ ವಾತಾವರಣವಿದ್ದು, ಏಪ್ರಿಲ್‌ 22 ರವರೆಗೆ ಬೆಂಗಳೂರು ನಗರದ ಹಲವೆಡೆ ಹಗುರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

LEAVE A REPLY

Please enter your comment!
Please enter your name here